Advertisement

ಶಾಲೆ ಮಕ್ಕಳು ಬಳಸುವ ನೀರಿನ ಟ್ಯಾಂಕ್‌ಗೆ ವಿಷ!

09:07 PM Jun 17, 2019 | Lakshmi GovindaRaj |

ಹುಣಸೂರು: ವಸತಿ ಶಾಲೆಯ ಓವರ್‌ಹೆಡ್‌ ಟ್ಯಾಂಕ್‌ನ ನೀರಿಗೆ ದುಷ್ಕರ್ಮಿಗಳು ವಿಷ ಬೆರೆಸಿರುವ ಆಘಾತಕಾರಿ ಘಟನೆ ಸಂಭವಿಸಿದ್ದು, ವಿಷ ಮಿಶ್ರಿತ ನೀರಿನ ವಾಸನೆಯಿಂದ ಎಚ್ಚೆತ್ತ ಸಿಬ್ಬಂದಿಗಳಿಂದಾಗಿ ಭಾರೀ ಅನಾಹುತ ತಪ್ಪಿದೆ. ತಾಲೂಕಿನ ಗಾವಡಗೆರೆಯ ಗುರುಲಿಂಗ ಜಂಗಮ ಮಠಕ್ಕೆ ಸೇರಿದ ವಸತಿ ಶಾಲೆಯಲ್ಲಿ ಘಟನೆ ಜರುಗಿದ್ದು, ಗ್ರಾಮಾಂತರ ಪೊಲೀಸರಿಗೆ ರಕ್ಷಣೆ ಒದಗಿಸುವಂತೆ ಶಾಲೆಯ ಆಡಳಿತಾಧಿಕಾರಿ ದೂರು ನೀಡಿದ್ದಾರೆ.

Advertisement

ಘಟನೆ ವಿವರ: ಶ್ರೀ ಮಠದ ವಸತಿ ಉಚಿತ ಶಾಲೆಯಲ್ಲಿ 60 ಹೆಣ್ಣು ಮಕ್ಕಳು ಸೇರಿದಂತೆ ರಾಜ್ಯದ ವಿವಿಧೆಡೆಯ 360 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಸತಿ ಶಾಲೆಯಲ್ಲಿ ಭಾನುವಾರ ಸಂಜೆ ಎಂದಿನಂತೆ ರಾತ್ರಿ ಊಟಕ್ಕೆ ಅಡುಗೆ ಮಾಡಲು ಅಡುಗೆ ಸಿಬ್ಬಂದಿ ಅನ್ನ ತಯಾರಿಸುವ ಬಾಯ್ಲರ್‌ಗೆ ನೀರು ತುಂಬಿಸುವ ವೇಳೆ ನೀರಿನ ವಾಸನೆ ಬಂದಿದೆ. ಅನುಮಾನಗೊಂಡು ಮಠದಲ್ಲೇ ಇದ್ದ ನಟರಾಜಸ್ವಾಮೀಜಿ ಅವರಿಗೆ ಈ ವಿಷ ತಿಳಿಸಿದ್ದಾರೆ.

ಅವರೂ ಕೂಡ ಪರಿಶೀಲಿಸಿದಾಗಲೂ ವಾಸನೆ ಬಂದಿದೆ. ನಂತರ ಮಠದ ಮತ್ತೂಂದು ಬದಿಯಲ್ಲಿರುವ ಟ್ಯಾಂಕ್‌ ನೀರನ್ನು ಸಹ ಪರಿಶೀಲಿಸಿದಾಗ ಆ ನೀರು ಕೂಡ ವಾಸನೆ ಮಿಶ್ರಿತವಾಗಿದ್ದರಿಂದ ತಕ್ಷಣವೇ ಅಡುಗೆ ತಯಾರಿ ನಿಲ್ಲಿಸಿ, ಸಂಬಂಧಿಸಿದವರಿಗೆ ಮಾಹಿತಿ ನೀಡಿದ್ದಾರೆ.

ಎಸ್‌ಐ ಪರಿಶೀಲನೆ: ಸ್ಥಳಕ್ಕೆ ಗ್ರಾಮಾಂತರ ಠಾಣೆ ಎಸ್‌ಐ ಶಿವಪ್ರಕಾಶ್‌ ಹಾಗೂ ಆಹಾರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ನೀರಿನ ಸ್ಯಾಂಪಲ್‌ ಸಂಗ್ರಹಿಸಿ, ಯಾವುದೇ ಕಾರಣಕ್ಕೂ ನೀರನ್ನು ಬಳಸದಂತೆ ಸೂಚಿಸಿ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಸಂಬಂಧ ಮಠದ ವತಿಯಿಂದ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಪ್ರತ್ಯೇಕ ಅಡುಗೆ: ಘಟನೆ ನಂತರ ಅಡುಗೆಗೆ ಬಳಸಿದ್ದ ತರಕಾರಿ ಮತ್ತಿತರ ಪದಾರ್ಥಗಳನ್ನು ಬಿಸಾಡಿದ್ದು, ಮಠದ ಆವರಣದಲ್ಲಿದ್ದ ಮತ್ತೂಂದು ಬೋರ್‌ವೆಲ್‌ನಿಂದ ನೀರನ್ನು ಪಡೆದು ಪ್ರತ್ಯೇಕ ಅಡುಗೆ ಮಾಡಿಸಿ, ಮಕ್ಕಳಿಗೆ ಬಡಿಸಲಾಗಿದೆ. ಅಲ್ಲದೇ ಶೌಚಾಲಯ ಮತ್ತಿತರ ಬಳಕೆಗೆ ಟ್ಯಾಂಕರ್‌ ನೀರನ್ನು ಬಳಸಲಾಗುತ್ತಿದೆ ಎಂದು ವಸತಿ ಶಾಲೆಯ ಆಡಳಿತಾಧಿಕಾರಿ ಮಾಹಿತಿ ನೀಡಿದ್ದಾರೆ.

Advertisement

ಯಾರು ಯಾವ ಕಾರಣಕ್ಕಾಗಿ ಓವರ್‌ ಹೆಡ್‌ ಟ್ಯಾಂಕಿಗೆ ವಿಷ ಬೆರೆಸಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದೆಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಇಲ್ಲ.
-ನಟರಾಜಸ್ವಾಮೀಜಿ, ಗುರುಲಿಂಗ ಜಂಗಮ ದೇವರ ಮಠ

Advertisement

Udayavani is now on Telegram. Click here to join our channel and stay updated with the latest news.

Next