ಹೊಸದಿಲ್ಲಿ : ‘ಏಕೆ ಇಷ್ಟೊಂದು ಗದ್ದಲ, ಗಲಾಟೆ ಮಾಡುತ್ತಿದ್ದೀರಿ ? ನಿಮಗಿಂತ ಶಾಲಾ ಮಕ್ಕಳೇ ವಾಸಿ’ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂಸತ್ತಿನಲ್ಲಿ ವಿಪರೀತ ಗದ್ದಲ ಮಾಡುತ್ತಿದ್ದ ವಿಪಕ್ಷೀಯರು ಮತ್ತು ಟ್ರೆಶರಿ ಬೆಂಚ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
‘ಭಾರತೀಯ ಸಂಸತ್ತಿನಲ್ಲಿ ಅದೇನು ನಡೆಯುತ್ತಿದೆ ಎಂದು ಹೊರ ದೇಶದವರು ಪ್ರಶ್ನಿಸುವುದನ್ನು ನಾನು ಕೇಳಿದ್ದೇನೆ. ನಿಮ್ಮ ಈ ರೀತಿಯ ಗದ್ದಲ, ಗಲಾಟೆ ಮತ್ತು ಅರಾಜಕ ವರ್ತನೆ ಹೊರಗಿನವರಿಗೆ ಕೆಟ್ಟ ಸಂದೇಶ ನೀಡುತ್ತದೆ ಎನ್ನುವುದನ್ನು ಮರೆಯಬೇಡಿ’ ಎಂದು ಮಹಾಜನ್ ಗದ್ದಲ ನಿರತ ಸಂಸದರಿಗೆ ಎಚ್ಚರಿಕೆ ನೀಡಿದರು.
ಸದನ ಸಮಾವೇಶಗೊಂಡ ಕೆಲವೇ ತಾಸುಗಳಲ್ಲಿ ಆರಂಭಗೊಂಡ ಗದ್ದಲ ಒಂದಿನಿತೂ ನಿಲ್ಲದೆ ಅಂತೆಯೇ ಮುಂದುವರಿದಾಗ ಕಲಾಪ ನಡೆಸುವುದೇ ಅಸಾಧ್ಯವಾಗಿ ಮಹಾಜನ್ ಅವರು ಇಂದಿನ ಮಂಗಳವಾರದ ಕಲಾಪವನ್ನು ನಾಳೆಗೆ ಮುಂದೂಡಿದರು.
ರಫೇಲ್, ಮೇಕೆದಾಟು, ವಿಶೇಷ ಸ್ಥಾನಮಾನ ಮುಂತಾಗಿ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್, ಎಐಎಡಿಎಂಕೆ ಮತ್ತು ತೆಲುಗು ದೇಶಂ ಪಕ್ಷದ ಸದಸ್ಯರು ಸ್ಪೀಕರ್ ಪೋಡಿಯಂ ಸಮೀಪ ಜಮಾಯಿಸಿ ಸರಕಾರದ ವಿರುದ್ಧ ತಾರಕ ಧ್ವನಿಯಲ್ಲಿ ಘೋಷಣೆ ಕೂಗಲಾರಂಭಿಸಿದರು.
ರಫೇಲ್ ವಿಷಯದಲ್ಲಿ ಸರಕಾರ ಸುಪ್ರೀಂ ಕೋರ್ಟಿಗೆ ಸುಳ್ಳು ಮಾಹಿತಿ ನೀಡಿದೆ; ಹಾಗಾಗಿ ಅದು ಜೆಪಿಸಿ ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ಸಂಸದರು ಬೊಬ್ಬಿಟ್ಟರು.
ಕಾಂಗ್ರೆಸ್ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಸದನದಲ್ಲಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರೆ ಬಿಜೆಪಿ ಸದಸ್ಯರು ಕಾಂಗ್ರೆಸ್ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆಗೆ ಒತ್ತಾಯಿಸಿದರು.