ಚೇಳೂರು: ಪಾಳ್ಯಕೆರೆ ಸರ್ಕಲ್‌ಗೆ ಸೇರಿದ ದಿಗವನೆಟ್ಟ ಕುಂಟಪಲ್ಲಿ ಗ್ರಾಮದಲ್ಲಿ 20 ವರ್ಷಗಳ ಹಿಂದೆ ಕಟ್ಟಿರುವ ಶಾಲಾ ಕಟ್ಟಡವನ್ನು ಅಂಗನವಾಡಿ ಕೇಂದ್ರಕ್ಕೆ ತಾತ್ಕಾಲಿಕವಾಗಿ ನೀಡಿದ್ದು, ಕಟ್ಟಡ ಬಿದ್ದು ಹೋಗುವ ಮಟ್ಟಕ್ಕೆ ತಲುಪಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದ ಪಕ್ಕದಲ್ಲೇ 20 ವರ್ಷಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೇಂದ್ರ ನಡೆಸಲು ಪ್ರಾರಂಭ ಮಾಡಲಾಯಿತು. ಆದರೆ, 9 ವರ್ಷಗಳ ಹಿಂದೆ ಅಂಗನವಾಡಿ ಕಟ್ಟಡದ ಹಿಂದಿನ ಗೋಡೆ ಬಿರುಕು ಬಿದ್ದು ಹೋಗುವ ಮಟ್ಟಕ್ಕೆ ತಲುಪಿದೆ. ಅವಘಡ ಸಂಭವಿಸುವ ಮುನ್ನ ಈ ಕಟ್ಟಡವನ್ನು ತೆರವು ಮಾಡಿ ಹೊಸ ಕಟ್ಟಡ ಮಂಜೂರಾತಿ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು ಹೆಚ್ಚು ಬಂದು ಹೋಗುತ್ತಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಅಂಗನವಾಡಿ ಕಟ್ಟಡ ತೇವಗೊಂಡು ಬೀಳುವ ಹಂತಕ್ಕೆ ತಲುಪಿದೆ. ಇದರ ಜೊತೆಗೆ ಕಟ್ಟಡದ ಮೇಲೆ ಬೇವಿನ ಮರ, ಇತರೆ ಗಿಡಗಳು ಬೆಳೆಯುತ್ತಿವೆ. ಈ ಕಟ್ಟಡದಲ್ಲಿ ಈಗ ಹಾವು, ಚೇಳು ಸೇರಿಕೊಂಡಿವೆ. ಕಟ್ಟಡಕ್ಕೆ ಬೀಗ ಹಾಕಲಾಗಿದೆ. ಕಟ್ಟಡ ಕುಸಿಯುವ ಹಂತಕ್ಕೆ ತಲುಪಿದೆ. ಜೊತೆಗೆ ಹಳೇ ಕಟ್ಟಡ ಸಹ ಅವಸಾನದ ಹಂಚಿಗೆ ತಲುಪಿದಾಗ 4 ತಿಂಗಳಿಂದ ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಆದರೂ, ಕಟ್ಟಡದ ಬಗ್ಗೆ ಗಮನಹರಿಸುವವರೇ ಇಲ್ಲದಂತಾಗಿ ಭಯದ ನೆರಳಿನಲ್ಲಿ ಮಕ್ಕಳು ಓಡಾಡಬೇಕಾಗಿದೆ. ಅವಘಡ ಸಂಭವಿಸಿದರೆ ಸರ್ಕಾರದ ಅಧಿಕಾರಿಗಳೇ ಹೊಣೆಗಾರರಾಗಿರುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಕಟ್ಟಡದ ಮೇಲೆ ಬೆಳೆದ ಗಿಡ ಗಂಟಿ: ಇಲ್ಲಿನ ಸರ್ಕಾರಿ ಶಾಲೆ 1ರಿಂದ 5ನೇ ತರಗತಿವರೆಗೂ ಇದ್ದು, ಶಾಲೆಯ ಕಟ್ಟಡದ ಹಿಂಭಾಗದಲ್ಲಿ ಭಾರೀ ಗಾತ್ರದ ಗಿಡಗಳು ಬೆಳೆದಿವೆ. ಶಾಲೆಯೇ ಮುಚ್ಚಿ ಹೋಗಿದೆ. ಗಿಡಗಳು ಶಾಲೆಯ ಕೊಠಡಿ ಒಳಗೆ ಬಂದಿವೆ. ಜೊತೆಯಲ್ಲೇ ಹಾವುಗಳು ಸಹ ಕಂಡು ಬಂದಿವೆ. ಜನರು ಮಲಮೂತ್ರ ವಿಸರ್ಜನೆಗೆ ಅವಕಾಶವಾಗಿದೆ. ಇಡೀ ಪರಿಸರ ದುರ್ನಾತ ಬೀರುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಅಂಗನವಾಡಿ ಕಟ್ಟಡ 9 ವರ್ಷಗಳಿಂದ ಶಿಥಲಾವಸ್ಥೆಯಲ್ಲಿ ಇದೆ. ಸರ್ಕಾರಿ ಶಾಲಾ ಕಟ್ಟಡದಲ್ಲಿ ತಾತ್ಕಾಲಿಕವಾಗಿ ನಡೆಸಲಾಗುತ್ತಿದೆ.
ಸರ್ಕಾರ ಗಡಿ ಶಾಲೆ ಅಭಿವೃದ್ಧಿಗೆ ನೂರು ಕೋಟಿ ರೂ. ಎಂದು ಪ್ರಚಾರ ಮಾಡಿ, ಕೋಟ್ಯಂತರ ರೂ. ಹಣ ಮಂಜೂರಾತಿ ಮಾಡಿದೆ. ಗಡಿ ಗ್ರಾಮಗಳಿಗೆ ಈ ಹಣ ಬರುವುದೇ ಇಲ್ಲ. ರಾಜ್ಯ ರಾಜಧಾನಿಯಲ್ಲೇ ಖಾಲಿ ಆಗುತ್ತೆ. ಈ ಬಗ್ಗೆ ಕ್ಷೇತ್ರದ ಶಾಸಕರಿಗೆ ಹೇಳಲಾಗಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಮಕ್ಕಳ ರಕ್ಷಣೆ ಕುರಿತು ಗಮನ ನೀಡಬೇಕಾಗಿದೆ.
-ಮೌಲಾಲಿ, ಸಂಚಾಲಕ, ಅಲ್ಪಸಂಖ್ಯಾತ ಘಟಕ, ಚೇಳೂರು ತಾಲೂಕು
ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ನೂತನ ಕಟ್ಟಡ ಮಂಜೂರು ಮಾಡಲು ಇಲಾಖೆಯ ಮೂಲಕ ಮೇಲಧಿಕಾರಿಗಳಿಗೆ ವರದಿ ನೀಡಲಾಗಿದೆ. ಇದುವರೆಗೂ ಹಣ ಬಿಡುಗಡೆ ಆಗಿಲ್ಲ. ಅನುದಾನ ಬಂದ ತಕ್ಷಣ ಹಳೇ ಕಟ್ಟಡ ಕೆಡವಿ ನಿರ್ಮಿಸಲಾಗುವುದು. ಬಾಡಿಗೆ ಕಟ್ಟಡ ಸಿಗದ ಕಾರಣ ನಾಲ್ಕು ತಿಂಗಳಿಂದ ಶಾಲಾ ಕೊಠಡಿಯಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ನಡೆಸಲಾಗುತ್ತಿದೆ.
-ರಾಮಚಂದ್ರಪ್ಪ, ಸಿಡಿಪಿಒ, ಬಾಗೇಪಲ್ಲಿ
-ಲೋಕೇಶ್.ಪಿ.ವಿ