Advertisement

ಯೋಜನೆಗಳು ಕೈಗೆಟುಕುವಂತಿರಬೇಕು ವಿನಾ ಕನ್ನಡಿಯೊಳಗಿನ ಗಂಟಾಗದಿರಲಿ: ಜೆ.ಪಿ. ಹೆಗ್ಡೆ

01:44 AM Apr 21, 2024 | Team Udayavani |

ಮೂಡಿಗೆರೆ: ಕೇಂದ್ರ ಸರಕಾರದಿಂದ ಜಾರಿಗೆ ತಂದಿರುವ ಆರೋಗ್ಯ ವಿಮಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಮಾನ್ಯ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದನ್ನು ಸರಳೀಕರಣಗೊಳಿಸುವ ಕೆಲಸವಾಗಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅಭಿಪ್ರಾಯಪಟ್ಟರು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಹರಿಹರದ ಹಳ್ಳಿಯಲ್ಲಿ ಅವರು ಮತಯಾಚನೆ ಮಾಡಿ ಮಾತನಾಡಿದರು.

Advertisement

ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸರಕಾರದ ನೆರವು ಪಡೆಯಬೇಕಾದಲ್ಲಿ, ಸರಕಾರಿ ಆಸ್ಪತ್ರೆಯಿಂದ ಶಿಫಾರಸು ಪತ್ರ ಪಡೆದುಕೊಂಡು, ಖಾಸಗಿ ಆಸ್ಪತ್ರೆಗೆ ತೆರಳಬೇಕು. ಅಲ್ಲಿ ಹೆಚ್ಚಿನ ಸಂದರ್ಭದಲ್ಲಿ ಬೆಡ್‌ ದೊರೆಯುವುದೇ ಕಷ್ಟ. ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ಎಲ್ಲ ತೊಂದರೆಗಳ ನಿವಾರಣೆಗೆ ಸರಕಾರದಿಂದಲೇ ಸರಳೀಕೃತ ಆರೋಗ್ಯ ಕಾರ್ಡ್‌ ವಿತರಣೆಯಾಗಬೇಕು. ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ ನಮ್ಮ ಮೂಲಭೂತ ಆದ್ಯತೆಯಾಗುವ ನಿಟ್ಟಿನಲ್ಲಿ ಸರಕಾರದ ಕಾರ್ಯಕ್ರಮಗಳು ಯಶಸ್ವಿಯಾಗಿ ಜಾರಿಗೆ ಬರಬೇಕು ಎಂದರು.

ನುಡಿದಂತೆ ನಡೆಯುವ ಪಕ್ಷ “ಕಾಂಗ್ರೆಸ್‌’
ಕರ್ನಾಟಕದಲ್ಲಿ ಚುನಾವಣ ಪೂರ್ವದಲ್ಲಿ ನೀಡಿದ ಗ್ಯಾರಂಟಿ ಭರವಸೆಗಳನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದ ಕಾಂಗ್ರೆಸ್‌ ಸರಕಾರ ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಪಕ್ಷ “ಕಾಂಗ್ರೆಸ್‌’ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಸಮಯದಲ್ಲಿ ಕೆಲವರು ನಂಬಲಿಲ್ಲ. ಆದರೆ ಇದೀಗ ಪ್ರತಿಯೊಬ್ಬರಿಗೂ ಗ್ಯಾರಂಟಿ ಸೌಲಭ್ಯ ದೊರಕುತ್ತಿರುವುದರಿಂದ ಜನರು ಸಂಪೂರ್ಣವಾಗಿ ವಿಶ್ವಾಸ ಹೊಂದಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಲ್ಲಿ ರೈತರು, ವಿದ್ಯಾರ್ಥಿಗಳು, ಯುವಜನರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೂ ಅನೂಕೂಲವಾಗುವ ಯೋಜನೆಗಳನ್ನು ಜಾರಿಗೆ ತರುವ ಗ್ಯಾರಂಟಿಗಳನ್ನು ಘೋಷಿಸಲಾಗಿದ್ದು, ಇದನ್ನು ಈಡೇರಿಸುವ ಬದ್ಧತೆ ಇರಿಸಿಕೊಳ್ಳಲಾಗಿದೆ ಎಂದರು.

ಕೇಂದ್ರದ ಗ್ಯಾರಂಟಿ ವಿಫಲ
ಚುನಾವಣೆ ಪೂರ್ವದಲ್ಲಿ ಕೇಂದ್ರ ಸರಕಾರ ಕೊಟ್ಟ ಗ್ಯಾರಂಟಿಯನ್ನು ಉಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲ
ವಾಗಿದೆ. ಮಹಾಲಕ್ಷ್ಮಿಯೋಜನೆಯ ಮೂಲಕ ಮಹಿಳೆಯರಿಗೆ 1 ಲಕ್ಷ ರೂ. ಘೋಷಣೆ, ರೈತರ ಸಾಲ ಮನ್ನಾ, ವಿದ್ಯಾರ್ಥಿಗಳ ಸಾಲ ಮನ್ನಾ ಮಾಡುವುದಾಗಿ ಆಶ್ವಾಸನೆ ನೀಡಿರುವುದು ಅಲ್ಲದೆ ಬಹು ಮುಖ್ಯವಾಗಿ ಪ್ರತೀ ಕುಟುಂಬಕ್ಕೂ 25 ಲಕ್ಷ ರೂ. ಇನುರೆನ್ಸ್‌ ನೀಡುವುದಾಗಿ ತಿಳಿಸಿದ್ದಾರೆ ಹೊರತು ಈಡೇರಿಸಿಲ್ಲ. ಆದರೆ ರಾಜ್ಯ ಸರಕಾರ ಮೆಡಿಕಲ್‌ ಕಾಲೇಜನ್ನು ನಿರ್ಮಾಣ ಮಾಡುತ್ತಿದೆ. ಇನುರೆನ್ಸ್‌ ಮೂಲಕ ಕಾರ್ಡ್‌ ತೋರಿಸಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಯಾವುದೇ ಹಣ ಪಾವತಿ ಮಾಡುವ ಆವಶ್ಯಕತೆ ಇರುವುದಿಲ್ಲ ಎಂದರು.

ಹಿಂದೆ ಕಾಂಗ್ರೆಸ್‌ ನೀಡಿದ ಭರವಸೆಯನ್ನು ಈಗಾಗಲೇ ಕೊಟ್ಟಿದೆ. ಮುಂದೆ ಕೊಡಲ್ಪಟ್ಟ ಆಶ್ವಾಸನೆಗಳನ್ನು ಖಂಡಿತವಾಗಿ ಕೊಡಲಿದೆ ಎಂಬ ನಂಬಿಕೆಯಿಂದ ಈ ಬಾರಿ ಮತದಾನ ಮಾಡಬೇಕೆಂದು ಮನವಿ ಮಾಡಿದರು. ನಾನು ಸಚಿವನಾಗಿದ್ದಾಗ ಜನರ ಸೇವೆ ಮಾಡಲು ಕೇವಲ 20 ತಿಂಗಳು ಮಾತ್ರ ಅವಕಾಶ ಲಭಿಸಿತ್ತು. ರೈಲ್ವೇ ಅಂಡರ್‌ ಪಾಸ್‌ ಸೇರಿದಂತೆ ಆಗ ಸಮಸ್ಯೆ ಇದ್ದ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಸ್ಥಳೀಯರೊಂದಿಗೆ ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಟ್ಟಿದ್ದೆನು ಎಂದರು.

Advertisement

ಮಾಜಿ ಶಾಸಕ ಕುಮಾರಸ್ವಾಮಿ, ನಾಗೇ ಗೌಡ, ಪಕ್ಷದ ಪ್ರಮುಖರು, ಅಭಿಮಾನಿಗಳು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಯಾರನ್ನೂ ದಾರಿ ತಪ್ಪಿಸಿಲ್ಲ: ಮೋಟಮ್ಮ
ಶಾಸಕಿ ನಯನಾ ಮೋಟಮ್ಮ ಮಾತನಾಡಿ,. ಗ್ಯಾರಂಟಿ ಯೋಜನೆಗಳಡಿ ಕರೆಂಟ್‌ ಬಿಲ್‌ ಕಟ್ಟಬೇಕಾಗಿಲ್ಲ, ಗಂಡು ಮಕ್ಕಳಿಗೆ ನೀಡುವ ಯುವನಿಧಿ ಎಲ್ಲರಿಗೂ ತಲುಪುತ್ತಿದೆ. ಅನ್ನ ಭಾಗ್ಯದ ಮೂಲಕ ಎಲ್ಲರ ಮನೆಗೆ ಅಕ್ಕಿ ಸಿಗು
ತ್ತಿದೆ. 5 ಕೆಜಿ ಅಕ್ಕಿಯ ಬದಲಿಗೆ ಜನರಿಗೆ ಹಣ ಪಾವತಿ ಮಾಡಲಾಗುತ್ತಿದೆ. ಇದೆಲ್ಲವೂ ಕಾಂಗ್ರೆಸ್‌ ಕೊಡುಗೆ. ಕೇವಲ 11 ತಿಂಗಳಲ್ಲಿ ಇದನ್ನೆಲ್ಲ ಮಾಡಿತೋರಿಸಿದ ಸರಕಾರ ಎಂಬ ಘನತೆಯನ್ನು ಕಾಂಗ್ರೆಸ್‌ ಹೊದ್ದುಕೊಂಡಿದೆ. ಈ ಬಾರಿಯ ಅಭ್ಯರ್ಥಿ ಕೆ. ಜಯಪ್ರಕಾಶ್‌ ಹೆಗ್ಡೆ ಅವರನ್ನು ಗೆಲ್ಲಿಸಿದ್ದೇ ಆದರೆ ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡಿ ತೋರಿಸಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next