Advertisement

ಕೌಶಲ್ಯ ವೃದ್ಧಿಗೆ ಕಾಯಕ ಯೋಜನೆ ಜಾರಿ

12:11 PM Oct 01, 2018 | |

ಬೀದರ: ಕೌಶಲ್ಯ ಮತ್ತು ಉದ್ಯಮಶೀಲತೆ ಗುಣಮಟ್ಟ ವೃದ್ಧಿಸುವ ಗುರಿಯೊಂದಿಗೆ ಸರಕಾರ ಕಾಯಕ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಮೂರು ಸಾವಿರ ಜನರನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು
ಸಹಕಾರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಹೇಳಿದರು. 

Advertisement

ನಗರದ ಜಿಲ್ಲಾ ಬಾಲ ಭವನ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪೋಷಣೆ ಮಾಸ ಅಭಿಯಾನ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ರೈತರ ಸಾಲಮನ್ನಾ ಮಾಡಲಾಗಿದೆ. ಅದೇ ರೀತಿ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಕೂಡ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
 
ಮಕ್ಕಳಿಗೆ ತಾಯಿ ಮೊದಲ ಗುರು. ಆದರೆ, ಅಂಗನವಾಡಿ ಶಿಕ್ಷಕಿಯರು ಮಕ್ಕಳ ಎರಡನೇ ಗುರುವಾಗಿದ್ದು, ಶಿಕ್ಷಕಿಯರ ಜವಾಬ್ದಾರಿ ಹೆಚ್ಚಿದೆ. ನಿಮ್ಮ ಕರ್ತವ್ಯಗಳು ಚಾಚುತಪ್ಪದೆ ಪಾಲಿಸಿಕೊಂಡು ಉತ್ತಮ ಶಿಕ್ಷಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ಅಂಗನವಾಡಿ ಕೇಂದ್ರಗಳಲ್ಲಿನ ಸಮಸ್ಯೆಗಳು ಗಮನಕ್ಕೆ ಬಂದಿವೆ. ಕೇಂದ್ರದಲ್ಲಿ ಮಕ್ಕಳ ಆಟದ ಸಾಮಗ್ರಿ ಸೇರಿದಂತೆ ಅವಶ್ಯ ಇರುವ ಇತರ ಸಾಮಗ್ರಿಗಳ ಬಗ್ಗೆ ಶಿಕ್ಷಕಿಯರು ಪಟ್ಟೆ ಮಾಡಿ ಇಲಾಖೆಗೆ ಸಲ್ಲಿಸಿದರೆ ಈ ಕುರಿತು ಕೂಡ ಸೂಕ್ತ
ವ್ಯವಸ್ಥೆ ಮಾಡುವುದಾಗಿ ಹೇಳಿದರು. 

ಅಪೌಷ್ಟಿಕತೆ ನಿವಾರಣೆಗೆ ಅಂಗನವಾಡಿ ಕೇಂದ್ರದ ಸಿಬ್ಬಂದಿ ಶ್ರಮಿಸಬೇಕು. ಅಪೌಷ್ಟಿಕತೆ ಒಂದು ದಿನದಲ್ಲಿ ನಿವಾರಣೆ ಆಗುವ ಕೆಲಸ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ.

Advertisement

ಅಪೌಷ್ಟಿಕತೆ ನಿವಾರಣೆಗೆ ಹೆಚ್ಚಿನ ಮಹತ್ವ ನೀಡಬೇಕು. ಸರ್ಕಾರದಿಂದ ಸಿಗುವ ವಿವಿಧ ಪದಾರ್ಥಗಳನ್ನು ಅರ್ಹ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಆಗಬೇಕು. ಅಪೌಷ್ಟಿಕತೆ ನಿವಾರಣೆಗೆ ಆಂದೋಲನ ರೀತಿಯಲ್ಲಿ
ಕೆಲಸ ನಡೆಯಬೇಕು. ಜಿಲ್ಲೆಯಲ್ಲಿ ಅಪೌಷ್ಟಿಕ ನಿವಾರಣೆ ಆಗಲೆಬೇಕು ಎಂದು ಹೇಳಿದರು. 

ವಿಧಾನ ಪರಿಷತ್‌ ಸದಸ್ಯ ಅರವಿಂದ ಅರಳಿ ಮಾತನಾಡಿ, ಬಾಲ್ಯದಲ್ಲಿ ಮಕ್ಕಳ ದೈಹಿಕ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವದ್ದಾಗಿದೆ. ಇದನ್ನು ಅರಿತು ಪ್ರತಿಯೊಬ್ಬರು ಕಾಳಜಿವಹಿಸಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ಶಾಸಕ ರಹೀಮ ಖಾನ್‌ ಮಾತನಾಡಿ, ಬೇರೆ ರಾಜ್ಯಗಳಲ್ಲಿನ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರಿಗೆ ಇರುವ ಸಹಾಯ ಸೌಕರ್ಯಗಳನ್ನು ಇಲ್ಲಿಯೂ ಕಲ್ಪಿಸಿ ಕೊಡಬೇಕು ಎನ್ನುವ ಇಲ್ಲಿನ ಅಂಗನವಾಡಿ ಸಿಬ್ಬಂದಿ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಈ ಬಗ್ಗೆ ಗಮನ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುವುದಾಗಿ ಹೇಳಿದರು. ನಗರಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಚೇಂದ್ರ ವಾಘಮಾರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಂಜುನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next