Advertisement

ಸಾರ್ವಕಾಲಿಕ ಗರಿಷ್ಠ 24.07ಕೋಟಿ ರೂ.ಲಾಭ; ಶೇ.9.50 ಡಿವಿಡೆಂಡ್‌ ಘೋಷಣೆ

11:12 AM Sep 02, 2017 | |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ (ಎಸ್‌ಸಿಡಿಸಿಸಿ ಬ್ಯಾಂಕ್‌) 2016-17ನೇ ಸಾಲಿನಲ್ಲಿ ಸಾರ್ವಕಾಲಿಕ ಗರಿಷ್ಠ 24.07 ಕೋಟಿ ರೂ. ಲಾಭ ಗಳಿಸಿದೆ. ತನ್ನ ಸದಸ್ಯ ಸಂಘಗಳಿಗೆ ಶೇ. 9.50 ಡಿವಿಡೆಂಡ್‌ನ್ನು ಬ್ಯಾಂಕಿನ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

Advertisement

ಶುಕ್ರವಾರ ನಡೆದ ಬ್ಯಾಂಕಿನ 103ನೇ ಮಹಾಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಟ್ಯಾಬ್‌ ಬ್ಯಾಂಕಿಂಗ್‌, ಇಂಟರ್‌ ಬ್ಯಾಂಕಿಂಗ್‌ ಮೊಬೈಲ್‌ ಪೇಮೆಂಟ್‌ ಸಿಸ್ಟಮ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ಸೇವೆ ಹಾಗೂ ಉಭಯ ಜಿಲ್ಲೆಗಳಲ್ಲಿ ಬ್ಯಾಂಕಿನ ನೂರು ಎಟಿಎಂಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ತೆರೆಯಲು ಬ್ಯಾಂಕ್‌ ಕಾರ್ಯ ಯೋಜನೆ ರೂಪಿಸಿದೆ ಎಂದರು.

ಗುರಿ ಮೀರಿದ ಸಾಧನೆ
ವರದಿ ವರ್ಷದಲ್ಲಿ ಎಲ್ಲಾ ವ್ಯವಹಾರಗಳಲ್ಲೂ ಬ್ಯಾಂಕ್‌ ಗುರಿ ಮೀರಿದ ಸಾಧನೆ ದಾಖಲಿಸಿದೆ. ಸಹಕಾರ ತಣ್ತೀದಡಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಬ್ಯಾಂಕ್‌ ವರದಿ ವರ್ಷದಲ್ಲಿ 5,883.67 ಕೋಟಿ ರೂ.ಗಳ ಒಟ್ಟು ವ್ಯವಹಾರ ಸಾಧಿಸುವ ಮೂಲಕ ಅಭಿವೃದ್ಧಿಯ ಪಥವನ್ನು ಕಂಡಿದೆ. 102 ಶಾಖೆಗಳ ಮೂಲಕ ಒಟ್ಟು 3,201.64 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ ಎಂದರು.

ಬ್ಯಾಂಕ್‌ 2,382.05 ಕೋಟಿ ರೂ. ಮುಂಗಡ ನೀಡಿದೆ. 932 ಸಹಕಾರಿ ಸಂಘಗಳು ಬ್ಯಾಂಕಿಗೆ ಸದಸ್ಯರಾಗಿದ್ದು, 190.69 ಕೋಟಿ ರೂ. ಪಾಲು ಬಂಡವಾಳ, 4,336.04 ಕೋಟಿ ರೂ. ದುಡಿಯುವ ಬಂಡವಾಳ, 100.80 ಕೋಟಿ ರೂ. ವಿವಿಧ ನಿಧಿಗಳನ್ನು ಹೊಂದಿರುತ್ತದೆ. ಪ್ರಸಕ್ತ ವರ್ಷ  ಕೃಷಿ ಸಾಲ ಶೇಕಡಾ ನೂರರ ವಸೂಲಾತಿ ಕಂಡಿದೆ ಎಂದರು.

ಬ್ಯಾಂಕ್‌ ವಿವಿಧ ಸಹಕಾರ ಸಂಘಗಳ ಜೋಡಣೆಯ ಮೂಲಕ ಒಟ್ಟು 43,156 ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡಿದೆ. ಈ ಗುಂಪುಗಳ ಒಟ್ಟು ಉಳಿತಾಯ 94.05 ಕೋಟಿ ರೂ. ಒಟ್ಟು 38,622 ಸ್ವಸಹಾಯ ಗುಂಪುಗಳಿಗೆ ಸಾಲ ಸಂಯೋಜಿಸಲಾಗಿದ್ದು, ಹೊರಬಾಕಿ ಸಾಲ 174.90 ಕೋಟಿ ರೂ. ಎಂದು ತಿಳಿಸಿದರು. 

Advertisement

2016-17ನೇ ಸಾಲಿನಲ್ಲಿ ಶೇ. 100ರ ವಸೂಲಾತಿಯಲ್ಲಿ ಸಾಧನೆಗೈದ 18 ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಗೌರವಾರ್ಪಣೆ ಮಾಡಲಾಯಿತು. ಲೆಕ್ಕ ಪರಿಶೋಧನಾ “ಎ’ ವರ್ಗ ಮತ್ತು “ಬಿ’ ವರ್ಗದ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಆಯ್ದ ತಲಾ 3 ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ 2016-17ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.
 
2016-17ನೇ ಸಾಲಿನ ಜಿಲ್ಲಾ ಬ್ಯಾಂಕಿನ ಪ್ರೋತ್ಸಾಹಕ ಪ್ರಶಸ್ತಿಯನ್ನು 32 ಸಹಕಾರಿ ಸಂಘಗಳು, 2015-16ನೇ ಸಾಲಿನ ಅಪೆಕ್ಸ್‌ ಬ್ಯಾಂಕಿನ ಪ್ರಶಸ್ತಿಯನ್ನು 10 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಪಡೆದಿವೆ. 

ಗುರಿ ಮೀರಿದ ಸಾಧನೆಗೈದ 22 ಮಂದಿ ಶಾಖಾ ವ್ಯವಸ್ಥಾಪಕರಿಗೆ ಪ್ರಶಂಸನಾ ಪತ್ರ ನೀಡಸಲಾಯಿತು. ಬ್ಯಾಂಕಿನ ಉಪಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ನಿರ್ದೇಶಕ ರಾದ ವಿನಯ ಕುಮಾರ್‌ ಸೂರಿಂಜೆ, ಬಿ. ನಿರಂಜನ್‌, ಭಾಸ್ಕರ್‌ ಎಸ್‌. ಕೋಟ್ಯಾನ್‌, ಟಿ. ಜಿ. ರಾಜಾರಾಮ್‌ ಭಟ್‌, ಬಿ. ರಘುರಾಮ ಶೆಟ್ಟಿ, ಎಂ. ವಾದಿರಾಜ ಶೆಟ್ಟಿ, ಕೆ. ಎಸ್‌. ದೇವರಾಜ್‌, ಸದಾಶಿವ ಉಳ್ಳಾಲ್‌, ರಾಜು ಪೂಜಾರಿ, ಶಶಿಕುಮಾರ್‌ ರೈ ಬಿ., ಎಸ್‌. ಬಿ. ಜಯರಾಮ ರೈ, ದೇವಿ ಪ್ರಸಾದ್‌ ಶೆಟ್ಟಿ ಬೆಳಪು, ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್‌ ನಾಯಕ್‌, ಬ್ಯಾಂಕಿನ ಪ್ರಭಾರ ಸಿಇಒ ಸತೀಶ್‌ ಎಸ್‌. ಉಪಸ್ಥಿತರಿದ್ದರು. 

ಬ್ಯಾಂಕಿನ ನಿರ್ದೇಶಕ ರಾಜಾರಾಮ್‌ ಭಟ್‌ ಸ್ವಾಗತಿಸಿದರು.  ಪ್ರಭಾರ ಮುಖ್ಯ ಕಾರ್ಯ
ನಿರ್ವಹಣಾಧಿಕಾರಿ ಸತೀಶ್‌ ಎಸ್‌. ವಂದಿಸಿದರು. ಉಪ ಮಹಾಪ್ರಬಂಧಕ ಗೋಪಾಲಕೃಷ್ಣ ಭಟ್‌ ನಿರೂಪಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next