Advertisement

ಅಲ್ಲಲ್ಲಿ ಆಲಿಕಲ್ಲು, ಮರಗಳು ಧರೆಗೆ, ರಸ್ತೆ ಜಲಾವೃತ, ಅಸ್ತವ್ಯಸ್ತ…

11:45 AM Apr 18, 2017 | |

ಬೆಂಗಳೂರು: ನಗರದಲ್ಲಿ ಸೋಮವಾರ ಸಂಜೆ ಸುರಿದ ಆಲಿಕಲ್ಲು ಮತ್ತು ಗಾಳಿಸಹಿತ ಮಳೆಗೆ ಹತ್ತಾರು ಮರಗಳು ನೆಲಕಚ್ಚಿ, ರಸ್ತೆಗಳು ಜಲಾವೃತಗೊಂಡವು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಕೊಂಚ ತಂಪೆರೆದಂತೆ ಮಾಡಿ, ನಿಮಿಷಾರ್ಧದಲ್ಲಿ ಮರೆಯಾಗುತ್ತಿದ್ದ ಮಳೆ, ಸೋಮವಾರ ಸಂಜೆ ಅಬ್ಬರಿಸಿತು.

Advertisement

ಗಾಳಿಸಹಿತ ಮಳೆಗೆ 30ಕ್ಕೂ ಹೆಚ್ಚು ಕಡೆಗಳಲ್ಲಿ ಮರ ಮತ್ತು ಮರದ ಕೊಂಬೆಗಳು ಧರೆಗುರುಳಿವೆ. ಈ ವೇಳೆ ಅಂಡರ್‌ಪಾಸ್‌ಗಳಲ್ಲಿ ನೀರು ಆವರಿಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ, ವಾಹನ ಸವಾರರು ಪರದಾಡಿದರು. ಸಂಜೆ “ಪೀಕ್‌ ಅವರ್‌’ನಲ್ಲಿ ವರುಣನ ಆಗಮನವಾಗಿದ್ದರಿಂದ ಇದರ ಬಿಸಿ ಹಲವೆಡೆ ತಟ್ಟಿತು.

ವೈಟ್‌ಫೀಲ್ಡ್‌, ಐಟಿಪಿಎಲ್‌, ಮಡಿವಾಳ, ವಿಧಾನಸೌಧ, ರಿಚ್‌ಮಂಡ್‌ ವೃತ್ತ, ಮತ್ತಿಕೆರೆ ಸೇರಿದಂತೆ ವಿವಿಧೆಡೆ ವಾಹನದಟ್ಟಣೆ ಉಂಟಾಗಿತ್ತು. ಮರ ಮತ್ತು ಮರದ ಕೊಂಬೆಗಳು ರಸ್ತೆ ಆವರಿಸಿದ್ದರಿಂದ ಮತ್ತು ಮೇಲ್ಸೇತುವೆಗಳಲ್ಲಿ ನೀರು ನಿಂತಿದ್ದರಿಂದ ಕೆಲವರು ಪರ್ಯಾಯ ರಸ್ತೆಗಳನ್ನು ಬಳಸಿದರು. ಇದು ಕೂಡ ವಾಹನದಟ್ಟಣೆಗೆ ಕಾರಣವಾಯಿತು. 

ಮರ ಬಿದ್ದಿದ್ದು ಎಲ್ಲೆಲ್ಲಿ?
ನಗರದ ಸಿಎಂಎಚ್‌ ರಸ್ತೆ, ಇಎಸ್‌ಐ, ಲಿಂಗಯ್ಯನಪಾಳ್ಯ, ಕೇಂಬ್ರಿಡ್ಜ್ ಲೇಔಟ್‌, ಜೀವನ್‌ಬಿಮಾ ನಗರ, ಡಿಫೆನ್ಸ್‌ ಕಾಲೊನಿ, ಇಂದಿರಾನಗರ, ಶಿವಾನಂದ ವೃತ್ತ, ಕೋರಮಂಗಲ­ದಲ್ಲಿ 7ನೇ ಮುಖ್ಯರಸ್ತೆ, ಬಿಡಿಎ ಕಾಂಪ್ಲೆಕ್ಸ್‌, 4ನೇ ಬ್ಲಾಕ್‌, 50 ಅಡಿ ರಸ್ತೆ ಹಾಗೂ 8ನೇ ಬ್ಲಾಕ್‌, ಬಸವನಗುಡಿ, ಶ್ರೀರಾಮಪುರ, ಐಟಿಪಿಎಲ್‌, ಕಾಡುಗೋಡಿ, ಸಿಂಗಸಂದ್ರ, ಕೋಡಿಚಿಕ್ಕನಹಳ್ಳಿ, ಕೂಡ್ಲು ಮುಖ್ಯರಸ್ತೆ, ಎಚ್‌ಎಸ್‌ಆರ್‌ 6ನೇ ಸೆಕ್ಟರ್‌, ಬೆಮೆಲ್‌ ಲೇಔಟ್‌ಗಳಲ್ಲಿ ಮರ ಮತ್ತು ಮರದ ಕೊಂಬೆಗಳು ಬಿದ್ದ ಬಗ್ಗೆ ವರದಿಯಾಗಿದೆ. 

ಅದೇ ರೀತಿ, ನಾಗರಬಾವಿ ಬಳಿ ಮತ್ತು ದೊಮ್ಮಲೂರಿನ ಹೊರವರ್ತುಲ ರಸ್ತೆಗಳ ಮೇಲೆ ನೀರು ನಿಂತು ಅಸ್ತವ್ಯಸ್ತಗೊಂಡ ಬಗ್ಗೆ ದೂರುಗಳು ಬಂದಿವೆ ಎಂದು ಬಿಬಿಎಂಪಿ ನಿಯಂತ್ರಣ ಕೊಠಡಿ ತಿಳಿಸಿದೆ. ತಾಸಿನಲ್ಲಿ ಮಳೆ ಮರೆಯಾಗಿದ್ದರಿಂದ  ಮರದ ಕೊಂಬೆಗಳನ್ನು ತ್ವರಿತವಾಗಿ ತೆರವುಗೊಳಿಸಲು ಅನುಕೂಲವಾಯಿತು. 

Advertisement

ನಗರದಲ್ಲಿ ಗರಿಷ್ಠ 25ರಿಂದ 26 ಮಿ.ಮೀ. ಮಳೆಯಾಗಿದ್ದು, ಮೈಸೂರು ಬ್ಯಾಂಕ್‌ ವೃತ್ತ ಸೇರಿದಂತೆ ಕೆಲವೆಡೆ ಆಲಿಕಲ್ಲು ಮಳೆ ಕೂಡ ಆಗಿದೆ. ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ 21 ಮಿ.ಮೀ., ಕೋಣೇನ ಅಗ್ರಹಾರದಲ್ಲಿ 16, ಗೊಲ್ಲಹಳ್ಳಿಯಲ್ಲಿ 8.5, ವಿಜ್ಞಾನ ನಗರದಲ್ಲಿ 9, ಕೂಡಿಗೆಹಳ್ಳಿಯಲ್ಲಿ 7 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next