Advertisement

ಬೇಸಗೆಯಲ್ಲಿ ನೀರಿಗೆ ಬರ; ಮಳೆಗಾಲದಲ್ಲಿ ರಸ್ತೆ ದುಃಸ್ಥಿತಿ

10:55 AM Jul 28, 2018 | Team Udayavani |

ಆಲಂಕಾರು : ಮಳೆಗಾಲ ಮಾತ್ರವಲ್ಲದೆ ಬೇಸಗೆ ಕಾಲದಲ್ಲಿಯೂ ಇಲ್ಲಿನ ಜನರ ಪಾಡು ಕೇಳುವವರಿಲ್ಲ! ಆಲಂಕಾರು ಗ್ರಾಮದ ಬುಡೇರಿಯಾ ಜನತೆ ದುರದೃಷ್ಟ ವಂತರು ಎಂದರೆ ತಪ್ಪಾಗಲಾರದು. ಇಲ್ಲಿನವರು ಬೇಸಗೆಯಲ್ಲಿ ನೀರಿನ ಬರವನ್ನು ಎದುರಿಸಬೇಕು. ಮಳೆಗಾಲದಲ್ಲಿ ರಸ್ತೆ ದುರವಸ್ಥೆಯಿಂದ ಇಲ್ಲಿ ಸಂಚಾರ ಕಷ್ಟಕರ. ರಸ್ತೆಗಳಿಗೆ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿಲ್ಲ. ಜತೆಗೆ ಬೇಸಗೆಯಲ್ಲಿ ಅಕ್ರಮ ಮರಳುಗಾರಿಕೆಯೇ ರಸ್ತೆಗಳ ಅವ್ಯವಸ್ಥೆಗೆ ಮೂಲ ಕಾರಣವಾಗಿದೆ.

Advertisement

ಬುಡೇರಿಯಾ ಸಂಪರ್ಕ ಕಡಿತ
ರಸ್ತೆ ಕೆಸರುಮಯವಾಗಿರುವ ಕಾರಣ ಅತೀ ಹೆಚ್ಚು ದೈವದ ಕ್ಷೇತ್ರವಿರುವ ಬುಡೇರಿಯಾಕ್ಕೆ ವಾಹನ ಸಂಚಾರ ಅತ್ಯಂತ ದುಸ್ತರವಾಗಿದೆ. ಜತೆಗೆ ಚಾಮೆತ್ತಡ್ಕ, ಪೊಸೋನಿಗೆ ಸಂಪರ್ಕಿಸುವ ರಸ್ತೆಗೆ ಚರಂಡಿ ಇಲ್ಲದ ಕಾರಣ ಚಾಮೆತ್ತಡ್ಕದಲ್ಲಿ ಕಚ್ಚಾ ರಸ್ತೆಯು ಸುಮಾರು 100 ಮೀ. ದೂರದ ವರೆಗೆ ಸಂಪೂರ್ಣ ಕೆಸರು ಮಯವಾಗಿದೆ. ಇಲ್ಲಿ ನಡೆದಾಡಲೂ ಅಸಾಧ್ಯ. ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಭಾಗದ ಜನತೆ ಆಲಂಕಾರಿಗೆ ತೆರ ಳಬೇಕಿದ್ದರೆ ಸುತ್ತು ಬಳಸಿ ಹೋಗ ಬೇಕು. ಇಲ್ಲಿ ರುವ ಎಂಡೋ ಸಂತ್ರಸ್ತರು ಎಂಡೋ ಪಾಲನ ಕೇಂದ್ರಗಳಿಗೆ ತೆರಳಲಾಗದೆ ಸಂಕಷ್ಟದಲ್ಲಿದ್ದಾರೆ. ರಸ್ತೆ ಹದಗೆಟ್ಟಿರುವ ಕಾರಣ ಪೊಯ್ಯಲಡ್ಡ, ಬಡ್ಡಮೆ, ನೀರಕಣಿ ಮೊದಲಾದ ಪ್ರದೇಶಗಳು ವಾಹನ ಸಂಚಾರವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಮರಳು ಸಾಗಾಟ ಕಾರಣ?
ಬೇಸಗೆಯಲ್ಲಿ ಬುಡೇರಿಯಾ ಸಮೀಪದ ಕುಮಾರಧಾರಾ ನದಿಯಿಂದ ಮರಳು ಸಾಗಾಟವಾಗುತ್ತದೆ. ಮರಳು ವಾಹನಗಳ ಹೆಚ್ಚಿನ ಸಂಚಾರದಿಂದಾಗಿ ರಸ್ತೆ ಗುಂಡಿಮಯವಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಇಲ್ಲಿ ಬೇಸಗೆಯಲ್ಲಿ ರಾತ್ರಿ, ಹಗಲು ನಿರಂತರ ಮರಳುಗಾರಿಕೆ ನಡೆಯುತ್ತಿದ್ದರೂ ಸ್ಥಳೀಯಾಡಳಿತ ಮೌನವಾಗಿದೆ. ಅಂಗನವಾಡಿಗೆ ತೆರಳುವ ಪುಟಾಣಿಗಳಿಗೂ ಹೋಗಲು ತೊಂದರೆ ಇದೆ. ಮರಳು ಉದ್ದಿಮೆದಾರರು ರಸ್ತೆಯ ಗುಂಡಿಯನ್ನು ಮುಚ್ಚುವ ಕಾರ್ಯ ಮಾಡುತ್ತಿಲ್ಲ. ಮರಳಿನ ದೊಡ್ಡ ಲಾರಿಗಳ ಸಂಚಾರದಿಂದ ಸೋರ್ವಲ್ತಡಿಯಲ್ಲಿ ರಸ್ತೆ ಮೋರಿಯೊಂದರಲ್ಲಿ ಬಿರುಕು ಕಂಡು ಬಂದಿದೆ. ಮೋರಿಯು ತೋರ್ವಲ್ತಡಿ ಎನ್ನುವಲ್ಲಿ ಸಂಪರ್ಕ ಕಡಿದುಕೊಳ್ಳುವ ಆತಂಕ ಎದುರಾಗಿದೆ.

15 ದಿನ ಮುಳುಗಿದ ಸೇತುವೆ
ಬುಡೇರಿಯಾ – ಪಜ್ಜಡ್ಕ – ಚಾಮೆತ್ತಡ್ಕ ಮಧ್ಯೆ ಹರಿಯುವ ಕಿರು ತೋಡಿಗೆ ಕೆಮ್ಮಟೆಯಲ್ಲಿ ನಿರ್ಮಿಸಿರುವ ಕಿರು ಸೇತುವೆಯು ಕಳೆದ 15 ದಿನಗಳಿಂದ ಮುಳುಗಿದೆ. ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಪರಿಣಾಮ ಇಲ್ಲಿನ ಜನರು ಕುಂತೂರನ್ನು ಸಂಪರ್ಕಿಸಲು ಸುಮಾರು 5 ಕಿ.ಮೀ. ಸುತ್ತು ಬಳಸಿ ಹೋಗಬೇಕಾಗಿದೆ.

ಕೆಂಪು ಕಲ್ಲು ಹಾಕುವ ಪ್ರಕ್ರಿಯೆ
ಕೆಟ್ಟು ಹೋಗಿರುವ ರಸ್ತೆಗಳಿಗೆ ಕೆಂಪು ಕಲ್ಲು ಹಾಕಿ ಸರಿಪಡಿಸುವ ಕಾಮಗಾರಿ ನಡೆ ಸಲಾಗುತ್ತಿದೆ. ದುರಸ್ತಿ ಕಾರ್ಯದ ವೆಚ್ಚ ಪಟ್ಟಿ ತಯಾರಿಸಲು ಎಂಜಿನಿಯರ್‌ ಅವರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ಎಂಜಿನಿಯರ್‌ ಕೂಲಿಯಾಳು, ರಸ್ತೆಗೆ ಹಾಕಲಾದ ಕೆಂಪು ಕಲ್ಲಿನ ವೆಚ್ಚದ ಪಟ್ಟಿ ನೀಡಿದ ತತ್‌ಕ್ಷಣ ಪಂಚಾಯತ್‌ನಿಂದ ಮೊತ್ತವನ್ನು ಪಾವತಿಸಲಾಗುವುದು.
 - ಸುಧಾಕರ ಪೂಜಾರಿ ಕಲ್ಲೇರಿ
     ಗ್ರಾ.ಪಂ. ಉಪಾಧ್ಯಕ್ಷರು

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next