ಹೊಸದಿಲ್ಲಿ : ಎಲ್ಲ ವಯೋವರ್ಗದ ಮಹಿಳೆಯರಿಗೆ ಕೇರಳದ ಪವಿತ್ರ ಕ್ಷೇತ್ರ ಶಬರಿಮಲೆಯ ದೇಗುಲಕ್ಕೆ ಪ್ರವೇಶಾವಕಾಶ ಕಲ್ಪಿಸಿರುವ ತನ್ನ ತೀರ್ಪನ್ನು ಪುನರ್ ಪರಿಶೀಲಿಸಬೇಕೆಂಬ ಮನವಿಗಳನ್ನು ಯಾವಾಗ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂಬುದನ್ನು ತಾನು ನಾಳೆ ಮಂಗಳವಾರ ನಿರ್ಧರಿಸುವುದಾಗಿ ಸುಪ್ರೀಂ ಕೋರ್ಟ್ ಇಂದು ಸೋಮವಾರ ಹೇಳಿದೆ. ಆ ಪ್ರಕಾರ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆಂದು ನಾಳೆ ಮಂಗಳವಾರಕ್ಕೆ ಈ ವಿಷಯ ಲಿಸ್ಟ್ ಆಗಲಿದೆ.
ಎಲ್ಲ ವಯೋವರ್ಗದ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಾವಕಾಶ ಕಲ್ಪಿಸುವ ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ವಕೀಲ ಮ್ಯಾಥ್ಯೂಸ್ ಜೆ ನೆಡುಂಪಾರಾ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆ ಎತ್ತಿಕೊಳ್ಳುವ ನಿಟ್ಟಿನಲ್ಲಿ ನಾಳೆ ಮಂಗಳವಾರ ನಿರ್ಧರಿಸಲಾಗುವುದು ಎಂದು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ಜಸ್ಟಿಸ್ ಎಸ್ ಕೆ ಕೌಲ್ ಅವರನ್ನು ಒಳಗೊಂಡ ಪೀಠ ಹೇಳಿತು.
“ನಮ್ಮ ಮುಂದೆ ಸುಮಾರು 19 ಪುನರ್ ವಿಮಶಾì ಕೋರಿಕೆ ಅರ್ಜಿಗಳು ಬಾಕಿ ಇವೆ ಎಂಬುದನ್ನು ನಾವು ಗಮನಿಸಿದ್ದೇವೆ; ಅಂತೆಯೇ ನಾಳೆ ಮಂಗಳವಾರ ನಾವು ಈ ಬಗ್ಗೆ ನಿರ್ಧಾರ ಕೈಗೊಳ್ಳುವೆವು’ ಎಂದು ಪೀಠ ಹೇಳಿತು.
ವಕೀಲ ನೆಡುಂಪಾರಾ ಅವರು “ನ್ಯಾಶನಲ್ ಅಯ್ಯಪ್ಪ ಡಿವೋಟೀಸ್ ಅಸೋಸಿಯೇಶನ್’ ಸಲ್ಲಿಸಿರುವ ಮೇಲ್ ಮನವಿಯನ್ನು ಉಲ್ಲೇಖೀಸಿದ್ದಾರೆ.
ಎಲ್ಲ ವಯೋವರ್ಗದ ಮಹಿಳೆಯರಿಗೆ ಶಬರಿಮಲೆ ದೇವಳ ಪ್ರವೇಶಾವಕಾಶ ಕಲ್ಪಿಸುವ ಐತಿಹಾಸಿಕ ತೀರ್ಪನ್ನು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ 4-1ರ ಬಹುಮತದೊಂದಿಗೆ ಈಚೆಗೆ ನೀಡಿತ್ತು.