Advertisement

ಎಸ್‌ಸಿ, ಎಸ್‌ಟಿ ಅನುದಾನದಲ್ಲಿ ಅವ್ಯವಹಾರ?

07:29 AM Jun 08, 2019 | Lakshmi GovindaRaj |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಹಲವು ಯೋಜನೆಗಳ ಅನುದಾನ ನೀಡುವಿಕೆಯಲ್ಲಿ ಕೆಲವು ಬ್ಯಾಂಕ್‌ಗಳು ಮತ್ತು ಮಧ್ಯವರ್ತಿಗಳು ಸೇರಿಕೊಂಡು ಅವ್ಯವಹಾರ ನಡೆಸಿರುವುದು ಬೆಂಗಳೂರು ನಗರ ಜಿಲ್ಲಾ ಲೀಡ್‌ ಬ್ಯಾಂಕ್‌ ಗಮನಕ್ಕೆ ಬಂದಿದೆ.

Advertisement

ಬನಶಂಕರಿಯ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಈ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗಿದ್ದು, ತಪ್ಪಿತಸ್ಥ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಲೀಡ್‌ ಬ್ಯಾಂಕ್‌ ಮುಖ್ಯಸ್ಥ ಕೆ.ಎನ್‌.ಮಂಜುನಾಥ್‌ ಸಭೆಯಲ್ಲಿ ಪ್ರಸ್ತಾಪಿಸಿದರು.

ಯಾವುದೇ ಕಾರಣಕ್ಕೂ ಬ್ಯಾಂಕ್‌ ಅಧಿಕಾರಿಗಳು, ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು. ಹಾಗೇನಾದರೂ ಅವಕಾಶ ನೀಡಿದರೆ ಆಯಾ ಬ್ಯಾಂಕ್‌ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಭೆಗೆ ಅಧಿಕಾರಿಗಳ ಗೈರು: ಜಿಲ್ಲಾಮಟ್ಟದ ಬ್ಯಾಂಕರ್‌ಗಳ ಸಭೆಯಲ್ಲಿ ಪ್ರಮುಖವಾಗಿ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಬಾಬು ಜಗಜೀವನ್‌ ರಾಮ್‌ ಚರ್ಮ ಉದ್ಯಮ, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳ ಗೈರುಹಾಜರಿ ಎದ್ದು ಕಾಣುತ್ತಿತ್ತು.

ಅಧಿಕಾರಿಗಳ ಗೈರುಹಾಜರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಲೀಡ್‌ ಬ್ಯಾಂಕ್‌ ಅಧ್ಯಕ್ಷ ಮಂಜುನಾಥ್‌, ಹಿರಿಯ ಅಧಿಕಾರಿಗಳ ಸಭೆಗೆ ಇಲಾಖಾವಾರು ಅಧಿಕಾರಿಗಳು ಗೈರುಹಾಜರಾದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಗತಿ ಬಗ್ಗೆ ಚರ್ಚಿಸಲು ಕರೆದಿರುವ ಇಂತಹ ಸಭೆಗೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ತಾಕೀತು ಮಾಡಿದರು.

Advertisement

ಇ-ಮೇಲ್‌ ಮಾಡ್ತೀವಿ ಸರ್‌: ಸಭೆಗೆ ಹಾಜರಾಗಿದ್ದ ವಿವಿಧ ಇಲಾಖಾವಾರು ಅಧಿಕಾರಿಗಳಿಗೆ ತಮ್ಮ ಇಲಾಖೆಯಲ್ಲಿ ಆಗಿರುವ ಪ್ರಗತಿಯ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಯಾರನ್ನೇ ಪ್ರಶ್ನಿಸಿದರು. “ಸರ್‌, ಮೇಲಧಿಕಾರಿಗಳು ಇಲಾಖಾವಾರು ಮತ್ತೂಂದು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ನಾನು ಹೊಸದಾಗಿ ಬಂದಿದ್ದೇನೆ. ನನಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ವರದಿ ಪ್ರತಿಯನ್ನು ಇ-ಮೇಲ್‌ ಮಾಡ್ತೀನಿ ಸರ್‌,’ ಎಂಬ ಉತ್ತರಗಳು ಬಂದವು.

ಇದರಿಂದ ಕೋಪಗೊಂಡ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮುನಿರಾಜು, ಪ್ರತಿ ಸಭೆಯಲ್ಲೂ ಹೀಗೆ ಹೇಳಿದರೆ ಹೇಗೆ. ಸಭೆಗೆ ಒಂದು ಘನತೆ ಇಲ್ಲವೆ ಎಂದರು. ಮುಂದಿನ ಸಭೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡ ಅವರು ಭಾಗವಹಿಸಲಿದ್ದು, ಸಂಪೂರ್ಣ ಪ್ರಗತಿ ವಿವರ ನೀಡುವಂತೆ ಸೂಚಿಸಿದರು.

10 ರೂ. ನೋಟ್‌ ಮುದ್ರಣ ನಿಲ್ಲಿಸಿ!: ಜಿಲ್ಲಾಮಟ್ಟದ ಬ್ಯಾಂಕರ್‌ಗಳ ಸಭೆಯಲ್ಲಿ ಹಾಜರಾಗಿದ್ದ ಇಂಡಿಯನ್‌ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು, ಸರ್‌, 10 ರೂ.ಕಾಯಿನ್‌ ಅನ್ನುಗ್ರಾಹಕರು ತೆಗೆದುಕೊಳ್ಳುತ್ತಿಲ್ಲ. ಸುಮಾರು 3 ಲಕ್ಷ ರೂ.ಕಾಯಿನ್‌ ನಮ್ಮ ಬ್ಯಾಂಕ್‌ನಲ್ಲಿದೆ. ಹೀಗಾಗಿ 10 ರೂ. ಮುದ್ರಣ ನಿಲ್ಲಿಸುವಂತೆ ಆರ್‌ಬಿಐನ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ ಪ್ರಸಂಗ ನಡೆಯಿತು.

ಈ ವೇಳೆ ಮಾತನಾಡಿದ ಆರ್‌ಬಿಐನ ಹಿರಿಯ ಅಧಿಕಾರಿ ಬಾಲಚಂದರ್‌, ಆರ್‌ಬಿಐ ಹತ್ತು ರೂ.ನೋಟು ಮುದ್ರಣ ಮಾಡುತ್ತದೆ. 10 ರೂ.ಕಾಯಿನ್‌ ಸರ್ಕಾರ ಜಾರಿಗೆ ತಂದಿದೆ. ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಯಿನ್‌ ಗ್ರಾಹಕರು ತೆಗೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡಿ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಆರ್‌ಬಿಐನ ಹಿರಿಯ ಅಧಿಕಾರಿಗಳು ಗಮನಕ್ಕೆ ತರುವುದಾಗಿ ಹೇಳಿದರು. ನಬಾರ್ಡ್‌ ಅಧಿಕಾರಿ ಪ್ರಭಾ ಸೇರಿದಂತೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next