ಹೊಸದಿಲ್ಲಿ: ಸರಕಾರದ ವಿವಿಧ ಸೇವೆಗಳು ಮತ್ತು ಕಲ್ಯಾಣ ಕಾರ್ಯಕ್ರಮ ಯೋಜನೆಗಳನ್ನು ಪಡೆಯಲು ಆಧಾರ್ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಎಲ್ಲ ದೂರುಗಳ ವಿಚಾರಣೆಗಾಗಿ ಸುಪ್ರೀಂಕೋರ್ಟ್ ಸಂವಿಧಾನ ಪೀಠವನ್ನು ರಚಿಸಿದೆ.
ನವೆಂಬರ್ ಕೊನೆಯ ವಾರದಂದು ಈ ಪೀಠ ವಿಚಾರಣೆ ಆರಂಭಿಸಲಿದೆ ಎಂದು ಮುಖ್ಯ ನ್ಯಾ| ದೀಪಕ್ ಮಿಶ್ರಾ, ನ್ಯಾ| ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ. ಇದರಿಂದ ಆಧಾರ್‌ಗೆ ಸಂಬಂಧಿಸಿದ ಎಲ್ಲ ದೂರುಗಳನ್ನೂ ಒಂದೇ ವೇದಿಕೆಯಲ್ಲಿ ವಿಚಾರಣೆ ನಡೆಸಲು ಸಾಧ್ಯವಾಗಲಿದೆ.
ಈ ಹಿಂದೆ ಖಾಸಗಿತನ ಕುರಿತ ಅರ್ಜಿಯ ವಿಚಾರಣೆ ನಡೆಸಿದ್ದ ಒಂಬತ್ತು ನ್ಯಾಯಮೂರ್ತಿಗಳಿದ್ದ ಪೀಠವು, ಸಂವಿಧಾನದ ಪ್ರಕಾರ ಖಾಸಗಿತನದ ಹಕ್ಕು ಮೂಲಭೂತ ಹಕ್ಕಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಖಾಸಗಿತನದ ಹಕ್ಕನ್ನು ಆಧಾರ್ ಉಲ್ಲಂ ಸುತ್ತದೆ ಎಂದು ಆರೋಪಿಸಿ ಹಲವರು ಈಗಾಗಲೇ ದೂರು ಸಲ್ಲಿಸಿದ್ದಾರೆ. ಇನ್ನೊಂದೆಡೆ, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದಕ್ಕೆ ಸಂಬಂಧಿಸಿದಂತೆ ಡಿ. 31 ಕೊನೆಯ ದಿನವಾಗಿದ್ದು, ಆಧಾರ್ ಇಲ್ಲದವರಿಗೆ ಮುಂದಿನ ವರ್ಷದ ಮಾರ್ಚ್‌ವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಈ ದಿನಾಂಕದಲ್ಲಿ ಯಾವುದೇ ಬದಲಿಲ್ಲ ಎಂದಿದೆ.
ಮಮತಾಗೆ ತರಾಟೆ: ಆಧಾರ್ ಕಡ್ಡಾಯಗೊಳಿಸಿರುವುದರ ವಿರುದ್ಧ ಪಶ್ಚಿಮ ಬಂಗಾಲ ಸರಕಾರ ಸಲ್ಲಿಸಿದ ದೂರಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಸಿಎಂ ಮಮತಾ ಬ್ಯಾನರ್ಜಿಯನ್ನು ತರಾಟೆಗೆ ತೆಗೆದುಕೊಂಡಿದೆ. ಸಂಸತ್ ತೆಗೆದುಕೊಂಡ ನಿರ್ಣಯವನ್ನು ರಾಜ್ಯ ಸರಕಾರ ಪ್ರಶ್ನಿಸುವುದು ಹೇಗೆ ಸಾಧ್ಯ? ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ. ಇದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಲ್ಲವೇ ಎಂದು ಪ್ರಶ್ನಿಸಿದೆ.
ಕೇಂದ್ರ ಸರಕಾರದ ನೀತಿಯನ್ನು ಪ್ರಶ್ನಿಸಿ ವೈಯಕ್ತಿಕ ನೆಲೆಯಲ್ಲಿ ದೂರು ದಾಖಲಿಸಬಹುದು. ಬೇಕಿದ್ದರೆ ಮಮತಾ ಬ್ಯಾನರ್ಜಿ ವೈಯಕ್ತಿಕವಾಗಿ ದೂರು ಸಲ್ಲಿಸಲಿ. ಆದರೆ ಸರಕಾರವೇ ಇದನ್ನು ಪ್ರಶ್ನಿಸಲಾಗದು ಎಂದು ಕೋರ್ಟ್ ಹೇಳಿದೆ. ಪ್ರಕರಣದಲ್ಲಿ ಪ.ಬಂಗಾಳ ಪರವಾಗಿ ವಾದಿಸಿದ ಕಪಿಲ್ ಸಿಬಲ್, ಕೇಂದ್ರ ಸರಕಾರದ ವಿರುದ್ಧ ದೂರು ಸಲ್ಲಿಸಲು ರಾಜ್ಯ ಸರಕಾರಕ್ಕೆ ಅವಕಾಶವಿದೆ. ಅಲ್ಲದೆ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಸಬ್ಸಿಡಿಗೆ ಆಧಾರ್ ನೀತಿ ಅನ್ವಯವಾಗುತ್ತದೆ ಎಂದು ವಾದಿಸಿದರಾದರೂ, ಕೋರ್ಟ್ ಇದನ್ನು ತಳ್ಳಿಹಾಕಿದೆ.
ಇದೇ ವೇಳೆ, “ಕೋರ್ಟ್‌ನ ನಿರ್ಧಾರವನ್ನು ನಾನು ಗೌರವಿಸುತ್ತೇನೆ’ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹೀಗಾಗಿ ಅವರು ವೈಯಕ್ತಿಕ ನೆಲೆಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.