ಹೊಸದಿಲ್ಲಿ : ಸಿಬಿಐ ಮಧ್ಯಾಂತರ ನಿರ್ದೇಶಕ ಎಂ ನಾಗೇಶ್ವರ ರಾವ್ ಅವರ ನೇಮಕಾತಿ ಬಗ್ಗೆ ನ್ಯಾಯಾಲಯವನ್ನು ಟೀಕಿಸಿ ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಕಾರ್ಯಕರ್ತ, ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಮಾಡಿರುವುದಾಗಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿಯ ಪ್ರಕಾರ ಸುಪ್ರೀಂ ಕೋರ್ಟ್, ಭೂಷಣ್ ಅವರಿಗೆ ನೊಟೀಸ್ ಜಾರಿ ಮಾಡಿದೆ.
ಈ ನೊಟೀಸಿಗೆ ಉತ್ತರಿಸಲು ಭೂಷಣ್ ಗೆ ಮೂರು ವಾರಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ನೀಡಿದೆ.
ನ್ಯಾಯ ತೀರ್ಮಾನವಾಗಲಿಕ್ಕಿರುವ ವಿಷಯದ ಬಗ್ಗೆ ವಕೀಲರಾಗಲೀ ಯಾವನೇ ವ್ಯಕ್ತಿಯಾಗಲೀ ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವ ರೀತಿಯಲ್ಲಿ ನ್ಯಾಯಾಲಯವನ್ನು ಟೀಕಿಸುಬಹುದೇ ಎಂಬ ವಿಶಾಲ ನೆಲೆಯಲ್ಲಿ ಈ ಪ್ರಶ್ನೆಯನ್ನು ತಾವು ವಿಶ್ಲೇಷಿಸುವುದಾಗಿ ಜಸ್ಟಿಸ್ ಅರುಣ್ ಮಿಶ್ರಾ ಮತ್ತು ನವೀನ್ ಸಿನ್ಹಾ ಅವರನ್ನು ಒಳಗೊಂಡ ಪೀಠವು ಹೇಳಿತು.
ನ್ಯಾಯಾಲಯವನ್ನು ಟೀಕಿಸುವ ಮೂಲಕ ನ್ಯಾಯದಾನ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ನಡೆಸಿದಂತಾಗುವುದು ಎಂದು ಪೀಠವು ಅಭಿಪ್ರಾಯ ಪಟ್ಟಿತು.
ಈ ವಿಷಯವನ್ನು ನಾವು ವಿಸ್ತೃತ ನೆಲೆಯಲ್ಲಿ ವಿಚಾರಣೆ ನಡೆಸಬೇಕಾಗಿದೆ; ಅಂತೆಯೇ ನೊಟೀಸ್ ಜಾರಿ ಮಾಡಲಾಗಿದೆ ಎಂದು ಪೀಠವು ಹೇಳಿತು.
ಪೀಠವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 7ಕ್ಕೆ ನಿಗದಿಸಿತು.