ನವದೆಹಲಿ: ಸಂದೇಶ್ ಖಾಲಿಯಲ್ಲಿ ದೈಹಿಕ ದೌರ್ಜನ್ಯ ಮತ್ತು ಭೂ ಅತಿಕ್ರಮಣದ ಆರೋಪ ಎದುರಿಸುತ್ತಿರುವ ಷಹಜಹಾನ್ ಶೇಕ್ ಮತ್ತು ಸಹಚರರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಕೋಲ್ಕತಾ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಸೋಮವಾರ (ಜುಲೈ 08) ವಜಾಗೊಳಿಸಿದೆ.
ಇದನ್ನೂ ಓದಿ:SSMB29: ಮಹೇಶ್ – ಪ್ರಭಾಸ್ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್ ನೀಡಲಿದ್ದಾರೆ ಹಿರಿಯ ನಟ
ಪ್ರಕರಣದಲ್ಲಿ ಯಾರೋ ಒಬ್ಬರನ್ನು ರಕ್ಷಿಸಲು ರಾಜ್ಯ ಸರ್ಕಾರ ಯಾಕೆ ಆಸಕ್ತಿ ವಹಿಸಬೇಕು? ಎಂದು ಜಸ್ಟೀಸ್ ಬಿಆರ್ ಗವಾಯಿ ಮತ್ತು ಜಸ್ಟೀಸ್ ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಸುಪ್ರೀಂ ಪೀಠ ಪ್ರಶ್ನಿಸಿದೆ.
ಕಳೆದ ಬಾರಿಯ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ವಕೀಲರ ಬಳಿ ಈ ವಿಚಾರದಲ್ಲಿ ಸ್ಪಷ್ಟ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಲಾಗಿತ್ತು.
ಥ್ಯಾಂಕ್ಯೂ…ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಪೀಠ ತಿಳಿಸಿದೆ. ಸಂದೇಶ್ ಖಾಲಿಯಲ್ಲಿನ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಜನವರಿ 5ರಂದು ಮೂರು ಎಫ್ ಐಆರ್ ದಾಖಲಿಸಿತ್ತು.
ಸಂದೇಶ್ ಖಾಲಿಯಲ್ಲಿನ ಭೂ ಕಬಳಿಕೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ತನಿಖೆ ನಡೆಸಿ, ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ಕೋಲ್ಕತಾ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿತ್ತು.