ನವದೆಹಲಿ: ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಕೋವಿಡ್ ಗೆ ಲಸಿಕೆ ಲಭ್ಯವಾಗುವವರೆಗೂ ಕಠಿಣ ನಿಯಮವನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸುಪ್ರೀಂಕೋರ್ಟ್ ಮನವಿ ಮಾಡಿಕೊಂಡಿದೆ. ಅಲ್ಲದೇ ದೇಶಾದ್ಯಂತ ಕೋವಿಡ್ ಸೋಂಕು ಹರಡದಂತೆ ಕಠಿಣ ಕ್ರಮ ಕೈಗೊಂಡು ನಿಯಮಾವಳಿ ರೂಪಿಸುವಂತೆ ಸುಪ್ರೀಂಕೋರ್ಟ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಕೋವಿಡ್ ಸೋಂಕು ಪರಿಸ್ಥಿತಿಯನ್ನು ನಿಯಂತ್ರಿಸಲು ಕಠಿಣ ನಿಯಮದ ಅಗತ್ಯವಿದೆ ಎಂಬುದನ್ನು ಸುಪ್ರೀಂ ಪೀಠ ಮನಗಂಡಿದೆ. ಈ ಕುರಿತ ವಿಚಾರಣೆಯನ್ನು 2020ರ ಡಿಸೆಂಬರ್ 1ಕ್ಕೆ ಮುಂದೂಡಿದೆ.
ದೇಶದಲ್ಲಿ ಕೋವಿಡ್ 19 ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ನೀತಿ, ಮಾರ್ಗಸೂಚಿ ಮತ್ತು ವ್ಯವಸ್ಥಿತ ಕಾರ್ಯಾಚರಣೆಯ ಪ್ರಕ್ರಿಯೆ ಮೂಲಕ ಜಾರಿಗೊಳಿಸಲು ಇದು ಸಕಾಲವಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಈ ಸಂದರ್ಭದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ರಾಜ್ಯಗಳ ಕಾರ್ಯವೈಖರಿಗೆ ಚಾಟಿ ಬೀಸಿದ್ದು, ರಾಜಕೀಯ ಮೀರಿ ಎಲ್ಲರೂ ಸೋಂಕು ನಿವಾರಿಸಲು ಕೈಜೋಡಿಸಬೇಕಾಗಿದೆ ಎಂದು ಕೋರ್ಟ್ ಹೇಳಿದೆ.