ಹೊಸದಿಲ್ಲಿ : ಅಸ್ಸಾಂ ಎನ್‌ಆರ್‌ಸಿ ಕರಡು ಪಟ್ಟಿಗೆ ಸೇರ್ಪಡೆಯಾಗದ ಜಿಲ್ಲಾವಾರು ಜನರ ಶೇಕಡಾವಾರು ವಿವರಗಳನ್ನು ನೀಡುವಂತೆ ಸುಪ್ರಿಂ ಕೋರ್ಟ್ ಅಸ್ಸಾಂ ಎನ್‌ಆರ್‌ಸಿ ಸಂಚಾಲಕ ಪ್ರತೀಕ್ ಹಜೇಲಾ ಅವರಿಗೆ ಆದೇಶಿಸಿದ್ದು ಮುಂದಿನ ವಿಚಾರಣೆಯನ್ನು ಆ.28ಕ್ಕೆ ನಿಗದಿಸಿದೆ.
ಅಸ್ಸಾಂ ಕರಡು ಎನ್‌ಆರ್‌ಸಿಯ ಪ್ರತಿಗಳು ಜನರಿಗೆ ಸುಲಭದಲ್ಲಿ ದೊರಕುವಂತಾಗಲು ಅವುಗಳ ಪ್ರತಿಗಳನ್ನು ಎಲ್ಲ ಪಂಚಾಯತ್ ಕಾರ್ಯಾಲಯಗಳಲ್ಲಿ ಸಿಗುವಂತೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹಜೇಲಾ ಅವರಿಗೆ ಆದೇಶಿಸಿದೆ.
ಇದೇ ರೀತಿ ಕ್ಲೇಮು ಮತ್ತು ಆಕ್ಷೇಪ ಸಲ್ಲಿಸುವ ಅರ್ಜಿ ನಮೂನೆಗಳನ್ನು ಆಗಸ್ಟ್ 20ರೊಳಗೆ ಸಾರ್ವಜನಿಕರಿಗೆ ಸಿಗುವಂತೆ ಮಾಡಬೇಕೆಂದು ಸೂಚಿಸಿರುವ ಸುಪ್ರೀಂ ಕೋರ್ಟ್, ಇವುಗಳನ್ನು ಆಗಸ್ಟ್ 30ರಿಂದ ಸ್ವೀಕರಿಸುವ ಕೆಲಸವನ್ನು ಆರಂಭಿಸುವಂತೆ ಸೂಚಿಸಿದೆ.
ಅಸ್ಸಾಂ ಎನ್‌ಆರ್‌ಸಿ ಕುರಿತಂತೆ ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್, ಆಲ್ ಅಸ್ಸಾಂ, ಮೈನಾರಿಟಿ ಸ್ಟೂಡೆಂಟ್ಸ್ ಯೂನಿಯನ್ ಸೇರಿದಂತೆ ಎಲ್ಲ ಹಿತಾಸಕ್ತಿದಾರರ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟ್ ಕೇಳಿದೆ.
ಈ ಹಿಂದೆ ಅಸ್ಸಾಂ ಎನ್‌ಆರ್‌ಸಿ ಕುರಿತಂತೆ ತಮ್ಮ ಅಧಿಕಾರ ವ್ಯಾಪ್ತಿ ಮೀರಿದ ಸಾರ್ವಜನಿಕ ಹೇಳಿಕೆ ನೀಡಿದ ಕಾರಣಕ್ಕೆ ಸುಪ್ರೀಂ ಕೋರ್ಟ್ ಎನ್‌ಆರ್‌ಸಿ ಸಂಚಾಲಕ ಹಜೇಲಾ ಅವನ್ನು ತರಾಟೆಗೆ ತೆಗೆದುಕೊಂಡಿತ್ತು. “ನಿಮ್ಮ ಕೆಲಸ ಎನ್‌ಆರ್‌ಸಿ ಕರಡು ಸಿದ್ಧಪಡಿಸುವುದೇ ಹೊರತು ಮಾಧ್ಯಮಕ್ಕೆ ಮಾಹಿತಿ ನೀಡುವುದಲ್ಲ; ಮಾಧ್ಯಮಕ್ಕೆ ಮಾಹಿತಿ ನೀಡಲು ನೀವು ಯಾರು?’ ಎಂದು ಜಸ್ಟಿಸ್ ರಂಜನ್ ಗೊಗೋಯಿ ನೇತೃತ್ವದ ಪೀಠ ಪ್ರಶ್ನಿಸಿತ್ತು.