ಹುಬ್ಬಳ್ಳಿ: ಮನೆ ಹಾಗೂ ಕಾರು ಖರೀದಿಗೆ ಸಾಲ ಸೌಲಭ್ಯ ನಿಟ್ಟಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಸೆ.16-17ರಂದು ಇಲ್ಲಿನ ವಿದ್ಯಾನಗರದ ರಾಯ್ಕರ್ ಮೈದಾನದಲ್ಲಿ “ಎಸ್‌ಬಿಐ ಸಾಲ ಉತ್ಸವ’ ಹಮ್ಮಿಕೊಂಡಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಬಿಐನ ಉಪಪ್ರಧಾನ ವ್ಯವಸ್ಥಾಪಕ ಇಂದ್ರನೀಲ ಭಾಂಜಾ, ಸಾಲ ಉತ್ಸವ ಮೂಲಕ ಗ್ರಾಹಕರಿಗೆ ಗೃಹ ಹಾಗೂ ಕಾರು ಖರೀದಿ ಸಾಲಕ್ಕೆ ಸ್ಥಳದಲ್ಲಿಯೇ ಮಂಜೂರಾತಿ ಕಲ್ಪಿಸಲಾಗುತ್ತದೆ.
ಸೆ.16ರಂದು ಬೆಳಿಗ್ಗೆ 10:30ಗಂಟೆಗೆ ಉದ್ಯಮಿ ಬಸಂತ ಕುಮಾರ ಪಾಟೀಲ ಅವರು ಮೇಳ ಉದ್ಘಾಟಿಸಲಿದ್ದು, ಕ್ರೆಡೈ ಹುಬ್ಬಳ್ಳಿ ಘಟಕದ ಅಧ್ಯಕ್ಷ ಪ್ರದೀಪ ರಾಯ್ಕರ್, ಎಸ್‌ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ಎಂ. ಫಾರೂಕ್ ಶಹಬ್ ಪಾಲ್ಗೊಳ್ಳಲಿದ್ದಾರೆ ಎಂದರು. ಬೆಂಗಳೂರಿನಲ್ಲಿ ನಡೆದ ಎಸ್‌ಬಿಐ ಸಾಲ ಉತ್ಸವದಲ್ಲಿ ಸುಮಾರು 1,600 ಕೋಟಿ ರೂ.ನಷ್ಟು ವಹಿವಾಟು ನಡೆದಿತ್ತು.
ಹುಬ್ಬಳ್ಳಿ ಬೆಂಗಳೂರಿನಷ್ಟು ದೊಡ್ಡದಲ್ಲ. ಆದರೆ ಇಲ್ಲಿ ಮಹತ್ವದ ವಹಿವಾಟಿನ ವಿಶ್ವಾಸವಂತೂ ಇದೆ. ನನ್ನ ಅನಿಸಿಕೆ ಪ್ರಕಾರ ಮುಂಬೈಗೆ ಸವಾಲೊಡ್ಡುವ ಸಾಮರ್ಥ್ಯ ಹುಬ್ಬಳ್ಳಿಗಿದೆ ಎಂದರು. ಎಸ್‌ಬಿಐ ಹುಬ್ಬಳ್ಳಿ ಪ್ರಾದೇಶಿಕ ವ್ಯವಸ್ಥಾಪಕ ಆನಂದ ಪಾಟೀಲ ಮಾತನಾಡಿ, ಎಸ್‌ಬಿಐ ಸಾಲ ಉತ್ಸವದಲ್ಲಿ ಕ್ರೆಡೈ, ವಿವಿಧ ಕಾರು ಕಂಪೆನಿಗಳೂ ಭಾಗಿಯಾಗುತ್ತಿವೆ. 50 ಮಳಿಗೆಗಳನ್ನು ನಿರ್ಮಿಸಲಾಗುತ್ತದೆ ಎಂದರು.
ಸಾಲ ಮೇಳದಲ್ಲಿ ಮನೆ ಸಾಲಕ್ಕೆ ಶೇ.8.4ರ ಬಡ್ಡಿದರಲ್ಲಿ ಹಾಗೂ ಮಹಿಳೆಯರಿಗೆ ಶೇ.8.35ರ ಬಡ್ಡಿದರಲ್ಲಿ ಸಾಲ ನೀಡಲಾಗುತ್ತದೆ. ಕಾರು ಸಾಲಕ್ಕೆ ಶೇ.8.57ರಿಂದ ಶೇ.9.25ರ ಬಡ್ಡಿದರ ಸಾಲ ದೊರೆಯುತ್ತದೆ. ಮೇಳದಲ್ಲಿ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸೆ.16ರಂದು ಸಂಜೆ ಪ್ರವೀಣ ಗೋಡಖೀಂಡಿ ಅವರಿಂದ ಕೊಳಲು ವಾದನ, ಸೆ.17ರಂದು ಸಂಜೆ ಗಂಗಾವತಿ ಪ್ರಾಣೇಶ ಹಾಗೂ ತಂಡದವರಿಂದ ಹಾಸ್ಯ ಸಂಜೆ ನಡೆಯಲಿದೆ ಎಂದರು. ಎಸ್‌ಬಿಐ ಎಜಿಎಂ ವಾಸಂತಿ ಎಚ್., ಹುಬ್ಬಳ್ಳಿ ಪ್ರಾದೇಶಿಕ ವ್ಯವಸ್ಥಾಪಕ ವಿಜಯಕುಮಾರ ಚೌರಾಸಿಯಾ, ಗದಗ ಪ್ರಾದೇಶಿಕ ವ್ಯವಸ್ಥಾಪಕ ಎಂ.ಎ. ಜೈಶಂಕರ, ಉತ್ತರ ಕನ್ನಡ ಪ್ರಾದೇಶಿಕ ವ್ಯವಸ್ಥಾಪಕ ರಾಜೀವ್ ಪ್ರಕಾಶ ಇನ್ನಿತರರು ಇದ್ದರು.