ಮುಂಬಯಿ: ಸಮಗ್ರ ಜಿಎಸ್‌ಬಿ ಸಂಸ್ಥೆಗಳ ಸಾರಥ್ಯ ಹಾಗೂ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳ ಗೌಡ ಸಾರಸ್ವತ್ ಬ್ರಾಹ್ಮಣ ಸಮಾಜ ಬಾಂಧವರ ಒಗ್ಗೂಡುವಿಕೆಯಲ್ಲಿ ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶರಾಗಿದ್ದು ದೈವೈಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಮತ್ತು ಕಾಶೀಮಠ ಸಂಸ್ಥಾನದ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಪರ ಭಕ್ತಿನಿಷ್ಠೆ ಭಕ್ತಿಪೂರ್ವಕ ಮಹಾಸಭೆಯು ನ. 19 ರಂದು ಸಂಜೆ ದಹಿಸರ್ ಪೂರ್ವದ ಎನ್.ಎಲ್ ಕಾಂಪ್ಲೆಕ್ಸ್‌ನಲ್ಲಿನ ಕಲ್ಚರಲ್ ಆ್ಯಂಡ್ ರಿಕ್ರಿಯೇಶನ್ ಸೆಂಟರ್ ಮೈದಾನದಲ್ಲಿ ನಡೆಯಿತು.
ದಹಿಸರ್ ಪೂರ್ವದ ಶ್ರೀ ಕಾಶೀಮಠ ಸಂಸ್ಥಾನದ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀ ವಿಟ್ಠಲ ರುಖುಮಯಿ ದೇವರಿಗೆ ಪೂಜೆ ನೆರವೇರಿಸಿ ಬಳಿಕ ರಿಕ್ರಿಯೇಶನ್ ಮೈದಾನದಲ್ಲಿ ಶ್ರೀ ಭುವನೇಂದ್ರ ತೀರ್ಥ ಸ್ವಾಮೀಜಿಗಳ ಪುಣ್ಯತಿಥಿ ಸುದಿನ ಸಜ್ಜುಗೊಳಿಸಿದ ಪಾವಿತ್ರ್ಯತ ವೇದಿಕೆಯಲ್ಲಿ ಜಿಎಸ್‌ಬಿ ಸಮುದಾಯದ ಹಿರಿಯ ಮುತ್ಸದ್ಧಿಗಳು ಪಾಲ್ಗೊಂಡು ಪೂಜ್ಯತಾ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಮತ್ತು ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ, ಹರಿಗುರುಗಳ ಅನುಗ್ರಹಗಳೊಂದಿಗೆ ಮಹಾಸಭೆಯನ್ನು ಆರಂಭಿಸಲಾಯಿತು. ವೇದಮೂರ್ತಿ ಬಂಟ್ವಾಳಕೃಷ್ಣ ಭಟ್ ಪ್ರಾರ್ಥನೆಗೈದರು. ಭುವನೇಂದ್ರ ತೀರ್ಥರ ಭಾವಚಿತ್ರಕ್ಕೆ ಆರತಿ ನೆರವೇರಿಸಿ ಮಹಾಸಭೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು
ಜಿಎಸ್‌ಬಿ ಸಮಾಜದ ಧುರೀಣರಾದ ನಾಗೇಂದ್ರ ಶೆಣೈ ಮಂಗಳೂರು, ಮೋಹನದಾಸ್ ಮಲ್ಯ, ನ್ಯಾಯವಾದಿ ಎಂ. ವಿ. ಕಿಣಿ, ರಘುನಂದನ ಎಸ್. ಕಾಮತ್ ನ್ಯಾಚುರಲ್ ಐಸ್‌ಕ್ರೀಂ, ಜಿ. ಡಿ. ರಾವ್, ಕುಂದಾಪುರ ಶ್ರೀನಿವಾಸ ಪ್ರಭು, ಜಿ. ಸುರೇಶ್ ಕಾಮತ್, ಪದ್ಮನಾಭ ಶೆಣೈ, ಜಿತೇಂದ್ರ ನಾಯಕ್ ನಾಗ್ಪುರ, ಕೆ. ಆರ್. ಮಲ್ಯ, ಎಂ. ಉದಯ ಪಡಿಯಾರ್, ಸಾಣೂರು ಮನೋಹರ್ ವಿ. ಕಾಮತ್ ಮತ್ತಿತರರು ಉಪಸ್ಥಿತರಿದ್ದು ಯತಿವರ್ಯರಲ್ಲಿನ ತಮ್ಮ ಪೂಜ್ಯಭಾವನೆ ವ್ಯಕ್ತಪಡಿಸಿ ಸ್ವಾಮಿನಿಷ್ಠೆ ಮೆರೆದರು.
ನಾವು ಯಾವೊತ್ತೂ ಏಕ ಸ್ವಾಮಿ ನಿಷ್ಠರು. ಅಂದು, ಇಂದು, ಮುಂದೆಂದೂ ನಮಗೊಬ್ಬರೇ ಗುರುಗಳು. ಪೂಜ್ಯ ಸುಧೀಂದ್ರ ತೀರ್ಥರಿಂದ ಉತ್ತರಾಧಿಕಾರಿಯಾಗಿ ನೇಮಿಸಲ್ಪಟ್ಟ ಸಂಯಮೀಂದ್ರತೀರ್ಥರೇನಮ್ಮ ಪೂಜ್ಯ ಗುರು ವರ್ಯರು. ಇವರೇ ನಮ್ಮ ಮಠಾಧಿಪತಿಗಳು. ಇವರನ್ನು ಬಿಟ್ಟರೆ ನಮಗ್ಯಾರೂ ಪೀಠಾ ಧಿಪತಿಗಳಿಲ್ಲ. ಮತ್ಯಾರನ್ನೂ ನಾವು ಗುರುವರ್ಯರನ್ನಾಗಿ ಸ್ವೀಕರಿಸುವ ಪ್ರಶ್ನೆಯೇಇಲ್ಲ ಎಂದು ಕಿಕ್ಕಿರಿದು ನೆರೆದ ಜಿಎಸ್‌ಬಿ ಬಂಧುಗಳು ಒಕ್ಕೊ ರಲಿನಿಂದ ಸಭೆಯಲ್ಲಿ ಸಮರ್ಥಿಸಿಕೊಂಡರು.
ಕಾರ್ಯಕ್ರಮದಲ್ಲಿ ಸುಧೀಂದ್ರ ತೀರ್ಥರ ಗುರುನಿಷ್ಠೆಗೆ ಪಾತ್ರರಾದ ದಿ. ದಿನೇಶ್ ಎಸ್. ಪೈ ಅವರನ್ನು ಮರಣೋತ್ತರವಾಗಿ, ಬಂಟ್ವಾಳ ಕೃಷ್ಣ ಭಟ್, ಬಾಬುರಾಯ ಶೆಣೈ, ಅಶೋಕ್ ನಾಯಕ್, ನಂದಕುಮಾರ್ ಕುಡ್ವ, ನರಸಿಂಹಮೂರ್ತಿ ಪೈ ಅವರನ್ನು ಸಭೆಯಲ್ಲಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜದ ಮುಂದಾಳುಗಳಾದ, ಸತೀಶ್ ಆರ್. ನಾಯಕ್, ಸುಗುಣಾ ಕೆ. ಕಾಮತ್, ರಮಾನಾಥ ಕಿಣಿ, ರಮೇಶ್ ಭಂಡಾರ್ಕರ್, ಜೆ. ಪಿ. ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ವ್ಯಾಸೋಪಾಸನಾ ವೃಂದ ಮುಂಬಯಿ ಇವರು ಭುವನೇಂದ್ರ ಅಷ್ಟಕ ಮತ್ತು ಸುಧೀಂದ್ರ ಶ್ರವಣ, ಸಂಯಮಿಂದ್ರ ಸ್ತುತಿಗಳನ್ನು ಹಾಡಿದರು. ವೈದಿಕರು ವೇದಘೋಷಗೈದರು. ವಾಲ್ಕೇಶ್ವರ ಶ್ರೀ ಕಾಶೀ ಮಠದ ಅಧ್ಯಕ್ಷ ಜಿ. ಜಿ. ಪ್ರಭು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆರ್. ಜಿ. ಭಟ್ ಮತ್ತು ವಿಜಯಾ ವರದ ಮಲ್ಯ ಕಾರ್ಯಕ್ರಮ ನಿರೂಪಿಸಿದರು. ಉಮಾನಾಥ್ ಕಾಮತ್ ವಂದಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜಿಎಸ್‌ಬಿ ಬಾಂಧವರು ಉಪಸ್ಥಿತರಿದ್ದರು.