Advertisement

ಸಾವಂತ್ ಪ್ರಮಾಣ ವಚನಕ್ಕೆ ಬಿಗಿ ಭದ್ರತೆ : 3 ಉಚಿತ ಸಿಲಿಂಡರ್ ನಿರೀಕ್ಷೆಯಲ್ಲಿ ಗೋವಾ ಜನತೆ

06:05 PM Mar 27, 2022 | Team Udayavani |

ಪಣಜಿ: ಸೋಮವಾರ ಬೆಳಿಗ್ಗೆ ಪಣಜಿ ಸಮೀಪದ ಬಾಂಬೋಲಿಂ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ನಡೆಯಲಿರುವ  ಪ್ರಮೋದ ಸಾವಂತ್ ಮತ್ತು ಅವರ ಸಂಪುಟ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ , ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯದ ವಿವಿದೆಡೆಯಿಂದ ಸುಮಾರು 60,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಈ ಸಮಾರಂಭದಲ್ಲಿ ಪಾಲ್ಗೊಳ್ಳುವುದರಿಂದ ಬಹುಹಂತದ ಭದ್ರತೆಯನ್ನು ಕಲ್ಪಿಸಲಾಗುವುದು. ಆಗಮಿಸುವ ಜನರಲ್ಲಿ ಕಪ್ಪು ಮಾಸ್ಕ್ ಅಥವಾ ಬಟ್ಟೆ ಧರಿಸಿದವರಿಗೆ ಪ್ರವೇಶಾವಕಾಶ ನೀಡಲಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಪ್ರಮಾಣ ವಚನ ನಡೆಯಲಿದೆ. ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವವರು ಬೆಳಿಗ್ಗೆ 10 ಗಂಟೆಗೆ ಸ್ಟೇಡಿಯಂಗೆ ಆಗಮಿಸುವಂತೆ ಬಿಜೆಪಿ ಮನವಿ ಮಾಡಿದೆ.

ಬುಲೆಟ್ ಪ್ರೂಫ್ ವಾಹನಗಳ ಆಗಮನ

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುತ್ತಿರುವುದರಿಂದ ಭದ್ರತೆಗಾಗಿ 6 ಬುಲೆಟ್ ಫ್ರೂಫ್ ಮತ್ತು ಜಾಮರ್ ವಾಹನಗಳು ಈಗಾಗಲೇ ರಾಜ್ಯಕ್ಕೆ ಆಗಮಿಸಿವೆ. ಬುಲೆಟ್‍ಪ್ರೂಫ್ ಲ್ಯಾಂಡ್ ಕ್ರೂಜರ್ ಮತ್ತು ಟೊಯೊಟಾ ಫಾರ್ಚುನರ್ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಪ್ರಮುಖ ನಾಯಕರು ಬಳಕೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಸಿಲಿಂಡರ್ ನಿರೀಕ್ಷೆ ಆರಂಭ

ಗೋವಾದಲ್ಲಿ ಪ್ರಸಕ್ತ ಬಾರಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಗೃಹಿಣಿಯರಿಗೆ ಕುಟುಂಬವೊಂದಕ್ಕೆ ವರ್ಷಕ್ಕೆ 3 ಸಿಲಿಂಡರ್ ಉಚಿತ ನೀಡುವ ಭರವಸೆ ನೀಡಿತ್ತು.ಉಚಿತ ಸಿಲಿಂಡರ್ ಘೋಷಣೆಯ ನಿರೀಕ್ಷೆ ಹೆಚ್ಚಾಗಿದೆ.

2012 ರಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರಲ್ಲಿ ಪ್ರಮುಖವಾಗಿ ಗೃಹಿಣಿಯರಿಗೆ ಮಾಸಿಕವಾಗಿ 1500 ರೂ ಭತ್ತೆ ನೀಡುವ ಗೃಹ ಆಧಾರ, ಲಾಡಲಿ ಲಕ್ಷ್ಮಿ, ಇವು ಪ್ರಮುಖ ಯೋಜನೆಗಳಾಗಿದೆ. ಪ್ರಮಾಣವಚನ ಸಮಾರಂಭ ಪೂರ್ಣಗೊಂಡು ಒಂದು ವಾರದಲ್ಲಿ ಉಚಿತ ಸಿಲಿಂಡರ್ ನೀಡುವ ಯೋಜನೆಯ ಘೋಷಣೆಯಾಗುವ ನಿರೀಕ್ಷೆಯಿದೆ.

ಸದ್ಯ ಅಡುಗೆ ಅನೀಲ ಸಿಲಿಂಡರ್ ದರ ಸುಮಾರು 1000 ರೂ ಗೆ ತಲುಪಿದ್ದು, ಅಗತ್ಯ ವಸ್ತುಗಳ ಬೆಲೆಯು ಏರಿಕೆಯಾಗುತ್ತಲೇ ಇದೆ. ಇದರಿಂದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಉಚಿತ ಸಿಲಿಂಡರ್ ಘೋಷಣೆಯ ನಿರೀಕ್ಷೆ ಜನರಲ್ಲಿ ಹೆಚ್ಚಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next