Advertisement

Yakshagana ಮುಮ್ಮೇಳದ ಸವ್ಯಸಾಚಿ ಕುಂಬ್ಳೆ ಶ್ರೀಧರ್‌ ರಾವ್‌

11:27 PM Jul 05, 2024 | Team Udayavani |

ಪರಂಪರೆಯ ನಾಟ್ಯ, ಪ್ರಸಂಗದ ನಡೆ, ಪುರಾಣಗಳಲ್ಲಿ ಪ್ರೌಢಿಮೆ ಹೊಂದಿದ್ದು ಪಗಡಿ ಕಿರೀಟ, ಕೋಲು ಕಿರೀಟ, ನಾಟಕೀಯ ವೇಷ, ಸ್ತ್ರೀ ಪಾತ್ರದೊಂದಿಗೆ ಹಾಸ್ಯ ಪಾತ್ರವನ್ನೂ ನಿರ್ವಹಿಸುತ್ತಿದ್ದ ಅಪರೂಪದ ಕಲಾವಿದ ಕುಂಬ್ಳೆ ಶ್ರೀಧರ ರಾಯರು. ಬಹುಶಃ ಬಣ್ಣದ ವೇಷ ಹೊರತುಪಡಿಸಿದರೆ, ಯಕ್ಷಗಾನದ ಎಲ್ಲ ಪಾತ್ರ ವೈವಿಧ್ಯಗಳ ಪ್ರಸ್ತುತಿ ನೀಡಿದ್ದರು.

Advertisement

1948ರ ಜುಲೈ 23ರಂದು ಕುಂಬಳೆಯ ಪೆರ್ಣೆಯಲ್ಲಿ ಮಾಲಿಂಗ ಮುಕಾರಿ-ಕಾವೇರಿ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಧರ್‌ ರಾವ್‌ ಬಾಲ್ಯದಿಂದಲೇ ಯಕ್ಷಗಾನದ ಸೆಳೆತ ಹೊಂದಿದ್ದರು. ಸೂರಂಬೈಲು ಸರಕಾರಿ ಶಾಲೆಯಲ್ಲಿ 4ನೇ ತರಗತಿ ಪೂರೈಸಿ, ಆರ್ಥಿಕವಾಗಿ ಸಂಕಷ್ಟದ ಕಾರಣ ಶಿಕ್ಷಣವನ್ನು ಮೊಟಕುಗೊಳಿಸಿದರು. ಅನಂತರ ಕೈಮಗ್ಗ ನೇಯ್ಗೆಯ ವೃತ್ತಿಯಲ್ಲಿ ತೊಡಗಿಕೊಂಡರು. ಈ ಸಮಯದಲ್ಲೇ ಕುಂಬ್ಳೆ ಚಂದ್ರಶೇಖರ ಹಾಗೂ ಕಮಲಾಕ್ಷ ಅವರಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆ ಕಲಿತರು.

ಅರ್ಥಗಾರಿಕೆಯನ್ನು ಯಕ್ಷರಂಗದ ಭೀಷ್ಮ ಡಾ| ಶೇಣಿ ಗೋಪಾಲಕೃಷ್ಣ ಭಟ್‌ ಅವರಲ್ಲಿ ಅಭ್ಯಸಿಸಿದರು. ಆಗಲೇ ಸುತ್ತಮುತ್ತಲು ನಡೆಯುತ್ತಿದ್ದ ಎಲ್ಲ ಯಕ್ಷಗಾನ ಪ್ರದರ್ಶನಗಳ ಖಾಯಂ ಪ್ರೇಕ್ಷಕರಾಗಿದ್ದರು. ತಾಳಮದ್ದಳೆಯಲ್ಲಿ ಅರ್ಥ ಹೇಳಲು ಆರಂಭಿಸಿದ್ದರು. ಯಕ್ಷಗಾನದ ಈ ಗೀಳೇ ಶ್ರೀಧರ ರಾಯರನ್ನು ಯಕ್ಷರಂಗ ಕೈ ಬೀಸಿ ಕರೆಯುವಂತೆ ಮಾಡಿತು.

1962ರಲ್ಲಿ ಕಲ್ಲಾಡಿ ಕೊರಗ ಶೆಟ್ಟರ ಕುಂಡಾವು ಮೇಳದ ಪ್ರದರ್ಶನ ಕುಂಬಳೆಗೆ ಬಂತು. ಆಟ ನೋಡಲು ಗೆಳೆಯರೊಂದಿಗೆ ಹೋದ ಶ್ರೀಧರ ರಾಯರು ಚೌಕಿಗೆ ಹೋದರು. ಕುಂಡಾವು ಮೇಳವು ಸುಪ್ರಸಿದ್ಧ ಕಲಾವಿದರ ಗಡಣ ಹೊಂದಿತ್ತು. ಆಗ ಕಲ್ಲಾಡಿ ಕೊರಗ ಶೆಟ್ಟರ ದೃಷ್ಟಿ ಶ್ರೀಧರರ ಮೇಲೆ ಬಿದ್ದು “ವೇಷ ಮಾಡುತ್ತೀಯಾ?’ ಎಂದು ಕೇಳಿದಾಗ ಶ್ರೀಧರ ಒಪ್ಪಿದರು. ದೇವತೆ ಬಲದ ಪಾತ್ರ ದೊರಕಿತು. ಶ್ರೀಧರ ರಾಯರ ಹೆಜ್ಜೆಗಾರಿಕೆ, ಮಾತುಗಾರಿಕೆಯ ಶೈಲಿಯನ್ನು ಗುರುತಿಸಿದ ಕೊರಗ ಶೆಟ್ಟರು ಶ್ರೀಧರ ರಾಯರನ್ನು ಆ ವರ್ಷದ ತಿರುಗಾಟಕ್ಕೆ ಕುಂಡಾವು ಮೇಳಕ್ಕೆ ಸೇರಿಸಿದರು. ಆಗ ಶ್ರೀಧರ ರಾಯರಿಗೆ ಕೇವಲ 14 ವರ್ಷ. ಅಲ್ಲಿ ಹಿರಿಯ ಕಲಾವಿದರ ಸಂಸರ್ಗದಲ್ಲಿ ಯಕ್ಷಗಾನದ ಕುರಿತಾದ ಹೆಚ್ಚಿನ ಮಾಹಿತಿ, ಮಾತುಗಾರಿಕೆಯ ಹಿಡಿತ ಪಡೆದುಕೊಂಡರು. 4 ವರ್ಷಗಳ ಕಾಲ ಕುಂಡಾವು ಮೇಳದಲ್ಲಿ ತಿರುಗಾಟ ನಡೆಸಿ ಅನಂತರ ಕೂಡ್ಲು, ಮೂಲ್ಕಿ, ಕರ್ನಾಟಕ ಮೇಳಗಳಲ್ಲಿ ತಿರುಗಾಟ ನಡೆಸಿ, ಬಳಿಕ ಧರ್ಮಸ್ಥಳ ಮೇಳ ಸೇರಿದರು.

ಧರ್ಮಸ್ಥಳ ಮೇಳವು ಶ್ರೀಧರ ರಾಯರನ್ನು ಪರಿಪಕ್ವ ಕಲಾವಿದರನ್ನಾಗಿ ರೂಪಿಸುವಲ್ಲಿ ದೊಡ್ಡ ಕಾಣಿಕೆ ನೀಡಿತು. ಕುಂಬ್ಳೆ ಸುಂದರ ರಾವ್‌, ಗೋವಿಂದ ಭಟ್‌, ಎಂಪೆಕಟ್ಟೆ ರಾಮಯ್ಯ ರೈ, ಪುತ್ತೂರು ನಾರಾಯಣ ಹೆಗ್ಡೆ, ವಿಟ್ಲ ಜೋಷಿ, ಪಾತಾಳ ವೆಂಕಟರಮಣ ಭಟ್‌, ಚಂದ್ರಗಿರಿ ಅಂಬು, ಪಕಳಕುಂಞ, ಶ್ರೀಧರ ಭಂಡಾರಿ ಮುಂತಾದ ಘಟಾನುಘಟಿ ಕಲಾವಿದರೊಂದಿಗೆ ಶ್ರೀಧರ ರಾಯರು ಪಾತ್ರ ಮಾಡಿ ಮಿಂಚಿದ್ದು ಸಣ್ಣ ಸಾಧನೆಯೇನಲ್ಲ. ಕಡತೋಕ ಭಾಗವತರ ಸಮರ್ಥ ನಿರ್ದೇಶನ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಲೆ ನುಡಿತವೂ ಶ್ರೀಧರ ರಾಯರಿಗೆ ಬೆಳೆಯಲು ಕಾರಣವಾಯಿತು.

Advertisement

ಪುರುಷ, ಸ್ತ್ರೀ ಎರಡೂ ಪಾತ್ರಗಳನ್ನೂ ಏಕರೀತಿಯಲ್ಲಿ ನಿರ್ವಹಿಸುವ ಶ್ರೀಧರ ರಾಯರ ಕಲಾಪ್ರಜ್ಞೆ ಮೆಚ್ಚುವಂತಹುದು. ಈಶ್ವರ, ಶ್ರೀರಾಮ, ಶ್ರೀಕೃಷ್ಣ, ಮನ್ಮಥ, ದೇವವ್ರತ ಮುಂತಾದ ಪುಂಡುವೇಷಗಳು, ಅರ್ಜುನ, ಭೀಷ್ಮ, ಬ್ರಹ್ಮ, ಕೌರವ, ಕರ್ಣ ಮುಂತಾದ ಕೋಲು ಕಿರೀಟಗಳಲ್ಲಿ ವಿಜೃಂಭಿಸಿದಂತೆ, ದಾಕ್ಷಾಯಣಿ, ಸೀತಾ, ದಮಯಂತಿ, ಶ್ರೀದೇವಿ, ಮಾಯಾಪೂತನಿ, ಮಾಯಾ ಶೂರ್ಪನಖಿ, ಚಿತ್ರಾಂಗದೆ ಮುಂತಾದ ಸ್ತ್ರೀ ಪಾತ್ರಗಳಲ್ಲೂ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕೆಲವೊಂದು ಪ್ರಸಂಗಗಳಲ್ಲಿ ಬರುವ ಕುರುಡಿ, ಮೂಕಿ, ಹುಚ್ಚಿ ಮುಂತಾದ ಸ್ತ್ರೀ ಪಾತ್ರಗಳನ್ನು ಶ್ರೀಧರ ರಾಯರಷ್ಟು ಸಮರ್ಥವಾಗಿ ನಿರ್ವಹಿಸುವವರೇ ಇರಲಿಲ್ಲ. ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ಬಲ್ಲಾಳ್ತಿಯ ಪಾತ್ರವಂತೂ ಸದಾ ನೆನಪಿನಲ್ಲೇ ಉಳಿಯುವಂಥದ್ದು. ಈ ಪಾತ್ರವನ್ನು ಧರ್ಮಸ್ಥಳ ಖಾವಂದರೇ ತುಂಬಾ ಮೆಚ್ಚಿಕೊಂಡಿದ್ದರು ಎಂದು ಶ್ರೀಧರ ರಾಯರು ಹಿಂದೊಮ್ಮೆ ನನ್ನಲ್ಲಿ ಹೇಳಿದ್ದರು. ಬಡಗುತಿಟ್ಟಿನ ನಾಟ್ಯವನ್ನೂ ಕಲಿಯಬೇಕೆಂಬ ಆಸಕ್ತಿಯಿಂದ ಶಿವರಾಮ ಕಾರಂತರ ಯಕ್ಷಗಾನ ಕೇಂದ್ರ ಸೇರಿ ನಾಟ್ಯಕ್ಕೆ ಮೆರುಗು ನೀಡುವಲ್ಲಿ ಸಫ‌ಲರಾಗಿದ್ದಾರೆ.

ಸಾಮಗ, ಅಳಿಕೆ, ಬೋಳಾರ, ಹೊಸಹಿತ್ಲು, ಬೆಟ್ಟಂಪಾಡಿ, ಅಡ್ಕಸ್ಥಳ ಮುಂತಾದವರೊಂದಿಗೆ ಜತೆ ವೇಷ ಮಾಡಿ ಯಶಸ್ವಿಯೂ ಆಗಿದ್ದರು. ಆಂಗ್ಲ ಭಾಷೆಯ ಯಕ್ಷಗಾನದಲ್ಲೂ ಶ್ರೀಧರ ರಾಯರು ದಾಕ್ಷಾಯಣಿಯ ಪಾತ್ರ ಮಾಡಿದ್ದರು. ನೂರಾರು ಕಡೆಗಳಲ್ಲಿ ಸಂಮಾನ ಪಡೆದಿದ್ದು ದುಬಾೖ, ಬಹ್ರೈನ್‌ ಸಹಿತ ಇನ್ನಿತರ ವಿದೇಶಗಳಲ್ಲಿ ಪಾತ್ರ ನಿರ್ವಹಿಸಿ ಸಮ್ಮಾನಿಸಲ್ಪಟ್ಟಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದ ಅವರು ದಿಲ್ಲಿಯಲ್ಲಿ ರಾಷ್ಟ್ರಪತಿಗಳಿಂದ ಪ್ರತಿಷ್ಠಿತ ಗೌರವವನ್ನೂ ಸ್ವೀಕರಿಸಿದ್ದರು.

ಸ್ವಲ್ಪ ಮಟ್ಟಿನ ಹಾಸ್ಯ ಪ್ರವೃತ್ತಿಯ ಶ್ರೀಧರರಾಯರು ಸಹಕಲಾವಿದರೊಂದಿಗೆ ಮಿತ್ರರಂತೆಯೇ ವ್ಯವಹರಿಸಿ ಅಜಾತಶತ್ರು ಎನಿಸಿ, ಕಿರಿಯ ಕಲಾವಿದರಿಗೆ ಹೇಳಿಕೊಡುವ ಔದಾರ್ಯ ಹೊಂದಿದ್ದರು. ಧರ್ಮಸ್ಥಳ ಮೇಳದಲ್ಲಿ 4 ದಶಕಗಳಿಗೂ ಹೆಚ್ಚಿನ ಕಾಲ ಸೇವೆಗೈದಿರುವ ಶ್ರೀಧರ ರಾಯರು ಯಕ್ಷರಂಗದಿಂದ ನಿವೃತ್ತರಾಗುವ ತನಕವೂ ಧರ್ಮಸ್ಥಳ ಮೇಳದಲ್ಲೇ ತಿರುಗಾಟ ನಡೆಸಿದ್ದರು. 76 ವರ್ಷದ ಶ್ರೀಧರ ರಾಯರು ಹಿಂದಿನ ಹಾಗೂ ಇಂದಿನ ಕಲಾವಿದರ ನಡುವಿನ ಕೊಂಡಿಯಂತಿದ್ದರು. ಅವರ ನಿಧನವು ನಿಜಾರ್ಥದಲ್ಲಿ ಯಕ್ಷರಂಗಕ್ಕೆ ದೊಡ್ಡ ನಷ್ಟ ಉಂಟುಮಾಡಿದೆ.

-ಎಂ. ಶಾಂತಾರಾಮ ಕುಡ್ವ, ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next