Advertisement

ಸ್ತ್ರೀ ಸಬಲೀಕರಣಕ್ಕೆ ಜೀವನ ಮುಡಿಪಾಗಿಟ್ಟ ಸಾವಿತ್ರಿಬಾಯಿ

06:16 PM Jan 06, 2022 | Team Udayavani |

ಗದಗ: ಸಾವಿತ್ರಿಬಾಯಿ ಪುಲೆ ಅವರು ಶಿಕ್ಷಣ ವಂಚಿತ ಸಮುದಾಯಕ್ಕೆ ಶಿಕ್ಷಣ ನೀಡಿದ್ದಾರೆ. ಮಹಿಳೆಯರ ಸ್ಥಾನಮಾನ ಉನ್ನತೀಕರಿಸಿ, ಸಮ ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಸಿದ್ದರು. ಅನೇಕ ಕಷ್ಟ ಕೋಟಲೆಗಳನ್ನು ಅನುಭವಿಸಿ, ತಮ್ಮ ಗುರಿ ಸಾಧಿಸಿ, ದೇಶಕ್ಕೆ ಗುರು ಮಾತೆಯಾಗಿದ್ದಾರೆ ಎಂದು ಎಂದು ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

Advertisement

ಲಿಂಗಾಯತ ಪ್ರಗತಿ ಶೀಲ ಸಂಘದಿಂದ ನಗರದ ತೋಂಟದಾರ್ಯ ಮಠದಲ್ಲಿ ಆಯೋಜಿಸಿದ್ದ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸಾವಿತ್ರಿಬಾಯಿ ಪುಲೆ ಅವರ ಜಯಂತಿಯನ್ನು ಶಿಕ್ಷಕರ ದಿನವನ್ನಾಗಿ, ಮಹಿಳಾ ದಿನವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸಬೇಕು. ಸಾವಿತ್ರಿಬಾಯಿ ಅವರ ಹೋರಾಟದ ಜೀವನ ಪಠ್ಯ ವಿಷಯವಾಗಿ ಬೋ ಧಿಸಬೇಕು ಎಂದು ತಿಳಿಸಿದರು.

ಉಪನ್ಯಾಸ ನೀಡಿದ ಕುರ್ತಕೋಟಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರಿಯಾಂಕಾ ನಡುವಿನಮನಿ, ಭಾರತದ ಶಿಕ್ಷಣ ವ್ಯವಸ್ಥೆಗೆ ಪುಲೆ ದಂಪತಿ ಕೊಡುಗೆ ಅಪಾರ. ಭಾರತದ ಸ್ವಾತಂತ್ರ್ಯ ಚಳವಳಿಗೂ ಮುನ್ನ ಜನರನ್ನು ಅಜ್ಞಾನದ ಸಂಕೋಲೆಗಳಿಂದ ಮುಕ್ತಗೊಳಿಸುವ ಕಾಯಕದಲ್ಲಿ ತೊಡಗಿದರು. ತಮ್ಮ ಮನೆಯಲ್ಲೇ ಆರಂಭದಲ್ಲಿ ಶಾಲೆಯನ್ನು ಆರಂಭಿಸುವ ಮೂಲಕ ಕೆಳ ವರ್ಗದ ಮತ್ತು ಮಹಿಳೆಯರಿಗೆ ಶಿಕ್ಷಣ ನೀಡುವ ಕ್ರಾಂತಿಕಾರಿ ಹೆಜ್ಜೆ ಇಟ್ಟರು. 1848 ರಿಂದ 1852ರ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 18 ಶಾಲೆಗಳನ್ನು ಆರಂಭಿಸುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದರು.

ಸಾಮಾಜಿಕ ಅನಿಷ್ಠಗಳಾದ ಬಾಲವಿವ್ಯಾಹ, ಸತಿ ಸಹಗಮನ, ಕೇಶಮುಂಡನ ವಿರುದ್ಧ ಪ್ರತಿಭಟನೆ ದಾಖಲಿಸಿ, ಶೋಷಿತ ಹೆಣ್ಣುಮಕ್ಕಳಿಗೆ ಆಸರೆಯಾಗಿ ನಿಂತರು. ಇವರ ಪ್ರಯತ್ನಗಳಿಗೆ ಬ್ರಿಟಿಷ್‌ ಸರಕಾರ ಬೆಂಬಲವಾಗಿ ನಿಂತಿತು. ಸ್ತ್ರೀಯರಿಗೆ ಶೈಕ್ಷಣಿಕ ರಹದಾರಿ ನಿರ್ಮಿಸಿದ ಸಾವಿತ್ರಿಬಾಯಿ ಪುಲೆ ವಿಶ್ವವಂದ್ಯರಾಗಿದ್ದಾರೆ ಎಂದು ತಿಳಿಸಿದರು.

ಸಾವಿತ್ರಿಬಾಯಿ ಪುಲೆ ಜಯಂತಿ ನಿಮಿತ್ತ ಅವ್ವ ಸೇವಾ ಟ್ರಸ್ಟ್‌ನಿಂದ 20 ಶಿಕ್ಷಕಿಯರಿಗೆ ಶ್ರೇಷ್ಠ ಸೇವಾ ಶಿಕ್ಷಕಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ ಪದವಿ ಪಡೆದ ನಿಮಿತ್ತ ಖ್ಯಾತ ವಯೋಲಿನ್‌ ವಾದಕ ಡಾ|ನಾರಾಯಣ ಹಿರೇಕೊಳಚಿ, ಖ್ಯಾತ ಗಾಯಕ ಡಾ.ಶಿವಬಸಯ್ಯ ಎಸ್‌. ಗಡ್ಡದಮಠ, ಖ್ಯಾತ ತಬಲಾ ವಾದಕ ಡಾ.ಹನಮಂತ ಹೂಗಾರ(ಕೊಡಗಾನೂರ) ಅವರನ್ನು ಸನ್ಮಾನಿಸಲಾಯಿತು. ಧರ್ಮಗ್ರಂಥ ಪಠಣವನ್ನು
ಈಶ್ವರಿ ಬಸವರಾಜ ಭರಮಗೌಡ್ರ ಹಾಗೂ ವಚನ ಚಿಂತನವನ್ನು ಇಂದಿರಾ ಬಸವರಾಜ ಭರಮಗೌಡ್ರ ನೆರವೇರಿಸಿದರು.

Advertisement

ವೇದಿಕೆ ಮೇಲೆ ಅವ್ವ ಸೇವಾ ಟ್ರಸ್ಟ್‌ ಜಿಲ್ಲಾ ಸಂಚಾಲಕ ಡಾ|ಬಸವರಾಜ ಧಾರವಾಡ, ಎಸ್‌. ಎಂ.ಅಗಡಿ, ಜಯಶ್ರೀ ಅಣ್ಣಿಗೇರಿ, ಶಿವಾನುಭವ ಸಮಿತಿ ಚೇರಮನ್‌ ವಿವೇಕಾನಂದಗೌಡ ಪಾಟೀಲ, ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ರತ್ನಕ್ಕ ಪಾಟೀಲ, ಮುರುಘರಾಜೇಂದ್ರ ಬಡ್ನಿ, ಮಲ್ಲಿಕಾರ್ಜುನ ಖಂಡೆಮ್ಮನವರ, ಸೋಮಶೇಖರ ಪುರಾಣಿಕಮಠ, ವೀರೇಶ ಬುಳ್ಳಾ, ಶಿವಬಸಪ್ಪ ಯಂಡಿಗೇರಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next