Advertisement

ಹಡಪದ- ಸವಿತಾ ಜಯಂತಿ ಗೊಂದಲ

06:00 AM Jul 23, 2018 | |

ಬೆಂಗಳೂರು: ಲಿಂಗಾಯತ- ವೀರಶೈವ ಸಂಘರ್ಷ ತಣ್ಣಗಾಗುತ್ತಿದ್ದಂತೆ, ಇದೀಗ ರಾಜ್ಯದಲ್ಲಿ ಹೊಸದೊಂದು ಜಾತಿ ಸಂಘರ್ಷ ತಲೆದೋರುವ ಅಪಾಯವಿದೆ. ಮಹಾಪುರುಷರ ಜನ್ಮ ದಿನಾಚರಣೆ ಸಂಬಂಧ ಕ್ಷೌರಿಕ ಸಮಾಜದೊಳಗಿನ ಪಂಗಡಗಳು ವಾಕ್ಸಮರ ಆರಂಭಿಸಿವೆ.

Advertisement

ರಾಜ್ಯ ಸರ್ಕಾರ  ಈ ವರ್ಷ ಜುಲೈ 27 ರಂದು ಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಮಾಡಲು ತೀರ್ಮಾನಿಸಿದೆ. ಆದರೆ, ಇದರ ಜೊತೆಗೆ ಸವಿತಾ ಮಹರ್ಷಿ ಜಯಂತಿ ಆಚರಿಸಬೇಕೆಂದು ಕ್ಷೌರಿಕ ಸಮಾಜದ ಜನರು ಬೇಡಿಕೆ ಇಟ್ಟಿದ್ದಾರೆ. ಇಬ್ಬರ ಮಧ್ಯೆ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರು ಎರಡೂ ಸಮಾಜದವರನ್ನು ಕೂಡಿಸಿ ಸಭೆ ನಡೆಸಿದರೂ, ಹಡಪದ ಸಮಾಜದವರು ಸವಿತಾ ಮಹರ್ಷಿ ಹೆಸರು ಸೇರಿಸಲು ಒಪ್ಪಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಈ ಕುರಿತಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಬಳಿಯೂ ಮಾತುಕತೆ ನಡೆಸಿದ್ದು, ಗೊಂದಲ ಬಗೆ ಹರಿದಿಲ್ಲ ಎಂದು ತಿಳಿದು ಬಂದಿದೆ.

ಸವಿತಾ ಮಹರ್ಷಿಗೂ ಪ್ರತ್ಯೇಕ ಜಯಂತಿ ಮಾಡುವಂತೆ ಹಡಪದ ಅಪ್ಪಣ್ಣ ಸಮಾಜದವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಹಡಪದ ಅಪ್ಪಣ್ಣ ಜಯಂತಿಗೆ ಮೀಸಲಿಟ್ಟ ಹಣದಲ್ಲಿ ಹಣ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಒಂದೇ ಸಮಾಜದ ಇಬ್ಬರು ದಾರ್ಶನಿಕರ ಜಯಂತಿ ಮಾಡುವುದು ಕಷ್ಟವಾಗುತ್ತದೆ ಎನ್ನುವುದು ಅಧಿಕಾರಿಗಳ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಂದಿಗ್ಧತೆಯಲ್ಲಿ ಸಿಲುಕಿಕೊಂಡಿದೆ.

ಸವಿತಾ ಸಮಾಜದವರ ವಾದವೇನು?
ಹಡಪದ ಸಮಾಜ ಹಾಗೂ ಸವಿತಾ ಸಮಾಜ ಇಬ್ಬರೂ ಕ್ಷೌರಿಕ ವೃತ್ತಿ ಮಾಡುತ್ತಿದ್ದರೂ, ದಕ್ಷಿಣ ಕರ್ನಾಟಕದಲ್ಲಿ ಚಿತ್ರದುರ್ಗದವರೆಗೂ ಸವಿತಾ ಸಮಾಜ ಎಂದು ಗುರುತಿಸಿಕೊಂಡಿದೆ.ಪುರಾಣದಲ್ಲಿ ಬರುವ ಸವಿತಾ ಮಹರ್ಷಿ ಎಂಬವವರು ರಥ ಸಪ್ತಮಿಯ ದಿನ ಕಣ್ಣಿನಲ್ಲಿ ಹುಟ್ಟಿದ್ದಾರೆ. ಇವರೇ ಕ್ಷೌರಿಕ ಸಮಾಜದ ಮೂಲ ಪುರುಷರು. ಸವಿತಾ ಸಮಾಜದಲ್ಲಿಯೇ 27 ಉಪ ಜಾತಿಗಳು ಸೇರಿದ್ದು, ಹಡಪದ ಸಮಾಜ ಸವಿತಾ ಸಮಾಜದ ಒಂದು ಪಂಗಡ. ಹಡಪದ ಸಮಾಜದವರು ಬಸವಣ್ಣನ ಕಾಲದಲ್ಲಿ ಲಿಂಗ ಕಟ್ಟಿಕೊಂಡರು. ಲಿಂಗ ಕಟ್ಟಿಕೊಳ್ಳದವರು ಸವಿತಾ ಸಮಾಜದಲ್ಲಿಯೇ ಮುಂದುವರೆದರು. ಹೀಗಾಗಿ ಅವರ ಹೆಸರನ್ನೂ ಹಡಪದ ಅಪ್ಪಣ್ಣ ಜಯಂತಿ ಆಚರಣೆಯಲ್ಲಿ ಸೇರಿಸಿ “ಸವಿತಾ ಮಹರ್ಷಿ ಹಡಪದ ಅಪ್ಪಣ್ಣ ಜಯಂತಿ’ ಎಂದು ಆಚರಿಸುವಂತೆ ಸವಿತಾ ಸಮಾಜದವರು ಸರ್ಕಾರಕ್ಕೆ ಪಟ್ಟು ಹಿಡಿದಿದ್ದಾರೆ.

Advertisement

ಹಡಪದ ಸಮಾಜದವರ ವಾದವೇನು?
ಉತ್ತರ ಕರ್ನಾಟಕ ಭಾಗದಲ್ಲಿರುವ ಹಡಪದ ಸಮಾಜದವರು ಇದಕ್ಕೆ ತದ್ವಿರುದ್ಧ ಅಭಿಪ್ರಾಯ ಹೊಂದಿದ್ದಾರೆ. ಸವಿತಾ ಮಹರ್ಷಿಗೂ ಹಡಪದ ಅಪ್ಪಣ್ಣಗೂ ಯಾವುದೇ ಸಂಬಂಧವಿಲ್ಲ. ಯಾವುದೇ ಕಾಲಮಾನಕ್ಕಾಗಲಿ, ವೈಚಾರಿಕತೆ, ಜೀವನ ಶೈಲಿ ಯಾವುದಕ್ಕೂ ಹೊಂದಾಣಿಕೆ ಇಲ್ಲ. ಒತ್ತಾಯ ಪೂರ್ವಕವಾಗಿ ಉತ್ತರ ಕರ್ನಾಟಕದವರ ಮೇಲೆ ಸಾಂಸ್ಕೃತಿಕ ದಾಳಿ ನಡೆಸಲಾಗುತ್ತಿದೆ.  ಹಡಪದ ಅಪ್ಪಣ್ಣ ಬಸವಣ್ಣನ ಕಾಲದ ಶರಣನಾಗಿದ್ದು, ಕಡ್ಲಿಗಾರ ಹುಣ್ಣಿಮೆ (ಗುರು ಪೂರ್ಣಿಮೆ) ದಿನ ಹುಟ್ಟಿದ್ದು, ಬಸವಣ್ಣನಿಗೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾನೆ. ಹಡಪದ ಅಪ್ಪಣ್ಣ ಶರಣ ಸಂಸ್ಕೃತಿಯಲ್ಲಿ ಬೆಳೆದು ಬಸವಣ್ಣನ ಲಿಂಗೈಕ್ಯದ ನಂತರ ಲಿಂಗೈಕ್ಯನಾದವನು ಎನ್ನುತ್ತಾರೆ.

ಹಡಪದ ಅಪ್ಪಣ್ಣನಿಗೂ ಸವಿತಾ ಮಹರ್ಷಿಗೂ ಸಂಬಂಧವಿಲ್ಲ. ಹಡಪದ ಅಪ್ಪಣ್ಣ ಐತಿಹಾಸಿಕ ಪುರುಷ. ಬಸವಣ್ಣನ ಕಾಲದಲ್ಲಿ ಜನಿಸಿದ ಶರಣ. ಆದರೆ, ಸವಿತಾ ಮಹರ್ಷಿಗೆ ಪುರಾಣದ ಹಿನ್ನೆಲೆ ಹೇಳುತ್ತಾರೆ. ಹೀಗಾಗಿ ಅಪ್ಪಣ್ಣ ಜಯಂತಿಯಲ್ಲಿ ಸವಿತಾ ಮಹರ್ಷಿ ಹೆಸರು ಸೇರಿಸಲು ನಮ್ಮ ವಿರೋಧವಿದೆ. ಅವರು ಬೇಕಾದರೆ ಪ್ರತ್ಯೇಕ ಜಯಂತಿ ಮಾಡಿಕೊಳ್ಳಲು ನಮ್ಮದೇನು ಅಡ್ಡಿಯಿಲ್ಲ.
– ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿ, ಅಪ್ಪಣ್ಣ ದೇವರ ಮಹಾಸಂಸ್ಥಾನ ತಂಗಡಗಿ

ಸವಿತಾ ಮಹರ್ಷಿ ನಮ್ಮ ಸಮಾಜದ ಮೂಲ ಪುರುಷ ಅವರ ಜಯಂತಿ ಮಾಡುವ ಬದಲು ಸರ್ಕಾರ ಹಡಪದ ಅಪ್ಪಣ್ಣ ಜಯಂತಿ ಮಾಡಲು ಹೊರಟಿದೆ. ಇದರಿಂದ ಸವಿತಾ ಸಮಾಜದ 27 ಉಪ ಪಂಗಡಗಳಿಗೆ ಅನ್ಯಾಯವಾಗಲಿದೆ. ಎರಡೂ ಒಂದೇ ಜಯಂತಿ ಮಾಡಬೇಕೆನ್ನುವುದು ನಮ್ಮ ವಾದ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ, ಹೋರಾಟ ನಡೆಸುತ್ತೇವೆ.
– ಯು. ಕೃಷ್ಣಮೂರ್ತಿ, ಸವಿತಾ ಸಮಾಜದ ರಾಜ್ಯಾಧ್ಯಕ್ಷ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next