ವಾಡಿ: ಹೈನುಗಾರಿಕೆ ಮತ್ತು ಹಾಲು ಮಾರಾಟಕ್ಕಾಗಿ ಹಸು ಖರೀದಿಸಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ತಲಾ 2 ಲಕ್ಷ ರೂ. ಸಾಲ ಸೌಲಭ್ಯ ಪಡೆದ ಜಿಲ್ಲೆಯ ನೂರಾರು ರೈತರಿಗೆ ಚಿತ್ತಾಪೂರ ತಾಲೂಕಿನ ಕೊಂಚೂರು ಮಹರ್ಷಿ ಸವಿತಾ ಪೀಠದ ಪೀಠಾಧ್ಯಕ್ಷ ಶ್ರೀಸವಿತಾನಂದನಾಥ ಸ್ವಾಮೀಜಿ ಮೋಸ ಮಾಡಿದ್ದಾರೆ. ದುಪ್ಪಟ್ಟು ಹಣ ವಸೂಲಿ ಮಾಡಿದರೂ ಹಾಲು ಕೊಡದ ಆಕಳು ಕೊಟ್ಟು ವಂಚಿಸಿದ್ದಾರೆ ಎಂದು ರೈತರು ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಂಗಳವಾರ ವಾಡಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವಾಪುರ ತಾಂಡಾದ ರೈತ ಹೀರಾ ಜಾಧವ, ಬ್ಯಾಂಕ್ ಮಧ್ಯವರ್ತಿ ಶ್ರೀಸವಿತಾನಂದನಾಥ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಸ್ವಾಮೀಜಿಯ ವಂಚಕ ಬುದ್ದಿಯನ್ನು ಬಯಲಿಗೆಳೆದಿದ್ದಾರೆ. ಕಲಬುರಗಿ ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚು ರೈತರಿಗೆ ತಲಾ ಎರಡು ಹಸು ಖರೀದಿಸಲು ಯಾದಗಿರಿ ಮತ್ತು ಕಲಬುರಗಿ ಸಹಕಾರ ಬ್ಯಾಂಕ್ ತಲಾ 2 ಲಕ್ಷ ರೂ. ಸಾಲ ಮಂಜೂರು ಮಾಡಿ ಖಾತೆಗೆ ಜಮೆ ಮಾಡಿದೆ. ಬ್ಯಾಂಕ್ ಮಧ್ಯವರ್ತಿಯಾಗಿರುವ ಕೊಂಚೂರು ಹರಿಪ್ರೀಯ ಗೋಶಾಲೆಯ ಶ್ರೀಸವಿತಾನಂದನಾಥ ಸ್ವಾಮೀಜಿ, ಜಿಲ್ಲೆಯ ರೈತರಿಗೆ ರಾಜಸ್ಥಾನ ಮೂಲದ ರಾಟಿ ತಳಿಯ ತಲಾ ಎರಡು ಆಕಳನ್ನು ಒಟ್ಟು 188,620 ರೂ.ಗೆ ನೀಡುವ ಹಾಗೂ ರೈತರಿಂದ ಪ್ರತಿದಿನ ಹಾಲು, ಗೋಮೂತ್ರ ಹಾಗೂ ಸೆಗಣಿ ಖರೀದಿಸುವ ವಾಗ್ಧಾನ ಮಾಡಿದ್ದಾರೆ. ಅವರ ಮಾತನ್ನು ನಂಬಿ ನಾವು ಸ್ವಾಮೀಜಿಯ ಖಾತೆಗೆ ಪೂರ್ಣ ಹಣ ಪಾವತಿಸಿದ್ದೇವೆ. ಮೂರು ತಿಂಗಳು ಕಳೆದರೂ ನಮಗೆ ಹಸು ತಂದು ಕೊಟ್ಟಿಲ್ಲ. ಕೆಲ ರೈತರಿಗೆ ಕೊಡಲಾಗಿರುವ ಹಸುಗಳು ಮುದಿತನಕ್ಕೆ ಬಂದಿವೆ. ಸರಿಯಾಗಿ ಹಾಲು ಕೊಡುತ್ತಿಲ್ಲ. ಕೆಲವು ಹಸುಗಳು ಅನಾರೋಗ್ಯದಿಂದ ಮೃತಪಟ್ಟಿವೆ. ಅಲ್ಲದೆ ಸ್ವಾಮೀಜಿ ಕೊಡುತ್ತಿರುವ ರಾಟಿ ಹಸುಗಳ ಬೆಲೆಯೂ ದುಪ್ಪಟ್ಟಾಗಿದೆ. ಹೀಗೆ ಪೂಜ್ಯನೀಯ ಸ್ಥಾನದಲ್ಲಿರುವ ಸ್ವಾಮೀಜಿ ಜಿಲ್ಲೆಯ ಮುಗ್ದ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದರು.
ರೈತರನ್ನು ದೂರವಿಟ್ಟು ಸ್ವಾಮೀಜಿಯೊಬ್ಬರೇ ಹಸುಗಳನ್ನು ಖರೀದಿಸಲು ರಾಜಸ್ಥಾನಕ್ಕೆ ಹೋಗಿರುವುದು ಯಾವನ್ಯಾಯ. ಖರೀದಿಸಿ ತರಲಾದ ನೂರಾರು ಹಸುಗಳ ದಾಖಲೆ ಪತ್ರಗಳಿಲ್ಲ. ಹಸುಗಳಿಗೆ ವಯಸ್ಸಾಗಿದ್ದು, ಪ್ರತಿದಿನ 10 ಲೀಟರ್ ಹಾಲು ಕೊಡುವುದು ಒತ್ತಟ್ಟಿಗಿರಲಿ ಅವು ಬಹಳ ದಿನ ಬದುಕುವ ಸ್ಥಿತಿಯಲ್ಲಿಲ್ಲ. ಇಂಥಹ ಹಸುಗಳನ್ನು ದುಪಟ್ಟು ದರಕ್ಕೆ ರೈತರಿಗೆ ನೀಡಲು ಹೊರಟಿರುವ ಗೋರಕ್ಷಕ ಸವಿತಾನಂದನಾಥ ಸ್ವಾಮೀಜಿ, ರೈತರನ್ನು ಜಾಣತನದಿಂದ ವಂಚಿಸುವ ತಂತ್ರ ಹೆಣೆದಿದ್ದಾರೆ ಎಂದು ದೂರಿದ ರೈತ ಹೀರಾ ಜಾಧವ, ಹಸುಗಳ ಬೆಲೆ ಎಷ್ಟೇಯಿರಲಿ ಸ್ವಾಮೀಜಿಯವರು ರೈತರ ಸಮ್ಮುಖದಲ್ಲಿ ಹಸುಗಳ ಖರೀದಿ ವ್ಯವಹಾರ ನಡೆಸಬೇಕು. ಅಥವ ನಮ್ಮ ಹಣ ನಮಗೆ ವಾಪಸ್ ಕೊಟ್ಟರೆ ನಾವೇ ಹಸುಗಳನ್ನು ಖರೀದಿಸಿ ಸ್ವಾಮೀಜಿಗೆ ಹಾಲು, ಗೋಮೂತ್ರ, ಸೆಗಣಿ ಮಾರಾಟ ಮಾಡುತ್ತೇವೆ ಎಂದರು.
ಹಳಕರ್ಟಿ ಗ್ರಾಮದ ಮುಖಂಡ ರಾಘವೇಂದ್ರ ಅಲ್ಲಿಪೂರ ಮಾತನಾಡಿ, ಸವಿತಾನಂದನಾಥ ಸ್ವಾಮೀಜಿ ಅವರು ರೈತರ ಮಾತು ಕೇಳಿಸಿಕೊಳ್ಳುತ್ತಿಲ್ಲ. ನಾನು ಖರೀದಿಸಿ ಕೊಡುತ್ತಿರುವ ಹಸುಗಳನ್ನೇ ನೀವು ಸಾಕಬೇಕು. ಇಲ್ಲದಿದ್ದರೆ ಬ್ಯಾಂಕ್ ನೀಡುವ ಸಾಲ ರದ್ದುಪಡಿಸಿಕೊಳ್ಳಿ ಎಂದು ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಅನ್ಯಾಯ ಪ್ರಶ್ನಿಸುವ ರೈತರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ. ಕಡಿಮೆ ಹಣಕ್ಕೆ ಹಸು ಖರೀದಿಸಿ ರೈತರಿಂದ ದುಪ್ಪಟ್ಟು ಹಣ ಪಡೆಯುತ್ತಿರುವುದನ್ನು ಪ್ರಶ್ನಿಸಿದರೆ ರೈತರ ಮೇಲೆ ಕೈಮಾಡಲು ಬರುತ್ತಿದ್ದಾರೆ. ಬ್ಯಾಂಕ್ ಮಧ್ಯವರ್ತಿಯಾಗುವ ಮೂಲಕ ಈ ಸ್ವಾಮೀಜಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇವಾಪುರ ತಾಂಡಾದ ರೈತ ಪರಶುರಾಮ ರಾಠೋಡ, ಹಳಕರ್ಟಿ ಗ್ರಾಮದ ಮಹೆಬೂಬಸಾಬ ಲದಾಫ್, ಮಹ್ಮದ್ ಸೋಯಲ್ ಸುದ್ದಿಗೋಷ್ಠಿಯಲ್ಲಿ ಇದ್ದರು.
ಇದನ್ನೂ ಓದಿ: ಪಾಲಾರ್ ಬಾಂಬ್ ಸ್ಫೋಟ ಪ್ರಕರಣ: ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಗೆ ಜಾಮೀನು