Advertisement
ಹಳ್ಳಕೊಳ್ಳದ ಲೆಕ್ಕಾಚಾರಸಾಮಾನ್ಯವಾಗಿ ಎಲ್ಲೆಡೆ ಭೂಮಿಯ ಮೇಲ್‌ಮೈ ಸಹಜವಾಗೇ ಇಳಿಜಾರಾಗಿರುತ್ತದೆ. ಹೀಗೆ ಆಗಲು ಮುಖ್ಯ ಕಾರಣ- ನೀರಿನ ಹರಿವು. ಕಾಲಾಂತರದಲ್ಲಿ ನೀರು ಹರಿವೆಡೆ ಕೊರಕಲಾಗುತ್ತದೆ. ದಿಣ್ಣೆ ಹೆಚ್ಚು ಕರಗುವುದಿಲ್ಲ. ನೀರಿಗೆ ಕಲ್ಲನ್ನೇ ಕೊರೆಯುವ ಶಕ್ತಿ ಇದ್ದು, ಎತ್ತರದ ಪ್ರದೇಶದಲ್ಲೂ ಮಣ್ಣು ಹೊತ್ತುಹೋಗಿ ಕೆಳಗಿನ ಬಂಡೆ ಕಾಣುವ ಸಾಧ್ಯತೆ ಹೆಚ್ಚಿರುತ್ತದೆ.
ಅದೇ ರೀತಿ ನೀರು ಹೆಚ್ಚು ಹರಿಯುವ ಪ್ರದೇಶದಲ್ಲೂ ಮಣ್ಣು ಕೊಚ್ಚಿಹೋಗಿ ಕೆಳಗಿನ ಕಲ್ಲುಬಂಡೆ ತೆರೆದುಕೊಂಡಿರಬಹುದು. ಒಟ್ಟಾರೆಯಾಗಿ ನಮ್ಮ ನಿವೇಶನ ಎತ್ತರದಲ್ಲಿದೆಯೋ ಇಲ್ಲವೇ ತಗ್ಗು ಪ್ರದೇಶದಲ್ಲಿದೆಯೋ ಎಂದು ಮೊದಲೇ ನಿರ್ಧರಿಸಿದರೆ, ಮುಂದೆ ಉಂಟಾಗುವ ತೊಂದರೆಗಳನ್ನು ಸರಿಪಡಿಸಲು ಅನುಕೂಲವಾಗಬಹುದು.
ನಿವೇಶನದ ಇಳಿಜಾರು ಹೇಗಿರುತ್ತದೆ? ಅದು ಹಿಂದಿನಿಂದ ಮುಂದಕ್ಕೆ ಇದ್ದರೆ, ನೀರು ಸರಾಗವಾಗಿ ಹರಿದು ರಸ್ತೆ ಬದಿಯ ಮೋರಿಗೆ ಸಾಗುತ್ತದೆ. ಇದರಿಂದ ನಾವು ಹೆಚ್ಚು ಖರ್ಚಿಲ್ಲದೆ ಮನೆಯ ಪಾಯವನ್ನು ಹಾಕಬಹುದು. ಮನೆಯ ಹಿಂಭಾಗ ತೀರ ಎತ್ತರದಲ್ಲಿ ಅಂದರೆ ನಾಲ್ಕಾರು ಅಡಿ ಎತ್ತರ ಇದ್ದರೆ, ನಮಗೆ ಸುಮಾರು ಎರಡು ಅಡಿ ಮಾತ್ರ ಸಾಕಿದ್ದರೆ, ಈಗಿನ ಕಾಲದಲ್ಲಿ ಜೆಸಿಬಿ ಕರೆಸಿ ಎರಡು ಅಡಿ ಹೆಚ್ಚುವರಿ ಮಣ್ಣನ್ನು ತೆಗೆದು ನಮ್ಮ ಅನುಕೂಲಕ್ಕೆ ಮಟ್ಟ ಮಾಡುವುದು ದುಬಾರಿ ಕೆಲಸವೇನಲ್ಲ. ರೋಡಿನಿಂದ ಸ್ಲೋಪ್ ಸೈಟಿನ ಹಿಂಬದಿಗೆ ಏರುತ್ತ ಹೋದರೆ, ಸಾಮಾನ್ಯವಾಗಿ ಭೂಮಿ ಗಟ್ಟಿ ಇರುವ ಸಾಧ್ಯತೆ ಹೆಚ್ಚಿರುತ್ತದೆ. ದಿಣ್ಣೆಗಳ ಮೇಲೆ ಯಾರೂ ಕಸಕಡ್ಡಿ ಹಾಕುವ ದುಸ್ಸಾಹಸ ಮಾಡದ ಕಾರಣ, ಮೂಲ ಭೂಮಿ ಹಾಗೆಯೇ ಉಳಿದಿರುವ ಸಾಧ್ಯತೆ ಹೆಚ್ಚಿರುತ್ತದೆ. ಮನೆಯ ಎಲಿವೇಶನ್ ಕೂಡ ಸ್ವಲ್ಪ ಎತ್ತರಿಸಿದಂತೆ ಕಂಡುಬರುವುದರಿಂದ, ದೊಡ್ಡಮನೆಯಂತೆ ಭಾಸವಾಗುತ್ತದೆ. ಸರಾಸರಿ ಲೆಕ್ಕಾಚಾರದಲ್ಲಿ ರೋಡಿನಿಂದ ನಿವೇಶನ ಎತ್ತರದಲ್ಲಿದ್ದರೆ ಅನುಕೂಲಕರ. ನಿವೇಶನದ ಮಟ್ಟ ರೋಡಿಗಿಂತ ಕೆಳಗಿದ್ದರೆ
ರೋಡಿನ ಮೋರಿಗಿಂತ ನಮ್ಮ ನಿವೇಶನ ಕೆಳಗಿದ್ದರೆ, ನೀರು ಸುಲಭದಲ್ಲಿ ಹೊರಗೆ ಹರಿದು ಹೋಗುವುದಿಲ್ಲ. ಆದುದರಿಂದ ಸ್ವಲ್ಪ ದುಬಾರಿ ಎನ್ನಬಹುದಾದ ವಿಧಾನಗಳಿಗೆ ಮೊರೆ ಹೋಗಬೇಕಾಗುತ್ತದೆ. ಎಲ್ಲರೂ ಕಸ ಕಡ್ಡಿ ಒಳಗೊಂಡಂತೆ ಎಲ್ಲ ತ್ಯಾಜ್ಯವನ್ನು ಗುಂಡಿಗಳು ಇಲ್ಲವೇ ಕೆಳ ಮಟ್ಟದ ಸ್ಥಳಗಳು ಕಂಡೊಡನೆ ಸರ್ಜಿಸಲು ನೋಡುವುದರಿಂದ, ಇಂಥ ನಿವೇಶನಗಳಲ್ಲಿ ಭರ್ತಿಮಣ್ಣು ಕಸಕಡ್ಡಿಯೊಂದಿಗೆ ಇರುವ ಸಾಧ್ಯತೆ ಹೆಚ್ಚಿರುತ್ತದೆ. ಮನೆಯ ಎತ್ತರ ರೋಡಿನಿಂದ ಕಡೇ ಪಕ್ಷ ಒಂದೂವರೆ ಅಡಿಯಿಂದ ಎರಡು ಅಡಿ ಇರಬೇಕಾದ ಕಾರಣ, ಹೆಚ್ಚು ಪಾಯದ ವರಸೆಗಳನ್ನೂ ಹಾಕಬೇಕಾಗುತ್ತದೆ. ಕೆಲವೊಮ್ಮೆ ಈ ಹೆಚ್ಚುವರಿ ಪಾಯದ ಖರ್ಚು ಎಷ್ಟು ಬರುತ್ತದೆ ಎಂದರೆ, ಹೊರಗೋಡೆಗಳನ್ನು ಮಾತ್ರ ರಿಟೇನಿಂಗ್ ವಾಲ್ – ತಡೆಗೋಡೆ ಮಾದರಿಯಲ್ಲಿ ದಪ್ಪ ಮಾಡಿಕೊಂಡು, ಮಣ್ಣಿನಿಂದ ಭರ್ತಿ ಮಾಡದೆ ಮಧ್ಯದ ಗೋಡೆಗಳನ್ನು ಮಾಮೂಲಿಯಾಗಿ ಕಟ್ಟಿಕೊಂಡರೆ, ಹತ್ತು ಅಡಿ ಎತ್ತರದ ಸೂರು ಸಿಗದಿದ್ದರೂ, ಏಳು ಎಂಟು ಅಡಿ ಎತ್ತರದ ಬೇಸ್‌ಮೆಂಟ್ ಹೆಚ್ಚು ಖರ್ಚು ಇಲ್ಲದೆ ಸಿಗುತ್ತದೆ!
Related Articles
Advertisement
ಯಾವುದೇ ನೆಲಮಾಳಿಗೆ, ಕಲ್ಲಿನಲ್ಲಿ ಕಟ್ಟಿರಲಿ, ಇಟ್ಟಿಗೆಯಿಂದ ಕಟ್ಟಿರಲಿ, ನೀರು ನಿರೋಧಕ ದ್ರಾವಣ ಬೆರೆಸಿ ಬರಿ ಪ್ಲಾಸ್ಟರ್ ಮಾಡಿದರೆ ಸಾಲುವುದಿಲ್ಲ. ಕಾಲಾಂತರದಲ್ಲಿ ನೆಲದಲ್ಲಿ ಹಾಗೂ ಗೋಡೆಗಳಲ್ಲಿ ಸಣ್ಣ ಸಣ್ಣ ಬಿರುಕುಗಳು ಬಿದ್ದು, ಮಳೆಗಾಲದಲ್ಲಿ ನೀರು ಸೋರಲು ಶುರುವಾಗಬಹುದು. ಹಾಗಾಗಿ, ಯಾವುದೇ ನೆಲಮಾಳಿಗೆ ಇದ್ದರೂ, ನಾವು ಸಂಪ್ ಟ್ಯಾಂಕ್ ಮಾಡುವ ರೀತಿಯಲ್ಲಿ, ಕಂಬಿಯ ಒಂದು ಪದರ ಕೊಟ್ಟು, ಮೆಶ್ ಬಿಗಿದು, ನಂತರ ನೀರು ನಿರೋಧಕ ಬೆರೆಸಿದ ಪ್ಲಾಸ್ಟರ್ ಮಾಡಿ ವಾಟರ್ ಪೂ›ಫ್ ಆಗುವಂತೆ ನೋಡಿಕೊಳ್ಳಬೇಕು.
ಇತ್ತೀಚಿನ ದಿನಗಳಲ್ಲಿ ಚದುರ ಅಡಿಗೆ ಸಾವಿರಾರು ರೂಪಾಯಿ ಮೌಲ್ಯ ಇರುವುದರಿಂದ, ಹೆಚ್ಚುವರಿ ಸ್ಥಳ ನೆಲಮಾಳಿಗೆಯಲ್ಲೇ ಸಿಕ್ಕರೂ ಅದು ನಿವೇಶನದ ಒಟ್ಟಾರೆ ವ್ಯಾಲ್ಯೂ ಹೆಚ್ಚಿಸಿದಂತೆ ಆಗುತ್ತದೆ. ಆದುದರಿಂದ ನಿಮಗೆ ಹೆಚ್ಚುವರಿ ಸ್ಥಳ ಬೇಕಿದ್ದಲ್ಲಿ ಹಾಗೂ ಹಣದ ತೊಂದರೆ ಅಷ್ಟಾಗಿ ಇರದಿದ್ದರೆ, ಖಂಡಿತ ರೋಡಿಗಿಂತ ಕೆಳಗಿರುವ ನಿವೇಶನ ಖರೀದಿಸಿ ಅದರ ಲಾಭ ಪಡೆಯಬಹುದು.
ನಿವೇಶನದ ಒಂದು ಬದಿಯಿಂದ ಮತ್ತೂಂದು ಬದಿಗೆ ಸ್ಲೋಪ್ ಇದ್ದರೆ..,ಈ ರೀತಿಯ ನಿವೇಶನಗಳು ಹೆಚ್ಚು ತೊಂದರೆ ಕೊಡುವುದಿಲ್ಲ. ಮನೆಯ ಹಿಂಬದಿಯಿಂದಲೂ ನೀರನ್ನು ಸೂಕ್ತ ಇಳಿಜಾರು ನೀಡಿ ಮುಂದಕ್ಕೆ ತರಲು ಸಾಧ್ಯವಿರುವುದರಿಂದ, ಹೆಚ್ಚುವರಿ ಖರ್ಚೇನೂ ಬರುವುದಿಲ್ಲ. ಆದರೆ, ಇಳಿಜಾರು ಹೆಚ್ಚಿದ್ದರೆ, ನಾಲ್ಕು ಐದು ಅಡಿಗಳಿಗಿಂತಲೂ ಹೆಚ್ಚಿದ್ದರೆ, ಇಳಿಜಾರು ಕೆಳಮಟ್ಟದಲ್ಲಿರುವ ಕಡೆ ಪಾರ್ಕಿಂಗ್ ಮಾಡಿಕೊಂಡು, ಮನೆಯ ಪ್ರವೇಶವನ್ನು ಎತ್ತರದ ಕಡೆ ಇಟ್ಟುಕೊಳ್ಳುವುದು ಸೂಕ್ತ. ಇಂಥ ನಿವೇಶನಗಳಲ್ಲಿ ಮೋರಿ ನೀರು ಮನೆಯನ್ನು ಪ್ರವೇಶಿಸುವ ಸಾಧ್ಯತೆ ಕಡಿಮೆ ಇರುತ್ತದೆ! ಕೈಗೆ ಸಿಕ್ಕದ್ದು ಪಂಚಾಮೃತ ಎಂದುಕೊಂಡು, ನಿವೇಶನದ ನ್ಯೂನತೆಗಳೇ ನಮಗೆ ಲಾಭ ತಂದು ಕೊಡುವಂತೆಯೂ ಮಾಡಬಹುದು. – ಆರ್ಕಿಟೆಕ್ಟ್ ಕೆ ಜಯರಾಮ್