Advertisement
ಮನೆ ಕಟ್ಟುವಾಗ ಬರುವ ಕಡೆಯ ಕಾರ್ಯ ಬಣ್ಣ ಬಳಿಯುವುದೇ ಆದರೂ ಕಡೆಗೆ ಕಣ್ಣಿಗೆ ಹೆಚ್ಚು ಕಾಣುವುದೂ ಕೂಡ ಇದೇ ಆಗಿರುತ್ತದೆ. ಕೆಲವೊಮ್ಮೆ ಸಾಧಾರಣ ಎನ್ನಿಸುವ ಮನೆಗಳೂ ಕೂಡ ಒಂದಷ್ಟು ಒಳ್ಳೆಯ ಬಣ್ಣ ಬಳಿದರೆ ಸುಂದರವಾಗಿ ಕಾಣಲು ತೊಡಗುತ್ತವೆ. ಹಾಗೆಯೇ, ಬಹುತೇಕ ಚೆನ್ನಾಗಿಯೇ ಮೂಡಿಬಂದಿರುವ ಮನೆಗಳೂ ಪೇಂಟಿಂಗ್‌ನಲ್ಲಿ ಎಡವಟ್ಟಾದರೆ ಅಷ್ಟೊಂದು ಚೆನ್ನಾಗಿ ಕಾಣುವುದಿಲ್ಲ. ಬಣ್ಣಬಳಿಯಲು ಅಗ್ಗದ ಬಣ್ಣಗಳಿಂದ ಹಿಡಿದು ದುಬಾರಿ ಫಿನಿಶ್‌ಗಳೂ ಲಭ್ಯ, ಮನೆಗೆ ಒಪ್ಪುವ ಬಣ್ಣ ಬಳಿದರೆ ಹೆಚ್ಚು ಖರ್ಚು ಆಗದೆ ಸುಂದರವಾಗಿಯೂ ಮೂಡಿಬರುತ್ತದೆ. ಹಾಗಾಗಿ ಬಣ್ಣ ಹಚ್ಚುವ ಮೊದಲು ಕೆಲವೊಂದು ಅಂಶಗಳನ್ನು ಗಮನಿಸಿದರೆ, ಹಣ ಉಳಿತಾಯವಾಗುತ್ತ¤ದೆ.
ಗಾಢವಾದ ಬಣ್ಣಗಳು ಹೆಚ್ಚು ಲೀಟರ್ ಬಣ್ಣಗಳನ್ನು ಬೇಡುತ್ತವೆ. ಅದೇ ತೆಳುವಾದ ಬಣ್ಣ ಕಡಿಮೆ ಖರ್ಚು ಮಾಡಿಸುತ್ತದೆ. ಇದಕ್ಕೆ ಕಾರಣ ಬಣ್ಣ ಡಾರ್ಕ್ ಆದಷ್ಟೂ ಕವರಿಂಗ್ ಸರಿಯಾಗಿ ಆಗದೆ ಎರಡು ಮೂರು ಪದರದಲ್ಲಿ ಬಣ್ಣವನ್ನು ಹಚ್ಚಬೇಕಾಗುತ್ತದೆ. ಅದೇ ಲೈಟ್ ಕಲರ್ ಅದರೆ ಎರಡು ಪದರಗಳಲ್ಲಿ ಮುಗಿಸಿಬಿಡಬಹುದು. ಜೊತೆಗೆ ಗಾಢಬಣ್ಣವನ್ನು ಮಿಶ್ರಣಮಾಡುವಾಗ ಮಂದವಾಗಿರಬೇಕಾಗುತ್ತದೆ. ಅದೇ ತೆಳು ಬಣ್ಣಗಳಿಗೆ ಹೆಚ್ಚು ಮಂದವಾಗಿರುವ ಅಗತ್ಯ ಇರುವುದಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ, ಚದುರಕ್ಕೆ ಒಂದು ಲೀಟರ್ ಆಗುವ ಜಾಗದಲ್ಲಿ ಗಾಢಬಣ್ಣಕ್ಕೆ ಎರಡು ಲೀಟರ್ ಬೇಕಾಗುತ್ತದೆ! ಫಿನಿಶ್ ನೋಡಿಕೊಳ್ಳಿ
ಕೆಲವೊಮ್ಮೆ ಬಣ್ಣ ಬಳಿಯುವ ಗೋಡೆಯ ಸೀಲಿಂಗ್ ಮಟ್ಟವಾಗಿದೆಯೇ? ಓರೆಕೋರೆಗಳಿವೆಯೇ? ಎಂದು ಗಮನಿಸದೆ ಬಣ್ಣ ಬಳಿದರೆ, ಈ ಹಿಂದೆ ಕಾಣದ ನ್ಯೂನತೆ ನಂತರ ಕಾಣಲು ಶುರುವಾಗುತ್ತದೆ. ಅದನ್ನು ಸರಿಪಡಿಸಲು ಹೊರಟರೆ ಈಗಾಗಲೇ ಹೊಡೆದಿರುವ ಬಣ್ಣ ನಷ್ಟವಾಗುತ್ತದೆ. ಬಣ್ಣ ಬಳಿಯುವಾಗ ಸ್ವಲ್ಪ “ಟಚ್ ಅಪ್’ ಪೇಂಟರ್ ಗಳು ಬಣ್ಣ ಹೊಡೆದ ನಂತರ ರಿಪೇರಿ ಮಾಡುವುದು ಅನಿವಾರ್ಯ. ಆದರೂ ಈ ರೀತಿಯ ರಿಪೇರಿ ಹೆಚ್ಚಿದ್ದಷ್ಟೂ ಬಣ್ಣ ಹೆಚ್ಚು ಹೊಳೆಯಲು ತೊಡಗುತ್ತದೆ! ಆದುದರಿಂದ ಬಣ್ಣ ಹೊಡೆಯುವ ಮೊದಲು, ಗೋಡೆಗಳನ್ನು ಪರಿಶೀಲಿಸಿ, ನುಣ್ಣಗೆ- ನುಣುಪಾಗಿ ಇದೆಯೇ? ಎಂದು ಪರೀಕ್ಷಿಸಿ ನೋಡಿದ ನಂತರವೇ ಬಣ್ಣ ಬಳಿಯುವ ಕಾರ್ಯ ಶುರುಮಾಡುವುದು ಒಳ್ಳೆಯದು.
Related Articles
ಸಿಮೆಂಟ್ ಗಾರೆ ಪೂಸಿ ಮಟ್ಟಮಾಡಿದ ಗೋಡೆಗಳ ನ್ಯೂನತೆಗಳನ್ನು, “ಹಳ್ಳಕೊಳ್ಳ’ ಗಳನ್ನು ತುಂಬಿ ಮಟ್ಟಸ ಮಾಡುವುದೇ ಈ ಪುಟ್ಟಿಯ ಕೆಲಸ. ಸಿಮೆಂಟ್ ಗೋಡೆಗಳು ಸ್ವಾಭಾವಿಕವಾಗೇ ಪೇಂಟ್ ಅನ್ನು ಹೀರಿಕೊಳ್ಳುವ ಗುಣ ಹೊಂದಿರುತ್ತದೆ. ಹಾಗಾಗಿ ಗೋಡೆಗೆ ಮೊದಲು ಪ್ರ„ಮರ್ ಗಳನ್ನು ಹಚ್ಚಿ, ಇವು ಹೆಚ್ಚುವರಿ ಬಣ್ಣ ಹೀರದಂತೆ ಮಾಡಬೇಕು. ಹೀಗೆ ಮಾಡುವುದರಿಂದಲೂ ಗೋಡೆಗಳಿಗೆ ಬೇಕಾಗುವ ಬಣ್ಣದ ಅಗತ್ಯದಲ್ಲಿ ಉಳಿತಾಯ ಮಾಡಬಹುದು. ಅದೇ ರೀತಿ, ಬಳಸುವ ಪಟ್ಟಿಗಳಲ್ಲೂ ಪ್ರ„ಮರ್ ಬೆರಕೆ ಆಗಿರಬೇಕು, ಇಲ್ಲದಿದ್ದರೆ, ಅಲ್ಲಲ್ಲಿ ಪ್ಯಾಚ್‌ಗಳು ಕಾಣುವ ಸಾಧ್ಯತೆ ಇರುತ್ತದೆ. ಹೀಗಾಗಲು ಕಾರಣ- ಪುಟ್ಟಿಯೇ ಎಲ್ಲ ಬಣ್ಣವನ್ನೂ ಕುಡಿದು, ಮೇಲೆ ಏನೂ ಕಾಣದಂತೆ ಆಗುತ್ತದೆ.
Advertisement
ಪೆಂಟಿಂಗ್ ಕೆಲಸಕ್ಕೆ ಆಧಾರವಾಗಿರುವ ಈ ಪಟ್ಟಿ ಎಷ್ಟು ಚೆನ್ನಾಗಿ ಕಾರ್ಯನಿರ್ವಹಿಸುತ್ತದೋ ಅಷ್ಟೇ ಸುಂದರವಾಗಿ ಅದರ ಮೇಲೆ ಬರುವ ಬಣ್ಣಗಳು ಬಹುಕಾಲ ನಿಲ್ಲಲು ಸಹಾಯಕಾರಿ. ಆದುದರಿಂದ ಪುಟ್ಟಿ ಮಾಡುವಾಗ ಒಳ್ಳೆಯ ಕಂಪನಿಯ ಸರಕನ್ನು ಬಳಸಲು ಮರೆಯ ಬಾರದು. ಪುಟ್ಟಿಯನ್ನು ಒಂದೇ ಬಾರಿಗೆ ದಪ್ಪನಾಗಿ ಬಳಿಯುವ ಬದಲು, ಎಲ್ಲೆಲ್ಲಿ ಸ್ವಲ್ಪ ದಪ್ಪನಾಗಿ ಹಾಕಬೇಕೋ ಅಲ್ಲೆಲ್ಲ ಒಂದೆರಡು ಪದರದಲ್ಲಿ- ಒಂದು ಪದರ ಆರಿದ ಮೇಲೆ ಮತ್ತೂಂದನ್ನು ಬಳಿದರೆ, ಹೆಚ್ಚು ಪರಿಣಾಮಕಾರಿಯಾಗಿಯೂ ನುಣುಪಾಗಿಯೂ ಫಿನಿಶಿಂಗ್ ಬರುತ್ತದೆ. ಹೆಚ್ಚು ದಪ್ಪನಾಗಿ ಮೆತ್ತಿದರೆ, ಅದು ಕುಗ್ಗಿ ಉಬ್ಬು ತಗ್ಗು ಆಗುವುದರ ಜೊತೆಗೆ ಬಿರುಕುಗಳು ಬರುವ ಸಾಧ್ಯತೆಯೂ ಹೆಚ್ಚಿರುತ್ತದೆ.
ಬಣ್ಣ ಬಳಿಯುವ ವಿಧಾನಸಿಮೆಂಟ್ ಪ್ಲಾಸ್ಟರ್ ಚೆನ್ನಾಗಿ ಕ್ಯೂರ್ ಆಗಿ ಒಣಗಿದ ನಂತರವೇ ಪೇಂಟ್ ಕೆಲಸವನ್ನು ಶುರುಮಾಡುವುದು ಉತ್ತಮ. ಒಮ್ಮೆ ಪ್ಲಾಸ್ಟರ್ ಮೇಲೆ ಬಣ್ಣ ಬಂದು ಕೂತರೆ, ಮತ್ತೆ ನೀರು ಸಿಮೆಂಟಿಗೆ ಸಿಗದೆ, ಕ್ಯೂರಿಂಗ್ ಕಡಿಮೆ ಆಗಬಹುದು. ಹಾಗಾಗಿ ಹತ್ತು ಹದಿನೈದು ದಿನ ಸಿಮೆಂಟ್ ಗಾರೆ ಪೂಸಿದ ಗೋಡೆಗೆ ಕ್ಯೂರಿಂಗ್ ಮಾಡಿ, ಆಯಾ ಕಾಲಮಾನಕ್ಕೆ – ಬಿಸಿಲು ಹಾಗೂ ಚಳಿಗಾಲದಲ್ಲಿ ಸುಮಾರು ಹತ್ತು ಹದಿನೈದು ದಿನ, ಮಳೆಗಾಲದಲ್ಲಿ ಕಡೇ ಪಕ್ಷ ಒಂದು ತಿಂಗಳಾದರೂ ಬಿಟ್ಟು ಪೇಂಟಿಂಗ್ ಕೆಲಸ ಶುರುಮಾಡುವುದು ಉತ್ತಮ. ತುರ್ತಾಗಿ ಮನೆ ಮುಗಿಸುವ ಅಗತ್ಯವಿದ್ದರೆ -ಈಗ ಸಿಮೆಂಟ್ ಬೇಗ ಸೆಟ್ ಆಗುವಂತೆ ಮಾಡುವ ರಾಸಾಯನಿಕಗಳು ಮಾರುಕಟ್ಟೆಯಲ್ಲಿ ಲಭ್ಯ, ಇವುಗಳನ್ನು ಬಳಸಿದರೆ, ಹದಿನೈದು ದಿನಗಳಲ್ಲಿ ಆಗುವ ಕ್ಯೂರಿಂಗ್ ನಾಲ್ಕಾರು ದಿನಗಳಲ್ಲೆ ಆಗಿಬಿಡುತ್ತದೆ! ಗೋಡೆಯ ಪ್ಲಾಸ್ಟರ್ ಸರಿಯಾಗಿ ಗಟ್ಟಿಗೊಂಡಿದೆಯೇ? ಎಂದು ಪರೀಕ್ಷಿಸಿ ನಂತರ ಬೇಕಾದರೆ ಬಣ್ಣ ಬಳಿಯುವ ಕಾರ್ಯ ಶುರುಮಾಡಬಹುದು. ಲೇಬರ್ ಲೆಕ್ಕಾಚಾರ
ಬಣ್ಣದಷ್ಟೇ ದುಬಾರಿ ಲೆಕ್ಕಾಚಾರವಿದ್ದು ಕುಶಲ ಕರ್ಮಿಗಳ ಕೂಲಿಯಾಗಿರುತ್ತದೆ. ಇವರಿಗೆ ಕೆಲಸ ಹೆಚ್ಚಿದಷ್ಟೂ ಅವರು ಹೆಚ್ಚು ಹೆಚ್ಚು ಕೂಲಿ ಕೇಳುತ್ತಾರೆ. ಆದುದರಿಂದ ನಾವು ಪೇಂಟರ್‌ಗಳಿಗೆ ಹೆಚ್ಚು ಹೊರೆ ಆಗದಂತೆ ನಿಗಾವಹಿಸುವುದು ಮುಖ್ಯ. ಗೋಡೆಯ ಮೇಲಿನ ಪ್ಲಾಸ್ಟರ್ ಬಣ್ಣ ಬಳಿಯುವಲ್ಲಿ ಮುಖ್ಯ ಭೂಮಿಕೆ ವಹಿಸುವ ಕಾರಣ ನಾವು ಗೋಡೆ ಕಟ್ಟುವಾಗಲೇ ಅದು “ತೂಕಕ್ಕೆ’ ಬರುತ್ತದೆಯೇ ಅಂತ ನಾಲ್ಕಾರು ಬಾರಿ ನೋಡಬೇಕು. ನಂತರ ಬರುವ ಪ್ಲಾಸ್ಟರ್ ಕೆಲಸ ಸುಲಭವಾಗುತ್ತದೆ. ಗೋಡೆಯೇ ಸರಿಬರದಿದ್ದರೆ, ಪ್ಲಾಸ್ಟರ್ ನಲ್ಲಿ ಎಡವಟ್ಟಾಗುವ ಸಾಧ್ಯತೆಗಳೇ ಹೆಚ್ಚಿರುತ್ತದೆ! ಆದುದರಿಂದ, ಎಲ್ಲವೂ ತೂಕಕ್ಕೆ, ಹಾಗೆಯೇ ರಸಮಟ್ಟಕ್ಕೆ ಇದೆಯೇ ಎಂದು ಪರಿಶೀಲಿಸುವುದು ಉತ್ತಮ. ದಿನದ ಹೊತ್ತು ಪ್ಲಾಸ್ಟರ್ ಪೇಂಟಿಂಗ್‌ನಲ್ಲಿ ಕಾಣದ ನ್ಯೂನತೆಗಳು ರಾತ್ರಿ ವಿದ್ಯುತ್ ದೀಪ ಹಚ್ಚಿದ ಮೇಲೆ ಕಾಣಲು ತೊಡಗುತ್ತವೆ. ಹೀಗಾಗುವುದನ್ನು ತಡೆಯಲು ನಾವು ಪ್ಲಾಸ್ಟರ್ ಮಾಡುವಾಗಲೇ ಸಂಜೆಯ ಹೊತ್ತು ಹೋಗಿ, ಸ್ವಲ್ಪ ಕತ್ತಲಾಗುತ್ತಿದ್ದಂತೆ ಟಾರ್ಚ್ ಬಿಟ್ಟು ಓರೆಕೋರೆಗಳನ್ನು ಗಾರೆಯವರಿಗೆ ತೋರಿಸಿದರೆ, ಅವರೂ ಸಪೂರಾದ, ನುಣುಪಾದ ಫಿನಿಶ್ ಕೊಡಲು ಸಾಧ್ಯ.
ಹಾಗೆಯೇ ನಂತರವೂ ಬಣ್ಣ ಬಳಿಯುವಾಗ ನಮಗೆ ಸಾಕಷ್ಟು ಉಳಿತಾಯ ಆಗುತ್ತದೆ. ಹೆಚ್ಚಿನ ಮಾಹಿತಿಗೆ : 9844132826 ಆರ್ಕಿಟೆಕ್ಟ್ ಕೆ. ಜಯರಾಮ್