Advertisement

ಅವ್ವಂದಿರ ಸಂಪ್ರದಾಯದ ಹಾಡು ಉಳಿಸಿ

03:09 PM Jun 20, 2017 | Team Udayavani |

ಧಾರವಾಡ: ಹಳ್ಳಿಯ ಸೊಗಡಿನಲ್ಲಿ ಮೌಖೀಕ ಪರಂಪರೆ ಮೂಲಕ ತಾಯಂದಿರು ಹಾಡಿಕೊಂಡು ಬಂದಿರುವ ಸಂಪ್ರದಾಯದ ಹಾಡುಗಳನ್ನು ಇಂದಿನ ಪೀಳಿಗೆಗೆ ಕಲಿಸುವುದು ಅಗತ್ಯವಿದೆ ಎಂದು ಲೇಖಕಿ ಡಾ| ಹೇಮಾ ಪಟ್ಟಣಶೆಟ್ಟಿ ಹೇಳಿದರು. 

Advertisement

ಇಲ್ಲಿನ ಕಸಾಪದಲ್ಲಿ ಜಾನಪದ ಸಂಶೋಧನಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಹಾಡುಗಳ ತರಬೇತಿ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಮೌಖೀಕ ಪರಂಪರೆಯ ಹಾಡುಗಳನ್ನು ಇಂದು ಎಲ್ಲರೂ ಮರೆತು ಬಿಟ್ಟಿದ್ದೇವೆ. 

ಆ ಮೂಲಕ ಒಂದು ದೊಡ್ಡ ಜಾನಪದ ಸಂಸ್ಕೃತಿಯನ್ನೇ ನಾವು ತೆರೆಮರೆಗೆ ಸರಿಯುವಂತೆ ಮಾಡಿದ್ದೇವೆ. ಹಳ್ಳಿಯ ತಾಯಂದಿರು ತಮ್ಮ ತಲೆಮಾರಿನಿಂದ ಕಲಿತುಕೊಂಡು ಹಾಡಿಕೊಂಡು ಬಂದಿರುವ ಹಾಡುಗಳನ್ನು ಮತ್ತೆ ಕಲಿತು, ಕಲಿಸಿ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ. 

ಅದಕ್ಕಾಗಿ ಜಾನಪದ ಸಂಶೋಧಕರು, ಕಲಾವಿದರು ಶ್ರಮಿಸಬೇಕಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿ.ಎಂ. ಹಿರೇಮಠ, ಯಾವುದೇ ಚಳವಳಿ ಆರಂಭಗೊಂಡರು ಮೊದಲು ಧಾರವಾಡದಲ್ಲಿಯೇ ಆರಂಭಗೊಳ್ಳುತ್ತವೆ.

ಇದೀಗ ಜಾನಪದವನ್ನು ಪುನರುಜ್ಜೀನಗೊಳಿಸುವ ಕಾರ್ಯ ಧಾರವಾಡದ ಜಾನಪದ ಸಂಶೋಧನಾ ಕೇಂದ್ರದಿಂದ ಆರಂಭಗೊಂಡಿದೆ. ಇದು ಇಲ್ಲಿಗೆ ನಿಲ್ಲದೇ, ಈ ಸಂಸ್ಕೃತಿಯನ್ನು ಬೆಂಗಳೂರಿನ ಭಾಗದವರಿಗೂ  ಪರಿಚಯಿಸುವ ಕೆಲಸವಾಗಬೇಕು ಎಂದು ಹೇಳಿದರು. 

Advertisement

ಸಾಹಿತಿ ಪ್ರೊ| ಕೌಜಲಗಿ ಮಾತನಾಡಿ, ಜಾನಪದವನ್ನು ಉಳಿಸುವುದು ಎಂದರೆ ಬರೀ ಮಾತನಾಡುವುದು  ಆಗಿಬಿಟ್ಟಿದೆ. ಆದರೆ ಪ್ರಾಯೋಗಿಕವಾಗಿ ಹೊಸ ಆಯಾಮಗಳನ್ನು ಕಂಡುಕೊಂಡು ಈ ಕಲೆಯನ್ನು ಮತ್ತೆ ಪ್ರಸ್ತುತತೆಯ ಕಡೆಗೆ ತೆಗೆದುಕೊಂಡು ಹೋಗಬೇಕಿದೆ. 

ಅದಕ್ಕೆ ಸರ್ಕಾರ, ಸಂಘ-ಸಂಸ್ಥೆಗಳ ಬೆಂಬಲವೂ ಅಗತ್ಯವಿದೆ ಎಂದು ಹೇಳಿದರು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ ಮಾತನಾಡಿದರು. ವ್ಯವಸ್ಥಾಪಕಿ ಜಯಶ್ರೀ ಗೌಳಿ, ಗಾಯಕಿ ಸುನಂದಾ ನಿಂಬನಗೌಡರ ಇದ್ದರು. ಡಾ| ಜೀನದತ್ತ ಹಡಗಲಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಮಲ್ಲಪ್ಪ ಹೊಂಗಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next