Advertisement
ಹೌದು, ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟು ಈ ಬಾರಿ ಬರದ ಛಾಯೆ ಒಂದೆಡೆ ಕಾಣಿಸಿಕೊಳ್ಳುತ್ತಿದ್ದು, ಮತ್ತೂಂದೆಡೆ ಜೀವ ಜಲಕ್ಕಾಗಿ ನದಿ ಉಳಿಸಿ ಅಭಿಯಾನ ಜಿಲ್ಲಾದ್ಯಂತ ಕಾವೇರುತ್ತಿದ್ದು, ವಿಶೇಷವಾಗಿ ಚಿಕ್ಕಬಳ್ಳಾಪುರದಲ್ಲಿ ಚಿತ್ರಾವತಿ ಉಳಿಸಿ ಅಭಿಯಾನ ಶುರುವಾದ ಬೆನ್ನಲ್ಲೇ ಗೌರಿಬಿದನೂರಲ್ಲಿ ಪಿನಾಕಿನಿ ಉಳಿಸೋಣ ಬನ್ನಿ ಅಭಿಯಾನ ಶುರುವಾಗಿದೆ.
Related Articles
Advertisement
ಇತ್ತೀಚೆಗೆ ಚಿತ್ರಾವತಿ ನದಿ ಉಳಿಸಿ ಅಭಿಯಾನದ ಭಾಗವಾಗಿ ಸಮಗ್ರ ನೀಲನಕ್ಷೆಯನ್ನು ಹಲವು ಜನಪರ ಸಂಘಟನೆಗಳು, ನೀರಾವರಿ ಹೋರಾಟಗಾರರ ಸಮ್ಮುಖದಲ್ಲಿ ಮಂಡಿಸಿ ಚಿತ್ರಾವತಿ ಹೇಗೆಲ್ಲಾ ಕಲುಷಿತ ಆಗಿದೆ, ಗಣಿಗಾರಿಕೆ ಹೇಗೆಲ್ಲಾ ಪ್ರಭಾವ ನೀರಿದೆ, ಅಂತರ್ಜಲದ ದುಸ್ಥಿತಿ ಏನು?, ಚಿತ್ರಾವತಿ ಅಚ್ಚುಕಟ್ಟು ಒತ್ತುವರಿದಾರರಿಂದ ಹೇಗೆ ಮಾಯವಾಗಿದೆ ಎಂಬುದರ ಪಕ್ಷಿನೋಟವನ್ನು ಜನರ ಮುಂದೆ ಇಟ್ಟು ಚಿತ್ರಾವತಿ ನದಿ ಉಳಿಸಿ ಅಭಿಯಾನದ ಮಾದರಿಯಲ್ಲಿ ಈಗ ಪಿನಾಕಿನಿ ನದಿ ಉಳಿಸಿ ಅಭಿಯಾನ ಸದ್ದು ಮಾಡುತ್ತಿದೆ.
ಪಿನಾಕಿನಿ ನದಿ ಉಳಿಸಿ ಅಭಿಯಾನದ ಬೇಡಿಕೆಗಳೇನು?: ಪಿನಾಕಿನಿ ನದಿಗಳಿಂದ ನೂರಾರು ಕೆರೆಗಳಿಗೆ ನೀರು ಪೂರೈಸುವ ಕೆರೆಗಳ ಪೋಷಕ ಕಾಲುವೆಗಳ ಒತ್ತುವರಿ ತೆರವುಗೊಳ್ಳಬೇಕು, ಪಿನಾಕಿನಿ ನದಿ ಸುತ್ತ ಶೇ.33 ರಷ್ಟು ಅರಣ್ಯ, ತೋಟಗಾರಿಕೆ, ಸಾಮಾಜಿಕ ಅರಣ್ಯ ಬೆಳೆಸಬೇಕಿದೆ. ಪಿನಾಕಿನಿ ನದಿಗೆ ಕೃಷ್ಣೆಯನ್ನು ಜೋಡಿಸಬೇಕು, ಉತ್ತರ ಪಿನಾಕಿನಿ ನದಿಗೆ ಬೆಂಗಳೂರು ಪಾಯಿಖಾನೆ-ಕೊಳಚೆ ನೀರಾದ ಎಚ್‌ಎನ್ ವ್ಯಾಲಿ ನೀರು ಹರಿಸಬಾರದು. ಜಿಲ್ಲೆಯಲ್ಲಿ ಎಲ್ಲಿದೆ ಪಿನಾಕಿನಿ ನದಿ? ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಹುಟ್ಟಿ ಆಂಧ್ರಕ್ಕೆ ಹರಿದು ಹೋಗುವ ಪಿನಾಕಿನಿ ನದಿ ಜಿಲ್ಲೆಯ ಜೀವ ನದಿಗಳಲ್ಲಿ ಅತ್ಯಂತ ಮಹತ್ವದಾಗಿದೆ. ಇದರ ಜಲಾಯನದ ವ್ಯಾಪ್ತಿ ಗೌರಿಬಿದನೂರಲ್ಲಿದ್ದು ಹಲವು ದಶಕಗಳ ಹಿಂದೆ ಎಗ್ಗಿಲ್ಲದೇ ನಡೆದ ಮರಳು ದಂಧೆ ಇಂದು ಪಿನಾಕಿನಿ ನದಿಯನ್ನು ಆಹುತಿ ಪಡೆದಿದೆ. ಮಳೆಗಾಲದಲ್ಲಿ ಸುಮಾರು 35 ಟಿಎಂಸಿ ನೀರು ಸಂಗ್ರಹವಾಗುತ್ತದೆಯೆಂದು ಜಲತಜ್ಞರು ಅಂದಾಜಿಸಿದ್ದು, ಈ ನೀರು ಮಳೆಗಾಲದಲ್ಲಿ ವ್ಯರ್ಥವಾಗಿ ಆಂಧ್ರಕ್ಕೆ ಹರಿದು ಹೋಗುತ್ತಿದೆ. ಆದ್ದರಿಂದ ಪಿನಾಕಿನಿ ನದಿಯನ್ನು ಸಮಗ್ರವಾಗಿ ಪುನಶ್ಚೇತನಗೊಳಿಸಬೇಕು, ಜಲಾನಯನ ಪ್ರದೇಶವನ್ನು ಅಭಿವೃದ್ಧಿಪಡಿಸಿ ಜಿಲ್ಲೆಯ ಕುಡಿಯುವ, ನೀರಾವರಿ, ಕೃಷಿ, ಅರಣ್ಯ ಅಭಿವೃದ್ದಿ, ಉದ್ಯೋಗ ಸೃಷ್ಠಿಗೆ ಅವಕಾಶ ಇರುವ ಪಿನಾಕಿನಿ ನದಿ ಉಳಿಯಬೇಕೆಂಬ ಅಭಿಯಾನ ಈಗ ಜಿಲ್ಲೆಯಲ್ಲಿ ಶುರುವಾಗಿದೆ.
ಸಭೆ ಆಯೋಜನೆಗೆ ಜಿಲ್ಲಾಡಳಿತಕ್ಕೆ ಆಗಸ್ಟ್ ಗಡುವು: ಜಿಲ್ಲಾಡಳಿತ ಕೂಡಲೇ ಆಗಸ್ಟ್ ವೇಳೆಗೆ ಜಲ ಸಂಪನ್ಮೂಲ ಅಧಿಕಾರಿಗಳ ಜೊತೆ ಜಲ ಸಂವಾದವನ್ನು ಏರ್ಪಡಿಸಿ ಚುನಾಯಿತ ಜನಪ್ರತಿನಿಧಿಗಳು, ಜಲತಜ್ಞರು, ಪರಿಸರ ವಾದಿ ಗಳು, ಆಸಕ್ತ ಸಂಘ, ಸಂಸ್ಥೆಗಳು, ಪ್ರಗತಿಪರ ರೈತರನ್ನು ಸಮಾಲೋಚನಾ ಸಭೆಗೆ ಆಹ್ವಾನಿಸಿ ಪಿನಾಕಿನಿ ನದಿ ಪುನಶ್ಚೇನಕ್ಕೆ ಸೂಕ್ತ ನಿರ್ಧಾರ ತೆಗೆದುಕೊಂಡು ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು. ಆಗಸ್ಟ್ ತಿಂಗಳ ಕೊನೆಯ ವಾರದೊಳಗೆ ಸಭೆ ಆಯೋಜಿಸಬೇಕೆಂಬ ಆಗ್ರಹ ಈಗ ಪಿನಾಕಿನಿ ನದಿ ಉಳಿಸಿ ಅಭಿಯಾನದ ಪ್ರಮುಖ ಬೇಡಿಕೆ ಆಗಿದೆ.
ಪಿನಾಕಿನಿಯ ಸಂಸ್ಕೃತಿ, ಸಂಪತ್ತು ಹಾಗೂ ಸಮೃದ್ಧಿಯನ್ನು ಸಂರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಪಿನಾಕಿನ ನೀರಾವರಿ ಹೋರಾಟ ಸಮಿತಿಯನ್ನು ರೂಪಿಸಲಾಗಿದೆ. ಜಿಲ್ಲೆಗೆ ಎತ್ತಿನಹೊಳೆಯಿಂದ ನೀರಿನ ನ್ಯಾಯ ಸಿಗುವುದಿಲ್ಲ, ಮಳೆ ನೀರು ಸಂರಕ್ಷಿಸಿ ಕೆರೆಗಳಿಗೆ ಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕು, ಮುಖ್ಯವಾಗಿ ಕೆರೆಗಳ ಹೂಳು ತೆಗೆಸಬೇಕು. ●ಪರಿಸರವಾದಿ ಚೌಡಪ್ಪ, ಪಿನಾಕಿನಿ ನದಿ ಉಳಿಸಿ ಅಭಿಯಾನದ ಪ್ರಮುಖರು
-ಕಾಗತಿ ನಾಗರಾಜಪ್ಪ