ಧಾರವಾಡ: ಇಂದಿನ ದಿನಗಳಲ್ಲಿ ಅರಣ್ಯ ನಾಶದಿಂದ ಮಳೆ ಕಡಿಮೆಯಾಗುತ್ತಿದ್ದು, ಇದರಿಂದ ಪಕ್ಷಿ-ಪ್ರಾಣಿಗಳಿಗೆ ನೀರು, ಹಣ್ಣು-ಹಂಪಲು ಸಿಗುತ್ತಿಲ್ಲ. ಹೀಗಾಗಿ ಗಿಡ-ಮರ ಕಡಿಯದೇ ಅರಣ್ಯ ಉಳಿಸಿ ಬೆಳೆಸಬೇಕಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಕಲಘಟಗಿ ತಾಲೂಕಿನ ಜೋಡಳ್ಳಿ ಮತ್ತು ದೇವಲಿಂಗಿಕೊಪ್ಪದಲ್ಲಿ ಫಲಾನುಭವಿಗಳಾದ ತಂಗೆವ್ವ ಹರಿಜನ, ಸಾವಕ್ಕ ಅಂಬಿಗೇರ ಅವರಿಗೆ ಸಾಂಕೇತಿಕವಾಗಿ ಗ್ಯಾಸ್ ಕಿಟ್ ವಿತರಿಸಿ ಅವರು ಮಾತನಾಡಿದರು. ಹಳ್ಳಕೊಳ್ಳಗಳಲ್ಲಿ ನೀರಿಲ್ಲ. ನದಿಗಳಿಗೆ ಬರುವ ನೀರಿನ ಮೂಲಗಳಾದ ಉಪನದಿಗಳಲ್ಲಿ ನೀರಿಲ್ಲದೆ ಕಾಡು ಪ್ರಾಣಿಗಳೂ ಕಾಡು ಬಿಟ್ಟು ನೀರಿನ ದಾಹ ನೀಗಿಸಿಕೊಳ್ಳಲು ಹೊರ ಬರುತ್ತಿವೆ.
ಸರ್ಕಾರ ಅಂತಹ ಪರಿಸ್ಥಿತಿಯನ್ನು ಮನಗಂಡು ಗಿಡಮರಗಳನ್ನು ಉಳಿಸುವುದಕ್ಕಾಗಿ ಕಾಡಿನ ಅಂಚಿನಲ್ಲಿರುವ ಗಿರಿಧಾಮಗಳಲ್ಲಿ ವಾಸಿಸುವ ಬುಡಕಟ್ಟು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಅರಣ್ಯ ಇಲಾಖೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಅರಣ್ಯ ಯೋಜನೆಯಡಿ ಗ್ಯಾಸ್ ಕಿಟ್ ಕೊಡಲಾಗುತ್ತಿದೆ ಎಂದರು.
ಸುಮಾರು 84 ಫಲಾನುಭವಿಗಳಿಗೆ ಗ್ಯಾಸ್‌ಕಿಟ್ ವಿತರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸುಮಾರು 10ರಿಂದ 15ಸಾವಿರ ಗ್ಯಾಸ್‌ಕಿಟ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಇಂದು ಸರ್ಕಾರ ಬಿಪಿಎಲ್ ಫಲಾನುಭವಿಗಳಿಗೆ ಅನ್ನಭಾಗ್ಯ ಹಾಗೂ ಶಾಲಾ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ವಾರದಲ್ಲಿ 5 ದಿನಗಳವರೆಗೆ ಹಾಲು ಪೂರೈಸುತ್ತಿದೆ.
ಬಿಪಿಎಲ್ ಕುಟುಂಬದ ರೈತರಿಗೆ ಯಾವುದೇ ಬಡ್ಡಿ ಇಲ್ಲದೇ 3 ಲಕ್ಷ ರೂಪಾಯಿವರೆಗೆ ಸಾಲ ಮಂಜೂರು ಮಾಡಲಾಗುತ್ತಿದೆ ಎಂದು ತಿಳಿಸಿದರು. ಉಮೇಶ ಶಿವಾಚಾರ್ಯ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಅರ್ಜುನ ಉಣಕಲ್ಲ, ತಾಪಂ ಸದಸ್ಯರಾದ ನಿರ್ಮಲಾ ಸುಳ್ಳದ, ತಹಶೀಲ್ದಾರರಾದ ಬಿ.ವಿ.ಲಕ್ಷ್ಮೇಶ್ವರ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಶಾಂತ ಸುಳ್ಳದ, ಮುಖಂಡರಾದ ಹನುಮಂತ ಕಾಳೆ, ರುದ್ರಗೌಡ ಪಾಟೀಲ, ರಜನಿಕಾಂತ ಬಿಜವಾಡ, ಅಣ್ಣಪ್ಪ ದೇಸಾಯಿ, ದಾಸನಕೊಪ್ಪ ಇದ್ದರು.