Advertisement

ಮಣ್ಣು ಸಂರಕ್ಷಣೆಗೆ ಪ್ರತ್ಯೇಕ ನೀತಿ ಅಗತ್ಯ: ಸದ್ಗುರು

10:29 PM Jun 18, 2022 | Team Udayavani |

ಬೆಂಗಳೂರು: “ಮಣ್ಣು ಉಳಿಸಿ’ ಅಭಿಯಾನವು 74 ದೇಶಗಳನ್ನು ಮೋಟಾರ್‌ ಬೈಕ್‌ ಮೂಲಕ ಯಶಸ್ವಿಯಾಗಿ ಸುತ್ತಾಡಿ ಈಗ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ನಗರದ ಅರಮನೆ ಮೈದಾನದಲ್ಲಿ ಜೂ. 19ರಂದು ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸದ್ಗುರು ಜಗ್ಗಿ ವಾಸುದೇವ ಅವರು ಹೇಳಿದ್ದಾರೆ.

Advertisement

ವಿಶ್ವಾದ್ಯಂತ ನಡೆದ “ಮಣ್ಣು ಉಳಿಸಿ’ ಬೈಕ್‌ ಅಭಿಯಾನವು ಬೆಂಗಳೂರು ಪ್ರವೇಶಿಸಿದ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಡನ್‌ನಿಂದ ಪ್ರಾರಂಭಿಸಿದ 100 ದಿನಗಳ ಮಣ್ಣು ಉಳಿಸಿ ಅಭಿಯಾನಕ್ಕೆ ಬಹುತೇಕ ಎಲ್ಲ ರಾಷ್ಟ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಇಲ್ಲಿಯವರೆಗೆ ಒಟ್ಟು 27,278 ಕಿ.ಮೀ. ದೂರ ಕ್ರಮಿಸಿದ್ದು, ಮಣ್ಣಿನ ಸಂರಕ್ಷಣೆ-ಜಾಗೃತಿಗೆ ಸಂಬಂಧಿಸಿ 593 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಚರಿಸಿದ ಎಲ್ಲ ದೇಶಗಳಲ್ಲೂ ಅಲ್ಲಿನ ಭೌಗೋಳಿಕ ಸ್ವರೂಪ, ಆಡಳಿತ ವ್ಯವಸ್ಥೆಗೆ ಪೂರಕವಾಗಿ ಮಣ್ಣು ಸಂರಕ್ಷಣ ನೀತಿ ಸಿದ್ಧಪಡಿಸಿ ಆಯಾ ಸರಕಾರಗಳಿಗೆ ನೀಡಲಾಗಿದೆ. ಎಲ್ಲ 74 ದೇಶಗಳು ಈ ಸಂಬಂಧ ಒಡಂಬಡಿಕೆ ಮಾಡಿಕೊಂಡಿದ್ದು, ಮಣ್ಣಿನ ಫ‌ಲವತ್ತತೆ ಕಾಪಾಡುವಲ್ಲಿ ತಮ್ಮ ಬದ್ಧತೆ ಪ್ರದರ್ಶಿಸಿವೆ ಎಂದರು.

ನಮ್ಮ ದೇಶದಲ್ಲೂ 9 ರಾಜ್ಯಗಳಲ್ಲಿ ಸಂಚರಿಸಿದ್ದು, ಗುಜರಾತ್‌, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ರಾಜ್ಯಗಳು ಮಣ್ಣು ಉಳಿಸಲು ಇಶಾ ಔಟ್‌ರೀಚ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಅರಮನೆ ಮೈದಾನದಲ್ಲಿ ರವಿವಾರ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕದ ಜತೆಗೂ ಒಡಂಬಡಿಕೆಗೆ ಸಹಿ ಹಾಕಲಾಗುವುದು. ಮಣ್ಣು ನಮ್ಮ ಸೊತ್ತಲ್ಲ. ಪರಿಸರದ ಸಂರಕ್ಷಣೆಗೆ ಮಣ್ಣು ಬಹಳ ಅಗತ್ಯವಾಗಿದ್ದು, ಅದನ್ನು ಜೀವಂತವಾಗಿಡುವ ಜತೆಗೆ ಮುಂದಿನ ತಲೆಮಾರಿಗೆ ಮಣ್ಣಿನ ಫ‌ಲವತ್ತತೆಯನ್ನು ಕಾಪಾಡಬೇಕಾಗಿದೆ. ಕೃಷಿ ಮಣ್ಣಿನಲ್ಲಿ ಈಗಾಗಲೇ ಕುಸಿದು ಹೋಗಿರುವ ಜೈವಿಕ ಅಂಶವನ್ನು ಶೇ.3.5 ಪ್ರಮಾಣಕ್ಕೆ ಏರಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಣ್ಣಿನ ಜೈವಿಕಾಂಶ ಶೇ. 0.6ರಷ್ಟು ಇದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ 60 ವರ್ಷಕ್ಕೆ ಇಲ್ಲಿನ ಮಣ್ಣು ನಿರ್ಜೀವವೆನಿಸುವ ಅಪಾಯವಿದೆ.

ಈ ಹಿನ್ನೆಲೆಯಲ್ಲಿ ದೇಶದಲ್ಲಿ ಮಣ್ಣಿನ ಜೈವಿಕಾಂಶ ಹೆಚ್ಚಿಸುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಸ್ಪರ ಕೈಜೋಡಿಸುವ ಮೂಲಕ ಪ್ರತ್ಯೇಕ ಮಣ್ಣು ಸಂರಕ್ಷಣ ನೀತಿ ರೂಪಿಸಬೇಕು ಎಂದು ತಿಳಿಸಿದರು.

Advertisement

ಹಿಂಸೆ ಸಲ್ಲದು
ಅಗ್ನಿಪಥ ಯೋಜನೆಗೆ ಸಂಬಂಧಿಸಿ ದೇಶಾದ್ಯಂತ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯಿಸಿದ ಸದ್ಗುರು, ಸರಕಾರದ ಯಾವುದೇ ಒಂದು ಯೋಜನೆ ಅಥವಾ ನೀತಿಗೆ ಪರ-ವಿರೋಧ ವ್ಯಕ್ತವಾಗುವುದು ಸಹಜ. ಆದರೆ ಅದನ್ನು ಹಿಂಸಾ ರೂಪಕ್ಕೆ ಕೊಂಡೊಯ್ಯುವುದು ತಪ್ಪು. ನಾವಾಗಿ ನಾವು ನಮ್ಮ ದೇಶಕ್ಕೆ ಬೆಂಕಿ ಹಚ್ಚುವ ಕೆಲಸವನ್ನು ಯಾವತ್ತೂ ಮಾಡಬಾರದು ಎಂದು ವಿಷಾದ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next