Advertisement

Savarkar ಭಾವಚಿತ್ರ ಅಳವಡಿಕೆ ಚರ್ಚೆ ಮುನ್ನೆಲೆಗೆ

11:46 PM Dec 08, 2023 | Team Udayavani |

ಬೆಳಗಾವಿ: ಕಳೆದ ಬಾರಿ ಅಧಿವೇಶನದ ಸಂದರ್ಭದಲ್ಲಿ ಸುದ್ದಿಯಾಗಿದ್ದ ಸಾವರ್ಕರ್‌ ಭಾವಚಿತ್ರ ಅಳವಡಿಕೆ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

Advertisement

“ಬೆಳಗಾವಿಯ ಸುವರ್ಣ ವಿಧಾನಸೌಧ ದಲ್ಲಿರುವ ವಿಧಾನಸಭೆಯ ಸಭಾಂಗಣದಲ್ಲಿ ಕಳೆದ ಬಾರಿ ಅಳವಡಿಸಿದ್ದ ಸಾವರ್ಕರ್‌ ಭಾವಚಿತ್ರ ಹಾಗೇ ಇದೆ. ನನಗೆ ಅನುಮತಿ ಕೊಟ್ಟಿದ್ದರೆ ನಾನೇ ಕಿತ್ತು ಬಿಸಾಕುತ್ತಿದ್ದೆ’ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಬಸವ ತತ್ತ್ವ ಹಾಗೂ ನಾರಾಯಣ ಗುರು ಸಿದ್ಧಾಂತ ಪ್ರತಿಪಾದಕ. ನನ್ನ ಹೇಳಿಕೆಗೆ ನಾನು ಬದ್ಧ’ ಎಂದು ಪುನರುಚ್ಚರಿಸಿದರು. ಬ್ರಿಟಿಷರಿಂದ ಪಿಂಚಣಿ ಪಡೆದ ಸಾವರ್ಕರ್‌ಗೆ ವೀರ ಎಂದು ಬಿರುದು ಕೊಟ್ಟವರು ಯಾರು? ಈ ವಿಷಯ ತಿಳಿಯಲು ಅಂಡಮಾನ್‌ ಜೈಲಿಗೆ ಹೋಗಿ ಬನ್ನಿ ಎಂದು ಸಿ.ಟಿ.ರವಿ ಹಾಕಿರುವ ಸವಾಲನ್ನು ಸ್ವೀಕರಿಸುತ್ತೇನೆ. ಅವರೂ ಬರಲಿ. ಬರಗಾಲ ಮುಗಿಯುತ್ತಿದ್ದಂತೆ ನಾನೂ ಅಲ್ಲಿಗೆ ತೆರಳಲು ಸಿದ್ಧನಿದ್ದೇನೆ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಛಲವಾದಿ ನಾರಾಯಸ್ವಾಮಿ, ಸಾವರ್ಕರ್‌ ಎಂಥಾ ದೇಶಭಕ್ತ ಎಂಬುದು ಸಚಿವ ಪ್ರಿಯಾಂಕ್‌ ಖರ್ಗೆಗೆ ಏನು ಗೊತ್ತಿದೆ? ಅವರು ಬ್ರಿಟಿಷರ ಜತೆ ಡ್ಯಾನ್ಸ್‌ ಮಾಡಿಕೊಂಡು ಇದ್ದವರಲ್ಲ. ಜನರ ದಾರಿ ತಪ್ಪಿಸಲು ಸಾವರ್ಕರ್‌ ಈ ವಿಚಾರವನ್ನು ಕೆದಕಿದ್ದಾರೆ. ಬರ ಪರಿಹಾರ ಕೊಡದೆ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸದೆ ವಿಷಯಾಂತರ ಮಾಡಲು ವಿವಾದ ಸೃಷ್ಟಿಸುತ್ತಿದ್ದಾರೆ. ಧೈರ್ಯ ಇದ್ದರೆ ಭಾವಚಿತ್ರ ತೆಗೆಯಲಿ ಎಂದು ಸರಕಾರಕ್ಕೆ ಸವಾಲು ಹಾಕಿದರು.

ಜೋಡಿಸುವುದು ನನ್ನ ಆದ್ಯತೆ: ಸ್ಪೀಕರ್‌ ಖಾದರ್‌
ಸಾವರ್ಕರ್‌ ಫೋಟೋವನ್ನು ಕಿತ್ತು ಬಿಸಾಡುತ್ತಿದ್ದೆ ಎಂಬ ಪ್ರಿಯಾಂಕ್‌ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸ್ಪೀಕರ್‌ ಯು.ಟಿ.ಖಾದರ್‌, ಕಿತ್ತು ಬಿಸಾಡುವುದಲ್ಲ, ಜೋಡಿಸುವುದು ನನ್ನ ಆದ್ಯತೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಂವಿಧಾನ ನಿರ್ಮಾತೃì ಡಾ| ಅಂಬೇಡ್ಕರ್‌ ಅವರು, ಒಂದು ರಥವನ್ನು ಸಾಧ್ಯವಾದರೆ ಮುಂದಕ್ಕೆ ಎಳೆಯೋಣ, ಇಲ್ಲವಾದರೆ ಇದ್ದಲ್ಲೇ ಬಿಡೋಣ. ಆದರೆ ಹಿಂದಕ್ಕೆ ಒಯ್ಯುವುದು ಬೇಡ ಎಂದಿದ್ದಾರೆ. ಇಲ್ಲಿಯೂ ಅಷ್ಟೆ, ಹಿಂದೆ ಆಗಿದ್ದರ ಬಗ್ಗೆ ಚರ್ಚೆ ಬೇಡ. ಸಾವರ್ಕರ್‌ ಫೋಟೋ ತೆಗೆಯುವ ಪ್ರಸ್ತಾವ ನಮ್ಮ ಮುಂದಿಲ್ಲ. ಅಂಥ ಮನವಿಯನ್ನು ಯಾರೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಸಕಾರಾತ್ಮಕ ಚಿಂತನೆ ಮೂಲಕ ಸೌಹಾರ್ದ ವಾತಾವರಣ ನಿರ್ಮಿಸೋಣ. ನನ್ನ ಕ್ಷೇತ್ರದ ಜನರ ಸಂಸ್ಕೃತಿ ನನ್ನ ಸಂಸ್ಕೃತಿ. ಯಾರನ್ನೂ ದ್ವೇಷಿಸುವುದು ಬೇಡ. ಸಾವರ್ಕರ್‌ ಫ್ಲೆ„ಓವರ್‌ ಕೆಳಗಡೆ ಎಲ್ಲರೂ ಓಡಾಡುತ್ತಾರೆ ಎಂದು ತಿರುಗೇಟು ನೀಡಿದರು.

Advertisement

ಮಂತ್ರಿಗಳು ಹಾಗೂ ಶಾಸಕರು ಸರಿಯಾದ ಸಮಯಕ್ಕೆ ಅಧಿವೇಶನಕ್ಕೆ ಬರಲಿ, ಚರ್ಚೆಯಲ್ಲಿ ಭಾಗವಹಿಸಲಿ, ಪ್ರಶ್ನೆಗೆ ಉತ್ತರಿಸಿ ಒಳ್ಳೆಯ ಯೋಜನೆಗಳನ್ನು ರೂಪಿಸಲಿ. ಆ ಕೆಲಸವನ್ನು ಅವರು ಬಹಳ ಚೆನ್ನಾಗಿ ನಿಭಾಯಿಸಲಿ. ಯಾರ್ಯಾರು ಯಾವ ಕೆಲಸ ಮಾಡಬೇಕೋ ಅದನ್ನು ಮಾತ್ರ ಮಾಡಲಿ ಎಂದು ಹೇಳಿದರು.

 

 

Advertisement

Udayavani is now on Telegram. Click here to join our channel and stay updated with the latest news.

Next