Advertisement

Savarkar ಗೋ ಹ*ತ್ಯೆಯ ಪರವಾಗಿದ್ದರು,ಜಿನ್ನಾ ಹಂದಿ ಮಾಂಸ ಸೇವಿಸಿದ್ದರು: ದಿನೇಶ್ ಗುಂಡೂರಾವ್

05:21 PM Oct 03, 2024 | Team Udayavani |

ಬೆಂಗಳೂರು: ಸಾವರ್ಕರ್ ಮತ್ತು ಮುಹಮ್ಮದ್ ಅಲಿ ಜಿನ್ನಾ ಅವರ ಕುರಿತು ಸಚಿವ ದಿನೇಶ್ ಗುಂಡೂರಾವ್(Dinesh Gundu Rao) ಅವರು ಗಾಂಧಿ ಜಯಂತಿಯಂದು ನೀಡಿದ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ಬಿಜೆಪಿ ತೀವ್ರ ಆಕ್ರೋಶ ಹೊರ ಹಾಕಿದ್ದು ಕಾಂಗ್ರೆಸ್ ಸಮರ್ಥನೆ ಮಾಡಿಕೊಂಡಿದೆ.

Advertisement

ಅಕ್ಟೋಬರ್ 2 ರಂದು “ಗಾಂಧಿ ಅಸಾಸಿನ್: ದಿ ಮೇಕಿಂಗ್ ಆಫ್ ನಾಥುರಾಮ್ ಗೋಡ್ಸೆ & ಹಿಸ್ ಐಡಿಯಾ ಆಫ್ ಇಂಡಿಯಾ” ದ ಕನ್ನಡ ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ “ಸಾವರ್ಕರ್ ಗೋಹತ್ಯೆಯ ವಿರೋಧಿಯಾಗಿರಲಿಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರೂ ಮಾಂಸಾಹಾರಿಯಾಗಿದ್ದರು. ಅವರು ಆಧುನಿಕತಾವಾದಿಯಾಗಿದ್ದರು. ಇದು ಮೂಲಭೂತ ಚಿಂತನೆಯಾಗಿತ್ತು. ಗೋ ಮಾಂಸವನ್ನು ತಿನ್ನುತ್ತಿದ್ದರು ಮತ್ತು ಬಹಿರಂಗವಾಗಿ ಪ್ರಚಾರ ಮಾಡುತ್ತಿದ್ದರು. ಆದರೆ ಮಾಹಾತ್ಮ ಗಾಂಧೀಜಿಯವರು ಸಸ್ಯಾಹಾರಿಯಾಗಿದ್ದರು ಮತ್ತು ಅವರಿಗೆ ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆ ಇತ್ತು. ಆದರೆ ಅವರ ಕಾರ್ಯಗಳು ವಿಭಿನ್ನವಾಗಿತ್ತು, ಅವರು ಪ್ರಜಾಪ್ರಭುತ್ವದ ವ್ಯಕ್ತಿ” ಎಂದು ಹೇಳಿಕೆ ನೀಡಿದ್ದರು.

ಮಾತ್ರವಲ್ಲದೆ, ”ಜಿನ್ನಾ ಒಬ್ಬ ಕಠಿನ ಇಸ್ಲಾಮಿಸ್ಟ್ ನಂಬಿಕೆಯುಳ್ಳವರಾಗಿದ್ದರು. ಅವರು ವೈನ್ ಸೇವಿಸುತ್ತಿದ್ದರು ಮತ್ತು ಅವರು ಬಹುಶಃ ಹಂದಿಮಾಂಸವನ್ನು ಸೇವಿಸಿದ್ದಾರೆ ಎಂದು ಜನರು ಹೇಳುತ್ತಾರೆ. ಆದರೆ ಅವರು ಮುಸ್ಲಿಂ ಐಕಾನ್ ಆದರು. ಅವರು ಮೂಲಭೂತವಾದಿಯಾಗಿರಲಿಲ್ಲ ಆದರೆ ಸಾವರ್ಕರ್ ಮೂಲಭೂತವಾದಿ. ಜಿನ್ನಾ ಅವರು ರಾಷ್ಟ್ರಪತಿ, ಪ್ರಧಾನ ಮಂತ್ರಿಯಾಗಲು ಬಯಸಿದ್ದರಿಂದ ಅವರ ತತ್ವಶಾಸ್ತ್ರದಲ್ಲಿ ರಾಜಿ ಮಾಡಿಕೊಂಡರು” ಎಂದು ಹೇಳಿದರು.

”ಜಿನ್ನಾ ಅವರದು ಸೆಕ್ಯುಲರ್ ಫಿಲಾಸಫಿ. ಈ ರೀತಿಯ ತತ್ವಶಾಸ್ತ್ರ/ಮೂಲಭೂತವಾದವನ್ನು ಬೆಳೆಸುತ್ತಿರುವ ಆರ್ ಎಸ್ ಎಸ್ ಮತ್ತು ಹಿಂದೂ ಮಹಾಸಭಾದ ವಿರುದ್ಧ ನೀವು ಹೋರಾಡಬೇಕಾದರೆ, ನಾವು ಪ್ರಮುಖ ಅಂಶಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಇದಕ್ಕೆ ಉತ್ತರಿಸಬೇಕಾಗಿದೆ. ಒಂದೆಡೆ ಸಾರ್ವಜನಿಕರಲ್ಲಿ ಅರಿವು ಇದೆ ಆದರೆ ನಾವು ಹೇಗೆ ವರ್ತಿಸುತ್ತೇವೆ ಎಂಬುದು ಬಹಳ ಮುಖ್ಯವಾಗುತ್ತದೆ. ಸಾಂಪ್ರದಾಯಿಕವಾಗಿರುವ ಅನೇಕ ಜನರಿದ್ದಾರೆ ಆದರೆ ಮೂಲಭೂತವಾದವು ಅವರ ತತ್ವ ಎಂದು ಅರ್ಥವಲ್ಲ” ಎಂದರು.

ಬಿಜೆಪಿ ಆಕ್ರೋಶ
ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ”ಸನ್ಮಾನ್ಯ ದಿನೇಶ್ ಗುಂಡೂರಾವ್ ಅವರೆ, ಬ್ರಾಹ್ಮಣ ಸಮಾಜದ ವೀರ ಸಾವರ್ಕರ್‌ ಅವರು ಗೋಮಾಂಸ ಸೇವಿಸುತ್ತಿದ್ದರು ಎಂದು ನಿಮಗೆ ಬ್ರಾಹ್ಮಣ ಸಮಾಜದ ನಿಮ್ಮ ತಂದೆ ಗುಂಡೂರಾವ್‌ ಹೇಳಿದ್ದರೊ ಅಥವಾ ಮುಸ್ಲಿಂ ಸಮಾಜದ ನಿಮ್ಮ ಪತ್ನಿ ತಬಸ್ಸುಮ್‌ ಅವರು ಹೇಳಿದ್ದರೊ..??” ಎಂದು ಎಕ್ಸ್ ಪೋಸ್ಟ್ ಮೂಲಕ ಪ್ರಶ್ನಿಸಿತ್ತು.

Advertisement

ಬಿಜೆಪಿಗೆ ತಿರುಗೇಟು ನೀಡಿರುವ ದಿನೇಶ್ ಗುಂಡೂರಾವ್ ವೀರ ಸಾವರ್ಕರ್ ಚಿತ್ರದ ದೃಶ್ಯವೊಂದರ ತುಣುಕನ್ನು ಪೋಸ್ಟ್ ಮಾಡಿದ್ದು, ‘ಸಾವರ್ಕರ್ ಒಬ್ಬ ನಾಸ್ತಿಕ, ಮಾಂಸಾಹಾರಿ “Sorry”…ಇದು ನಾನು ಹೇಳಿದ್ದಲ್ಲ. ನನ್ನ ತಂದೆಯಾಗಲಿ, ನನ್ನ ಪತ್ನಿಯಾಗಲಿ ಹೇಳಿದ್ದಲ್ಲ. ಇದನ್ನು ಹೇಳಿದ್ದು ಸ್ವತಃ ಸಾವರ್ಕರ್ ಅವರೇ! Now, live with it..” ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಸಮರ್ಥನೆ

ಕಾಂಗ್ರೆಸ್ ವಕ್ತಾರ ನಾಗರಾಜ್ ಯಾದವ್ ಪ್ರತಿಕ್ರಿಯಿಸಿ ”ಕಾಂಗ್ರೆಸ್ ಮತ್ತು ದಿನೇಶ್ ಗುಂಡೂರಾವ್ ಎಂದಿಗೂ ಯಾರ ವಿರುದ್ಧವೂ ವೈಯಕ್ತಿಕ ಟೀಕೆಗಳನ್ನು ಮಾಡುವುದಿಲ್ಲ. ಅವರು ದೇಶದ ಜಾತ್ಯತೀತ ತತ್ತ್ವ ನಂಬುತ್ತಾರೆ. ರಾಜಕೀಯವಾಗಿ ಉಳಿಯಲು ಬದುಕಲು ಬಿಜೆಪಿ ಹೇಳಿಕೆ ನೀಡುತ್ತಿದೆ. ಬಿಜೆಪಿಗೆ ಸಾವರ್ಕರ್ ಅವರ ಅಜೆಂಡಾ ಮತ್ತು ನಮಗೆ ಮಹಾತ್ಮ ಗಾಂಧಿ ಅವರ ಅಜೆಂಡಾ. ಬಿಜೆಪಿಯವರು ದಿನೇಶ್ ಗುಂಡೂರಾವ್ ಅವರ ತಪ್ಪು ಹುಡುಕಲು ಬಯಸುತ್ತಾರೆ. ಈ ದೇಶ ಎಲ್ಲರಿಗೂ ಸೇರಿದ್ದು, ದೇಶ ಜಾತಿ ಮತ್ತು ಧರ್ಮವನ್ನು ಮೀರಿದ ದೇಶ, ನಮ್ಮ ವೈಯಕ್ತಿಕ ಅಭ್ಯಾಸಗಳನ್ನು ಲೆಕ್ಕಿಸದೆ ನಾವು ಭಾರತೀಯರು ಎಂದು ಅವರು ಹೇಳಲು ಪ್ರಯತ್ನಿಸುತ್ತಿದ್ದರು” ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next