ಸವಣೂರು: ಶಾಲೆಯ ಮುಂಭಾಗದ ಅಂಗಳದಲ್ಲಿ ಮೇಜು, ಕುರ್ಚಿ, ಬೆಂಚು, ಡೆಸ್ಕ್, ಪಾತ್ರೆ, ಪರಿಕರಗಳಿಂದ ಜೋಡಿಸಿದ ವಿಶೇಷ ಶೈಲಿಯ ಪಿರಮಿಡ್. ಇದರ ಏರು ತಗ್ಗುಗಳಲ್ಲಿ ಉರಿಯುವ ಸಾವಿರಾರು ಹಣತೆಗಳು ಅಂಗಳದ ತುಂಬ. ಮರದ ಕೋಲು, ಹಾಲೆ ತಟ್ಟೆಗಳಿಂದ ರಚಿಸಿದ ದೀಪಕಂಬಗಳು. ಮಕ್ಕಳ ಸಹಿತ ಅಲ್ಲಿ ಸೇರಿದ್ದ ಎಲ್ಲರ ಕೈಯಲ್ಲೂ ದೀಪಗಳೇ. ಶಾಲೆಯ ಅಂಗಳ ತುಂಬೆಲ್ಲಾ ಹಣತೆ ದೀಪಗಳದ್ದೆ ಬೆಳಕು.
ವಿಶಿಷ್ಟವಾಗಿ ದೀಪಾವಳಿ ಆಚರಿಸಿರುವ ಸಂಭ್ರಮ ಕಂಡುಬಂದದ್ದು ಸವಣೂರು ಗ್ರಾ.ಪಂ. ವ್ಯಾಪ್ತಿಯ ಪುಣ್ಚಪ್ಪಾಡಿ ಸರಕಾರಿ ಶಾಲೆಯಲ್ಲಿ. ಮುಸ್ಸಂಜೆ ವೇಳೆಗೆ ತಮ್ಮ ಪಾಲಕರೊಂದಿಗೆ ಎಣ್ಣೆ, ಹಣತೆ, ಬತ್ತಿ ಜತೆ ಬಂದ ಮಕ್ಕಳು ಮನಸೋ ಇಚ್ಛೆ ಹಣತೆಗಳನ್ನು ಜೋಡಿಸಿ ದೀಪ ಹಚ್ಚಿದರು. ಶಿಕ್ಷಕರೂ ಮಕ್ಕಳೊಂದಿಗೆ ರಂಗವಲ್ಲಿ ಬಿಡಿಸಿ ದೀಪ ಬೆಳಗಿಸಿದರು. ಪಾಲಕರೂ ಕೈ ಜೋಡಿಸಿದರು. ಹೋಳಿಗೆ, ಅವಲಕ್ಕಿ, ಸಿಹಿತಿಂಡಿಗಳಿದ್ದವು.
ದೀಪಾವಳಿ ಸಂಭ್ರಮವನ್ನು ಮಕ್ಕಳೊಂದಿಗೆ ಹಂಚಿಕೊಳ್ಳುವ ದೀಪಾವಳಿ ಯ ಬಗ್ಗೆ ತಿಳಿಸಿಕೊಡುವ ಸಂಭ್ರಮವನ್ನು ಶಾಲೆಯ ಮುಖ್ಯ ದಾನಿಗಳಲ್ಲಿ ಓರ್ವರಾದ ಸಾಯಿಸೀತ ಅಜಿಲೋಡಿ ಕೃಷ್ಣಭಟ್ ಅವರು ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಕಾಂಚನಾ ಕೃಷ್ಣಮೂರ್ತಿ ಭಟ್ ದೀಪಾವಳಿಯ ಬಗ್ಗೆ ಪ್ರಧಾನ ಭಾಷಣ ಮಾಡಿದರು. ಚಿತ್ರ ಕಲಾವಿದರಾದ ನಾಗರಾಜ ನಿಡ್ವಣ್ಣಾಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ರಮೇಶ್ ಉಳಯ, ರಾಜ್ಯ ಯುವಜನ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಗ್ರಾ.ಪಂ. ಸದಸ್ಯರಾದ ಗಿರಿಶಂಕರ್ ಸುಲಾಯ, ಎಸ್‌ಡಿಎಮ್‌ಸಿ ಅಧ್ಯಕ್ಷ ಉಮಾಶಂಕರ ಗೌಡ ಮತ್ತಿತರರು ಮಾತನಾಡಿದರು.
ದ.ಕ.ಜಿಲ್ಲೆ ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕಿ ಗುರುಪ್ರಿಯ ನಾಯಕ್ ದೀಪಾವಳಿ ಹಾಡನ್ನು ಹಾಡಿದರು. ಹಿರಿಯರಾದ ಪಿ.ಡಿ. ಗಂಗಾಧರ್ ರೈ ಅವರು ಬಲಿ ಚಕ್ರವರ್ತಿಯನ್ನು ಕೂಗಿ ಕರೆದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿತ್ ಕುಮಾರ್,ಶಿಕ್ಷಕಿ ಸುಜಯ ಸುಲಾಯ, ಎಸ್‌ಡಿಎಮ್‌ಸಿ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಊರವರು ಉಪಸ್ಥಿತರಿದ್ದರು. ಕೃಷ್ಣಮೂರ್ತಿ ಭಟ್ ಸಿಂಧೂರ, ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ, ನಾರಾಯಣ ಮಡಿವಾಳ, ಬಾಬು ಜರಿನಾರು ವಿವಿಧ ದೀಪಾವಳಿಯ ತಿನಿಸುಗಳನ್ನು ಪ್ರಾಯೋಜಿಸಿದರು.
ಶಾಲಾ ಮುಖ್ಯಗುರು ರಶ್ಮಿತಾ ನರಿಮೊಗರು ಕಾರ್ಯಕ್ರಮ ಸಂಯೋಜಿಸಿ ದರು. ಅತಿಥಿ ಶಿಕ್ಷಕರಾದ ಯತೀಶ್ ಕುಮಾರ್, ಚಂದ್ರಿಕಾ ಎಸ್., ಜ್ಞಾನ ದೀಪ ಶಿಕ್ಷಕಿ ಯಮುನಾ ಬಿ. ಮತ್ತು ಪೋಷಕ ಜನಾರ್ದನ ಗೌಡ ಮತ್ತು ರಂಜಿತಾ ನರಿಮೊಗರು ಸಹಕರಿಸಿದರು. ಸವಣೂರು ಗ್ರಾ.ಪಂ. ವ್ಯಾಪ್ತಿಯ ಪುಣ್ಚಪ್ಪಾಡಿ ಸರಕಾರಿ ಶಾಲೆಯವ ಮುಂಭಾಗದ ಅಂಗಳದಲ್ಲಿ ವಿಶಿಷ್ಟವಾಗಿ ದೀಪಾವಳಿ ಆಚರಿಸಲಾಯಿತು.
ವಿಶೇಷ ವರದಿ