Advertisement

Savanur: ಈ ಬಾರಿಯಾದರೂ ಸಿಕ್ಕೀತೇ ರೈತರಿಗೆ ನೀರು

12:47 PM Jan 02, 2025 | Team Udayavani |

ಸವಣೂರು: ಕುಮಾರಧಾರಾ ನದಿಗೆ ಶಾಂತಿಮೊಗರಿನಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರು ಹಲಗೆ ಜೋಡಿಸುವ ಕಾರ್ಯ ಈವರೆಗೆ ಸಮರ್ಪಕವಾಗಿ ನಡೆಯದೆ ರೈತರ ಪ್ರಯೋಜನಕ್ಕೆ ದೊರೆತಿಲ್ಲ. ಈ ವರ್ಷ ವಾದರೂ ಉಪಯೋಗಕ್ಕೆ ಸಿಗುತ್ತದೆಯಾ ಎನ್ನುವ ಜಿಜ್ಞಾಸೆ ರೈತರಲ್ಲಿ ಮೂಡಿದೆ.

Advertisement

ಮಾಜಿ ಸಚಿವ ಎಸ್‌.ಅಂಗಾರ ಅವರ ಶಿಪಾರಸಿನಂತೆ 7.5 ಕೋಟಿ ರೂ.ನಲ್ಲಿ ಪಶ್ಚಿಮವಾಹಿನಿ ಯೋಜನೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮುಖಾಂತರ ಕುಡಿಯುವ ನೀರು ಹಾಗೂ ಕೃಷಿ ಬಳಕೆಗೆ ಎಂದು ಜಿಲ್ಲೆಯ ಮೊದಲ ಕಿಂಡಿ ಅಣೆಕಟ್ಟು ಇದಾಗಿತ್ತು. ಕಳೆದ ವರ್ಷ ಹಲಗೆ ಅಳವಡಿಸಿದ್ದರೂ ಕಿಡಿಗೇಡಿಗಳು ಕಿಂಡಿ ಅಣೆಕಟ್ಟಿಗೆ ಹಾಕಿದ್ದ ಹಲಗೆಯನ್ನು ಎತ್ತರಿಸಿ ನೀರು ಹರಿದು ಹೋಗುವಂತೆ ಮಾಡಿದ್ದರು. ರೈತರಿಂದ ಪ್ರತಿಭಟನೆಯಾದಾಗ ಹಲಗೆ ಅಳವಡಿಸಲು ಮುಂದಾದದರೂ ಅಷ್ಟೊತ್ತಿ ಗಾಲೇ ನೀರು ಬರಿದಾಗಿತ್ತು.

ನದಿ ತಳಮಟ್ಟದಿಂದ ನಾಲ್ಕು ಮೀಟರ್‌ ಎತ್ತರಕ್ಕೆ ನಿರ್ಮಾಣವಾಗಿರುವ ಈ ಅಣೆಕಟ್ಟು 221.4 ಮೀಟರ್‌ ಉದ್ದ ಹಾಗೂ 3.75 ಮೀಟರ್‌ ಅಗಲ ವಿದೆ. 56 ಕಿಂಡಿಗಳಿವೆ. ಹಲಗೆ ಜೋಡಿಸಿದರೆ ಸುಮಾರು 18.56 ಎಮ್‌ಸಿಎಫ್ಟಿ ನೀರು ಶೇಖರಣೆಯಾಗುತ್ತದೆ ಎಂಬುದು ಲೆಕ್ಕಾಚಾರ. ಕೂಡಲೇ ಹಲಗೆ ಜೋಡಿಸುವ ಕೆಲಸವಾಗಬೇಕು ಎಂದು ರೈತಪರ ಹೋರಾಟಗಾರ ಜನಾರ್ದನ ಗೌಡ ಕಯ್ಯಪೆ ಆಗ್ರಹಿಸಿದ್ದಾರೆ.

ಹಲಗೆ ಜೋಡಿಸಿ ಯೋಜನೆ ಅನುಷ್ಠಾನ ಆದರೆ ನದಿಯ ಇಕ್ಕೆಲಗಳಲ್ಲಿ ಎರಡರಿಂದ ಮೂರು ಕಿಲೋ ಮೀಟರ್‌ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಬಹುದು ಎಂದೂ ನಿರೀಕ್ಷಿಸಲಾಗಿದೆ.

ಕಾಮಗಾರಿ ವಿಳಂಬವಾಗಿದ್ದರಿಂದ ಹಲಗೆ ಅಳವಡಿಕೆಯೂ ವಿಳಂಬ
ಈ ಅಣೆಕಟ್ಟಿನ ನೀರನ್ನು ಕುಡಿಯುವ ನೀರಿಗಾಗಿಯೂ ಬಳಕೆ ಮಾಡುವ ಉದ್ದೇಶವಿರುವುದರಿಂದ ಈಗಾಗಲೇ ಜಲಜೀವನ್‌ ಮಿಷನ್‌ ಯೋಜನೆಯ ಅನುಷ್ಠಾನಕ್ಕೆ ಇಲ್ಲಿ ಜಾಕ್‌ ವೆಲ್‌ ನಿರ್ಮಾಣ ಕಾರ್ಯ ಆರಂಭವಾಗಿದೆ. ಅಲ್ಲಿ ಹಾಸುಪಾದೆ ಸಿಕ್ಕಿರುವುದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಶೀಘ್ರ ಕಾಮಗಾರಿ ಮುಗಿಸಿ ಹಲಗೆ ಜೋಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಇಲ್ಲಿಂದ ನೀರೆತ್ತಿ ಮಾಂತೂರಿನಲ್ಲಿ ನೀರು ಶುದ್ಧೀಕರಣಗೊಂಡು ಶಾಂತಿಮೊಗರಿನ ಆಸು ಪಾಸಿನ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ ಎಂದು ಕಡಬ ಉಪ ವಿಭಾಗದ ಜಿಲ್ಲಾ ಪಂಚಾಯತ್‌ ಎಂಜಿನಿಯರ್‌ ಸಂಗಪ್ಪ ಹುಕ್ಕೇರಿ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next