Advertisement

ಸವದಿಗಿಲ್ಲ ಅನರ್ಹ ಶಾಸಕರ ಬಗ್ಗೆ ಮಾತನಾಡುವ ಹಕ್ಕು

11:00 PM Oct 26, 2019 | Team Udayavani |

ಬೆಳಗಾವಿ: “ಕಳೆದ ಚುನಾವಣೆಯಲ್ಲಿ ಸೋತು ಮನೆ ಸೇರಿದ ಲಕ್ಷ್ಮಣ ಸವದಿಗೆ ಅವನ ಸ್ಥಾನದ ಮಹತ್ವ ಗೊತ್ತಿಲ್ಲ. ಕನಸಿನಲ್ಲೇ ಡಿಸಿಎಂ ಆಗಿದ್ದೇನೆಂದು ತಿಳಿದಿದ್ದಾನೆ. ಅನರ್ಹ ಶಾಸಕರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವನಿಗೆ ಇಲ್ಲ. ಹತ್ತು ತಲೆ ರಾವಣನೇ ಹಾಳಾಗಿದ್ದಾನೆ. ಸವದಿ ಯಾವ ಲೆಕ್ಕ’ ಎಂದು ಗೋಕಾಕ ಅನರ್ಹ ಶಾಸಕ ರಮೇಶ ಜಾರಕಿಹೊಳಿ ನೇರ ವಾಗ್ಧಾಳಿ ನಡೆಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, “ಸವದಿ ಅನರ್ಹ ಶಾಸಕರ ಬಗ್ಗೆ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾನೆ.

Advertisement

ಅವನು ಇನ್ನೂ ಹಾಳಾಗುತ್ತಾನೆ. ಈಗಾಗಲೇ ಉಮೇಶ ಕತ್ತಿ ಅವರು ಅವನಿಗೆ ಸರಿಯಾಗಿ ಹೇಳಿದ್ದಾರೆ’ ಎಂದು ಏಕವಚನದಲ್ಲಿ ತಿರುಗೇಟು ನೀಡಿದರು. ಡಿಸಿಎಂ ಸ್ಥಾನ ಯಾರಿಂದಲೋ ಸಿಕ್ಕಿದೆ ಎಂಬ ಸೊಕ್ಕು ಸವದಿಗಿದೆ. ಅದು ಶಾಶ್ವತವಲ್ಲ. ಮುಂದೆ ಏನಾಗುತ್ತದೆ ಎಂದು ಕಾದು ನೋಡುತ್ತಿರಿ ಎಂದು ಅವರು ರಾಜಕೀಯ ಬದಲಾವಣೆಯ ಸುಳಿವು ನೀಡಿದರು. ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದು ಈಗಾಗಲೇ ಚುನಾವಣಾ ಆಯೋಗ ಹೇಳಿದೆ. ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ನಮ್ಮ ಪರವಾಗಿ ಬರುವ ವಿಶ್ವಾಸವಿದೆ. ಅದು ಸವದಿಗೆ ಏನು ಗೊತ್ತು ಎಂದು ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.

ಸತೀಶ ಷಂಡ: ಸಹೋದರ ಸತೀಶ ಜಾರಕಿಹೊಳಿ ಬಗ್ಗೆ ಪ್ರಸ್ತಾಪಿಸಿದ ಅವರು, “ಸತೀಶನ ದ್ರೋಹದ ಕತೆ ಹೇಳಿದರೆ ನಾಳೆಯೇ ಆತ ಮನೆಗೆ ಓಡಿ ಹೋಗ್ತಾನೆ. ಅವನಿಗೆ ಅಪಮಾನವಾಗಬಾರದು ಎಂದು ಇಲ್ಲಿಯವರೆಗೂ ಸಹನೆಯಿಂದ ಇದ್ದೆ. ಸದ್ಯದಲ್ಲೇ ನಾನು ಹಾಗೂ ಬಾಲಚಂದ್ರ ಒಂದೇ ವೇದಿಕೆಯಲ್ಲಿ ಬಂದಾಗ ನಮ್ಮ ಕುಟುಂಬದ ಹಿನ್ನೆಲೆಯನ್ನು ಗೋಕಾಕ್‌ನಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ಹೇಳುತ್ತೇನೆ. ಸತೀಶ ನನ್ನ ವಿರುದ್ಧ ಸಾವಿರಾರು ಹಾಡು ಸೃಷ್ಟಿಸಲಿ. ಅವನಿಗೆ ಅಷ್ಟೊಂದು ಮಹತ್ವ ನೀಡುವುದಿಲ್ಲ. ಅವನು ಷಂಡ’ ಎಂದು ಗಂಭೀರವಾಗಿ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next