ಕೋಟ: ಸಾೖಬ್ರಕಟ್ಟೆ ಸಂತೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಂಗಳವಾರ ಕಾರ್ಯಾಚರಣೆ ನಡೆಸಿ ಪೋಷಕರೊಂದಿಗೆ ವ್ಯಾಪಾರದಲ್ಲಿ ನಿರತರಾಗಿದ್ದ ಅಪ್ರಾಪ್ತ ಮಕ್ಕಳನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಲಾಯಿತು.
ಆಯಾಯ ಶಾಲೆಯ ಮುಖ್ಯ ಶಿಕ್ಷಕರಿಗೆ ಕರೆ ಮಾಡಿ ಮಕ್ಕಳು ಶಾಲೆಯಲ್ಲಿ ದಾಖಲಿರುವ ಬಗ್ಗೆ ಖಚಿತ ಪಡಿಸಿಕೊಂಡು ಸಂತೆಗಳಿಗೆ ಮಕ್ಕಳನ್ನು ಕರೆದುಕೊಂಡು ಬರದಂತೆ ಹಾಗೂ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ತೊಡಗಿಸಿಕೊಳ್ಳಬೇಕು ಹೊರತು ಅವರನ್ನು ಕೆಲಸಕ್ಕೆ ಕಳಿಸುವುದು, ಕೆಲಸ ಮಾಡಿಸುವುದು ತಪ್ಪು. ಈ ಬಗ್ಗೆ ಪಾಲಕರು ಕಾನೂನು ಅರಿಯಬೇಕು ಎಂದು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿ ಕಾರಿ ಪ್ರಭಾಕರ ಆಚಾರ್ ತಿಳಿಸಿದರು.
ಶಾಲೆ ಇಲ್ಲದ ಕಾರಣ ಬಂದಿದ್ದಾರೆ
ಸರಿಯಾಗಿ ಶಾಲೆ ಆರಂಭವಾಗಿಲ್ಲ. ಮಕ್ಕಳು ಮನೆಯಲ್ಲಿದ್ದರೆ ಮೊಬೈಲ್ ನೋಡುತ್ತ, ಗೇಮ್ಸ್ ಆಡುತ್ತ ಕಾಲ ಕಳೆಯುತ್ತಾರೆ. ಹೀಗೆ ಅವರು ಹಾಳಾಗ ಬಾರದು ಎನ್ನುವ ಕಾರಣಕ್ಕೆ ಸಂತೆಗೆ ಕರೆದು ಕೊಂಡು ಬಂದಿದ್ದೇವೆ ಹೊರತು ಅವರನ್ನು ದುಡಿಸಿಕೊಳ್ಳಲಾಗುತ್ತಿಲ್ಲ ಎಂದು ಮಕ್ಕಳ ಪೋಷಕರು ಈ ಸಂದರ್ಭ ತಿಳಿಸಿದರು.
ಸಂತೆ ಮಾರ್ಕೆಟ್‌ನಲ್ಲಿ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಬಗ್ಗೆ ಮತ್ತು ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ನೆರೆದ ಜನರಿಗೆ ಹಾಗೂ ಸಂತೆಯ ವ್ಯಾಪಾರಸ್ಥರಿಗೆ ಅರಿವು ಮೂಡಿಸಲಾಯಿತು. ಸಮಾಜ ಕಾರ್ಯಕರ್ತೆ ಸುರಕ್ಷಾ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.