Advertisement

ನಾಡ: ಸಂತೆ ಮಾರುಕಟ್ಟೆ ಅಭಿವೃದ್ಧಿಗೆ ಬೇಡಿಕೆ

07:21 PM Oct 11, 2021 | Team Udayavani |

ನಾಡ: ನಿರ್ವಹಣೆಯಿಲ್ಲದೆ ಅವ್ಯವಸ್ಥೆಯ ತಾಣವಾಗಿರುವ ನಾಡ ಗ್ರಾ.ಪಂ. ಅಧೀನದ ವಾರದ ಸಂತೆ ಮಾರುಕಟ್ಟೆ ಅಭಿವೃದ್ಧಿಗೆ ಸಾರ್ವಜನಿಕ ವಲಯದಿಂದ ಬೇಡಿಕೆ ಕೇಳಿ ಬಂದಿದೆ. ಪ್ರತೀ ಬುಧವಾರ ಇಲ್ಲಿ ವಾರದ ಸಂತೆ ನಡೆಯುತ್ತಿದ್ದು, ಸರಿಯಾದ ವ್ಯವಸ್ಥೆಯಿಲ್ಲದೆ ಇಲ್ಲಿಗೆ ವ್ಯಾಪಾರಕ್ಕೆ ಬರುವ ವರ್ತಕರು ಹಾಗೂ ಖರೀದಿಗೆ ಬರುವ ಗ್ರಾಹಕರಿಗೆ ಸಮಸ್ಯೆಯಾಗುತ್ತಿದೆ.

Advertisement

ಬೈಂದೂರು ತಾಲೂಕಿನ ದೊಡ್ಡ ಗ್ರಾ.ಪಂ.ಗಳಲ್ಲಿ ನಾಡ ಸಹ ಒಂದಾಗಿದ್ದು, ಇಲ್ಲಿನ ವಾರದ ಸಂತೆಗೆ ನಾಡ, ಸೇನಾಪುರ, ಬಂಟ್ವಾಡಿ, ಮತ್ತಿತರ ಭಾಗಗಳಿಂದ ಖರೀದಿಗೆ ಜನ ಬರುತ್ತಾರೆ. ದೊಡ್ಡ ಪೇಟೆ ದೂರ ಇರುವುದರಿಂದ ಸಾಕಷ್ಟು ಮಂದಿ ಅಗತ್ಯ ವಸ್ತುಗಳು ಹಾಗೂ ತರಕಾರಿ ಇನ್ನಿತರ ಖರೀದಿಗೆ ವಾರದ ಸಂತೆಯನ್ನೇ ನೆಚ್ಚಿಕೊಂಡಿದ್ದಾರೆ.

ಸ್ವಚ್ಛತೆಯಿಲ್ಲ
ನಾಡ ಗ್ರಾ.ಪಂ. ವ್ಯಾಪ್ತಿಯ ಈ ಸಂತೆ ಮಾರುಕಟ್ಟೆಯ ಆವರಣವು ಒಟ್ಟಾರೆ 1.20 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಇದರಲ್ಲಿ 2 ದೊಡ್ಡ ಕಟ್ಟಡ ಹಾಗೂ ಇನ್ನು ಕೆಲವು ಸಣ್ಣ- ಸಣ್ಣ ಕಟ್ಟಡ ಹಾಗೂ ಕಟ್ಟೆಗಳಿವೆ. ಆವರಣವಿಡೀ ನಿರ್ವಹಣೆಯಿಲ್ಲದೆ ಹುಲ್ಲುಗಳೆಲ್ಲ ಬೆಳೆದು ನಿಂತಿದ್ದು, ವ್ಯಾಪಾರಿಗಳು ಮಾರಾಟ ಮಾಡುವ ಜಾಗವು ಸ್ವಚ್ಛತೆಯಿಂದ ಕೂಡಿರುವುದಿಲ್ಲ.

ಅಭಿವೃದ್ಧಿಗೆ ಬೇಡಿಕೆ
ಈ ಸಂತೆ ಮಾರುಕಟ್ಟೆಯ ಸುತ್ತಲೂ ಆವರಣ ಗೋಡೆಯನ್ನು ನಿರ್ಮಿಸಿ, ಈಗಿರುವ ಎರಡು ಪ್ರವೇಶ ದ್ವಾರಗಳನ್ನು ಮುಚ್ಚಿ, ಗೇಟು ಮಾಡಿ, ಆ ಮೂಲಕ ಒಂದೇ ಕಡೆ ಪ್ರವೇಶಕ್ಕೆ ಅನುಕೂಲ ಮಾಡಿಕೊಡಬೇಕು. ಇದಲ್ಲದೆ ಮಳೆಗಾಲದಲ್ಲಿ ಈ ಆವರಣ ಕೆಸರುಮಯ ಆಗುವುದರಿಂದ ತೊಂದರೆಯಾಗುತ್ತಿದ್ದು, ಅದಕ್ಕೆ ಇಂಟರ್‌ಲಾಕ್‌ ಹಾಕಿದರೆ ಪ್ರಯೋಜನವಾಗಬಹುದು ಎನ್ನುವ ಬೇಡಿಕೆ ಸಾರ್ವಜನಿಕರದ್ದಾಗಿದೆ.

ನಿರ್ವಹಣೆಯೇ ಇಲ್ಲ
ಇಲ್ಲಿನ ವಾರದ ಸಂತೆ ನಡೆಯುವ ಸಂತೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಯೇ ಮಾಡುತ್ತಿಲ್ಲ. ಸರಿಯಾದ ನಿರ್ವಹಣೆಯಿಲ್ಲದೆ, ಈ ಆವರಣವಿಡೀ ಹುಲ್ಲು ಬೆಳೆದು, ಗುಡ್ಡದ ರೀತಿಯಾಗಿದೆ. ಇನ್ನಾದರೂ ಪಂಚಾಯತ್‌ನವರು ಇದನ್ನು ಅಭಿವೃದ್ಧಿಪಡಿಸಿ, ಸರಿಯಾದ ನಿರ್ವಹಣೆ ಮಾಡಲಿ ಎನ್ನುವುದಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಇದನ್ನೂ ಓದಿ:ಪ್ರಿಯಾಂಕಾ ಹಿಂದೂ ಆಗಿದ್ದು ಯಾವಾಗ?…ಆಕೆ ಊಸರವಳ್ಳಿ: ತೆಲಂಗಾಣ ಬಿಜೆಪಿ ಮುಖಂಡ

ಶೌಚಾಲಯಕ್ಕೂ ಬೀಗ
ಈ ಸಂತೆ ಮಾರುಕಟ್ಟೆ ಪ್ರದೇಶದಲ್ಲಿಯೇ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದ್ದು, ಅದಕ್ಕೆ ಬಹಳಷ್ಟು ಸಮಯಗಳಿಂದ ಬೀಗ ಹಾಕಲಾಗಿದೆ. ನಾಡದಲ್ಲಿಯೂ ಹತ್ತಾರು ಮಳಿಗೆಗಳು, ಕಚೇರಿಗಳಿದ್ದು, ಎಲ್ಲ ಕಡೆಗಳಲ್ಲಿ ಶೌಚಾಲಯ ಇಲ್ಲದಿರುವುದರಿಂದ ಈ ಸಾರ್ವಜನಿಕ ಶೌಚಾಲಯವನ್ನು ಶುಚಿಗೊಳಿಸಿ, ತೆರೆದಿಟ್ಟರೆ ಸಾರ್ವಜನಿಕರು, ಕೆಲಸ ಮಾಡುವ ಅನೇಕ ಮಂದಿಗೆ ಅನುಕೂಲವಾಗಬಹುದು.

ಪ್ರಸ್ತಾವನೆ ಸಲ್ಲಿಕೆ
ನಾಡ ಗ್ರಾಮದ ವಾರದ ಸಂತೆ ಮಾರುಕಟ್ಟೆಯ ಆವರಣ ಗೋಡೆ, ಗೇಟು, ಇಂಟರ್‌ಲಾಕ್‌ ಅಳವಡಿಕೆ ಬಗ್ಗೆ ಪಟ್ಟಿ ಮಾಡಿ, ಈಗಗಾಲೇ ಎಪಿಎಂಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಆವರಣದಲ್ಲಿ ಬೆಳೆದಿರುವ ಹುಲ್ಲು, ಗಿಡಗಂಟಿಗಳನ್ನು ಕೂಡಲೇ ಸ್ವಚ್ಛ ಮಾಡಲಾಗುವುದು. ಮಳೆ ಇದ್ದುದರಿಂದ ಇಷ್ಟು ದಿನ ಮಾಡಿರಲಿಲ್ಲ.
– ಹರೀಶ್‌, ನಾಡ ಗ್ರಾ.ಪಂ. ಪಿಡಿಒ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next