Advertisement

Saurabh Netravalkar ಪಾಕ್ ತಂಡಕ್ಕೆ ಸೋಲಿನ ರುಚಿತೋರಿಸಿದ ಭಾರತೀಯ ಸಾಫ್ಟ್’ವೇರ್ ಇಂಜಿನಿಯರ್

01:04 PM Jun 07, 2024 | Team Udayavani |

ಡಲ್ಲಾಸ್: ಐಸಿಸಿ ಟಿ20 ವಿಶ್ವಕಪ್ 2024 ಮೊದಲ ಅಚ್ಚರಿಯ ಫಲಿತಾಂಶ ಕಂಡಿದೆ. ಆತಿಥ್ಯ ವಹಿಸಿದ ಕಾರಣದಿಂದ ಕೂಟದಲ್ಲಿ ಆಡುವ ಅವಕಾಶ ಪಡೆದ ಯುಎಸ್ಎ ತಂಡವು ಪಾಕಿಸ್ತಾನ ತಂಡವನ್ನು ಮಣಿಸಿ ಕ್ರಿಕೆಟ್ ವಿಶ್ವಕ್ಕೆ ಅಚ್ಚರಿ ಮೂಡಿಸಿದೆ. ಗುರುವಾರ ಡಲ್ಲಾಸ್ ನಲ್ಲಿ ನಡೆದ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಯುಎಸ್ಎ ಗೆಲುವಿನ ನಗೆ ಬೀರಿದೆ.

Advertisement

ಈ ಪಂದ್ಯದಲ್ಲಿ ಮಿಂಚಿದ್ದು ಭಾರತೀಯ ಮೂಲದ ಸೌರಭ್ ನೇತ್ರವಲ್ಕರ್. ಎಡಗೈ ವೇಗದ ಬೌಲರ್ ಆಗಿರುವ ಸೌರಭ್ ಪಾಕಿಸ್ತಾನಿ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಸೂಪರ್ ಓವರ್ ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ಸೌರಭ್ ಯುಎಸ್ಎ ತಂಡಕ್ಕೆ ಅದ್ಭುತ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಈ ಗೆಲುವಿನ ಬಳಿಕ ಸೌರಭ್ ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದಾರೆ. ಸೌರಭ್ ನೇತ್ರವಲ್ಕರ್ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ ನ ಸ್ಕ್ರೀನ್‌ಗ್ರಾಬ್‌ ಗಳು ಮತ್ತು ಅವರು ಉಕುಲೇಲೆ ನುಡಿಸುವ ಮತ್ತು ಹಾಡುವ ಇನ್ಸ್ಟಾಗ್ರಾಮ್ ವೀಡಿಯೊಗಳು ಈ ಪಂದ್ಯದ ಬಳಿಕ ವೈರಲ್ ಆಗಿವೆ. ಮುಂಬೈನ ಬಹು-ಪ್ರತಿಭಾವಂತ ಸೌರಭ್ ಅಮೆರಿಕನ್ ಮತ್ತು ಭಾರತೀಯ ಕನಸನ್ನು ಏಕಕಾಲದಲ್ಲಿ ಬದುಕುತ್ತಿದ್ದಾರೆ.

ಕೆಲವೇ ತಿಂಗಳುಗಳ ಹಿಂದೆ, ಒರಾಕಲ್‌ ನಲ್ಲಿರುವ ಅವರ ಸಹೋದ್ಯೋಗಿಯೊಬ್ಬರಿಗೆ ಯುಎಸ್ಎ ರಾಷ್ಟ್ರೀಯ ತಂಡದ ಆಟಗಾರನೊಬ್ಬ ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಗೊತ್ತಾಗಿತ್ತು. ಆದರೆ ಗುರುವಾರ ಸೌರಭ್ ಇಡೀ ಕ್ರಿಕೆಟ್ ಪ್ರಪಂಚದ ಗಮನ ಸೆಳೆದರು, ಅಲ್ಲದೆ ಸ್ಥಳೀಯ ಅಮೆರಿಕನ್ನರು ಕ್ರಿಕೆಟ್ ಬಗ್ಗೆ ಗೂಗಲ್ ಮಾಡುವಂತೆ ಪ್ರೇರೇಪಿಸಿದರು.

Advertisement

ಸೌರಭ್ ನೇತ್ರವಲ್ಕರ್ ಭಾರತ U19 ವಿಶ್ವಕಪ್ ತಂಡದ 2010 ರ ಬ್ಯಾಚ್‌ ನಿಂದ ಟಿ20 ವಿಶ್ವಕಪ್ 2024 ಆವೃತ್ತಿಯಲ್ಲಿ ಭಾಗವಹಿಸುತ್ತಿರುವ ಏಕೈಕ ಆಟಗಾರ. ಸೌರಭ್ ಮುಂಬೈನಲ್ಲಿ ಹುಟ್ಟಿ ಬೆಳೆದವರು. 2013 ರಲ್ಲಿ ಮುಂಬೈ ತಂಡದ ಪರ ರಣಜಿ ಟ್ರೋಫಿಯನ್ನು ಆಡಿದ್ದರು. ಅವರು ಪುಣೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸವನ್ನು ತ್ಯಜಿಸಿದರು. ಆದರೆ ಪ್ರತಿಷ್ಠಿತ ಕಾರ್ನೆಲ್ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದ ನಂತರ 2015 ರಲ್ಲಿ ಸೌರಭ್ ನ್ಯೂಯಾರ್ಕ್‌ಗೆ ತೆರಳಿದರು, ಅಲ್ಲಿ ಅವರು ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು. ಸೌರಭ್ ಆಟಗಾರರ ವಿಶ್ಲೇಷಣೆ ಅಪ್ಲಿಕೇಶನ್ ಸಹ ಅಭಿವೃದ್ಧಿಪಡಿಸಿದ್ದಾರೆ.

2019ರಲ್ಲಿ ಯುಎಸ್ಎ ರಾಷ್ಟ್ರೀಯ ಕ್ರಿಕೆಟ್ ತಂಡ ಸೇರಿದ ಸೌರಭ್ ಇದೀಗ ತಂಡದ ಪ್ರಮುಖ ಆಟಗಾರನಾಗಿದ್ದಾರೆ. 48 ಏಕದಿನ ಪಂದ್ಯವಾಡಿರುವ ಸೌರಭ್ 73 ವಿಕೆಟ್ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next