Advertisement

ಸೌಡ ಸೇತುವೆ: ಟೆಂಡರ್‌ಗೆ ಇನ್ನೂ ಸಿಗದ ಒಪ್ಪಿಗೆ

06:00 AM Jul 24, 2018 | |

ಶಂಕರನಾರಾಯಣ: ಜನ್ನಾಡಿ, ಬಿದ್ಕಲ್‌ಕಟ್ಟೆ, ಮೊಳಹಳ್ಳಿಯಿಂದ ಸೌಡ, ಶಂಕರನಾರಾಯಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಸೌಡ ಸೇತುವೆಗೆ ಸಿಎಂರಿಂದ ಶಿಲಾನ್ಯಾಸಗೊಂಡು 7 ತಿಂಗಳು ಕಳೆದರೂ, ಅನುದಾನ ಮಂಜೂರಾಗಿ ಟೆಂಡರ್‌ ಪ್ರಕ್ರಿಯೆ ಮುಗಿದು ಸರಕಾರಕ್ಕೆ ವರದಿ ಕಳುಹಿಸಿದ್ದರೂ, ಈವರೆಗೆ ರಾಜ್ಯ ಸರಕಾರದ ಒಪ್ಪಿಗೆ ಸಿಗದ ಕಾರಣ ಇನ್ನೂ ಕಾಮಗಾರಿ ಆರಂಭವಾಗಿಲ್ಲ.

Advertisement

ಈ ವರ್ಷದ ಜ. 8ರಂದು ಆಗಿನ ಸಿಎಂ ಸಿದ್ದರಾಮಯ್ಯ ಅವರು ಒಟ್ಟು 18 ಕೋ.ರೂ. ವೆಚ್ಚದಲ್ಲಿ ಆಲೂರು- ಹೇರೂರು ಸಂಪರ್ಕ ಸೇತುವೆ, ಶಂಕರನಾರಾಯಣ – ಸೌಡ ಸೇತುವೆ, ಹಳ್ಳಿಹೊಳೆ – ಕಬ್ಬಿನಾಲೆ ಸೇತುವೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಇಲ್ಲಿ ಇನ್ನೂ ಕಾಮಗಾರಿಯೇ ಶುರುವಾಗದಿರುವುದು ವಿಪರ್ಯಾಸ. 

3 ಸೇತುವೆಗಳಿಗೆ ಒಟ್ಟು ಸಿಆರ್‌ಎಫ್‌ ಅನುದಾನದಡಿ ಸುಮಾರು 18 ಕೋ.ರೂ. ಹಣ ಮಂಜೂರಾಗಿದ್ದು, ಟೆಂಡರ್‌ ಪ್ರಕ್ರಿಯೆ ಕೂಡ ಪೂರ್ಣಗೊಂಡು ಅದರ ವರದಿಯನ್ನು ಕಳೆದ ಫೆಬ್ರವರಿಯಲ್ಲಿಯೇ ಸರಕಾರಕ್ಕೆ ಕಳುಹಿಸಲಾಗಿದೆ. ಆದರೆ ಸರಕಾರದಿಂದ ಮಾತ್ರ ಈ ಟೆಂಡರ್‌ಗೆ ಇನ್ನಷ್ಟೇ ಒಪ್ಪಿಗೆ ಸಿಗಬೇಕಿದೆ.  

ಬಹುಕಾಲದ ಬೇಡಿಕೆ
ಶಂಕರನಾರಾಯಣ ಗ್ರಾಮದ ಸೌಡದಲ್ಲಿ ವಾರಾಹಿ ನದಿಗೆ ಸೇತುವೆ ನಿರ್ಮಿಸಿದರೆ ಬಿದ್ಕಲ್‌ಕಟ್ಟೆ, ಜನ್ನಾಡಿ, ಮೊಳಹಳ್ಳಿ ಭಾಗದ ಜನರು ಶಂಕರನಾರಾಯಣ, ಸೌಡಕ್ಕೆ ಹೋಗಲು ಬಹಳಷ್ಟು ಹತ್ತಿರದ ಮಾರ್ಗವಾಗಲಿದೆ. ಇದು ಈ ಭಾಗದ ಜನರ ಬಹುಕಾಲದ ಬೇಡಿಕೆಯೂ ಹೌದು. ಆಗಿನ ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರ ಮುತುವರ್ಜಿಯಲ್ಲಿ ಸೇತುವೆ ಮಂಜೂರಾಗಿತ್ತು. 

ಹತ್ತಿರದ ಮಾರ್ಗ
ಜನ್ನಾಡಿಯಿಂದ ಶಂಕರನಾರಾಯಣಕ್ಕೆ ಹೋಗಬೇಕಾದರೆ ಹಾಲಾಡಿ ಮೂಲಕವಾಗಿ ಸುಮಾರು 14 ಕಿ.ಮೀ. ದೂರ ಸಂಚರಿಸಬೇಕು. ಅದೇ ಸೌಡದಲ್ಲಿ ಸೇತುವೆ ನಿರ್ಮಾಣವಾದರೆ ಜನ್ನಾಡಿಯಿಂದ ಶಂಕರನಾರಾಯಣಕ್ಕೆ ಕೇವಲ 5 ಕಿ.ಮೀ. ದೂರವಾಗಲಿದೆ. ಇನ್ನೂ ಸಿದ್ದಾಪುರಕ್ಕೆ ತೆರಳಬೇಕಾದರೂ ಹತ್ತಿರವಾಗಲಿದೆ.

Advertisement

ನೂರಾರು ಮಕ್ಕಳಿಗೆ ಅನುಕೂಲ
ಈ ಭಾಗದಲ್ಲಿ ಶಂಕರನಾರಾಯಣದಲ್ಲಿ ಮಾತ್ರ ಪ್ರಥಮ ದರ್ಜೆ ಕಾಲೇಜು ಇದ್ದು, ಜನ್ನಾಡಿ, ಬಿದ್ಕಲ್‌ಕಟ್ಟೆ, ಮೊಳಹಳ್ಳಿ ಭಾಗದ ವಿದ್ಯಾರ್ಥಿಗಳು ಶಂಕರನಾರಾಯಣ ಕಾಲೇಜಿಗೆ ಹೋಗಬೇಕಾದರೆ ಹಾಲಾಡಿ ಮೂಲಕವಾಗಿ ಸುತ್ತು ಬಳಸಿ ತೆರಳುತ್ತಾರೆ. ಸೌಡದಲ್ಲಿ ಸೇತುವೆಯಾದರೆ ನೂರಾರು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.  

ಶೀಘ್ರ ಆರಂಭವಾಗಲಿ
ಜನ್ನಾಡಿಯಿಂದ ಶಂಕರನಾರಾಯಣಕ್ಕೆ ಸಾಕಷ್ಟು ಮಂದಿ ವ್ಯವಹಾರ, ಕೆಲಸ, ಕಾಲೇಜಿಗೆ ಹೋಗುವವರಿದ್ದಾರೆ. ಸೇತುವೆ ಕಾಮಗಾರಿ ಶೀಘ್ರ ಆರಂಭಗೊಂಡು ಪೂರ್ಣಗೊಂಡರೆ ಅನೇಕ ಮಂದಿಗೆ ಪ್ರಯೋಜನವಾಗಲಿದೆ. ಈ ಮಳೆಗಾಲಕ್ಕಂತೂ ಪ್ರಯೋಜನವಾಗಿಲ್ಲ. ಮುಂದಿನ ಮಳೆಗಾಲಕ್ಕೂ ಮುಂಚೆಯಾದರೂ ಸೇತುವೆ ನಿರ್ಮಾಣವಾಗಲಿ. 
– ಗುರುದತ್‌, ಶಂಕರನಾರಾಯಣ

ಸರಕಾರದ ಒಪ್ಪಿಗೆ ಅಗತ್ಯ
ಅನುದಾನ ಮಂಜೂರಾಗಿ ಟೆಂಡರನ್ನು ಕೂಡ ಕರೆಯಲಾಗಿದೆ. ಆ ಪ್ರಕ್ರಿಯೆ ಕೂಡ ಮುಗಿದಿದ್ದು, ಟೆಂಡರ್‌ಗೆ ರಾಜ್ಯ ಸರಕಾರದ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ. 
– ನಾಗರಾಜ್‌, ರಾ.ಹೆ. ಶೃಂಗೇರಿ 
ಉಪ ವಿಭಾಗದ ಎಂಜಿನಿಯರ್‌

ಟೆಂಡರ್‌ ಒಪ್ಪಿಗೆಗೆ ಪ್ರಯತ್ನ
ಟೆಂಡರ್‌ನ್ನು ರಾಜ್ಯ ಸರಕಾರ ಸದ್ಯಕ್ಕೆ ತಡೆಹಿಡಿದಿದೆ. ಸರಕಾರದ ಗಮನಕ್ಕೆ ಟೆಂಡರ್‌ಗೆ ಒಪ್ಪಿಗೆ ಕೊಡಿಸಿ, ಶೀಘ್ರ ಸೇತುವೆ ಕಾಮಗಾರಿ ಆರಂಭಿಸಲು ಪ್ರಯತ್ನಿಸಲಾಗುವುದು. 
– ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next