ದುಬೈ: ಒಂದೆಡೆ ಪತ್ರಕರ್ತ ಜಮಾಲ್ ಕಶೋಗ್ಗಿ ಹತ್ಯೆಯಿಂದಾಗಿ ಜಾಗತಿಕ ಸಮುದಾಯವೇ ಸೌದಿ ಅರೇಬಿಯಾ ವಿರುದ್ಧ ನಿಂತಿದ್ದರೆ, ಇನ್ನೊಂದೆಡೆ ಸೌದಿ ಅರೇಬಿಯಾದಲ್ಲಿ ಶಾಂತವಾಗಿ ಸಾಂಸ್ಕೃತಿಕ ಬದಲಾವಣೆಯೂ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ಪಾಶ್ಚಾತ್ಯ ಸಂಗೀತ ಕಾರ್ಯಕ್ರಮದಲ್ಲಿ ಪುರುಷರೊಂದಿಗೆ ಮಹಿಳೆಯರಿಗೆ ನರ್ತಿಸಲು ಅವಕಾಶ ಮಾಡಿಕೊಡಲಾಗಿದೆ.
ಕೆಲವೇ ದಿನಗಳ ಹಿಂದೆ ನಡೆದ ಸರ್ಕಾರಿ ಪ್ರಾಯೋಜಿತ ಸಂಗೀತ ಸಂಜೆಯಲ್ಲಿ ಫ್ರೆಂಚ್ ಸೂಪರ್‌ಸ್ಟಾರ್ ಡೇವಿಡ್ ಗೆಟ್ಟಾರಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದೇ ಮೊದಲ ಬಾರಿಗೆ ಇಂಥದ್ದೊಂದು ಸಾಂಸ್ಕೃತಿಕ ಬದಲಾವಣೆಗೆ ಸೌದಿ ಅರೇಬಿಯಾ ಸಾಕ್ಷಿಯಾಗಿದೆ.
ಈ ಹಿಂದೆ ಮಹಿಳೆಯರಿಗೆ ವಾಹನ ಚಾಲನೆಗೆ ಅನುಮತಿ ನೀಡುವ ಮೂಲಕ ಸಾಮಾಜಿಕ ಬದಲಾವಣೆಗೆ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ನಾಂದಿ ಹಾಡಿದ್ದರು. ಕಳೆದ ಜೂನ್‌ನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಬ್ಬರು ನರ್ತಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದು ಮುಸ್ಲಿಂ ದೇಶದ ನೀತಿ ಸಂಹಿತೆಯನ್ನು ಉಲ್ಲಂ ಸುತ್ತದೆ ಎಂದು ಆರೋಪಿಸಲಾಗಿತ್ತು. ಆದರೆ ಈಗ ಈ ನಿರ್ಬಂಧವನ್ನು ತೆಗೆದುಹಾಕಿರುವುದರಿಂದ ಸಾಂಸ್ಕೃತಿಕವಾಗಿ ದೇಶ ಇನ್ನೊಂದು ಹೆಜ್ಜೆ ಮುಂದಿಟ್ಟಂತಾಗಿದೆ. ಇನ್ನೊಂದೆಡೆ, ಜಮಾಲ್ ಕಶೋಗ್ಗಿ ಹತ್ಯೆಯಿಂದ ಸೌದಿ ಅರೇಬಿಯಾ ವಿರುದ್ಧ ಜಾಗತಿಕ ಮಟ್ಟದಲ್ಲಿ ಉಂಟಾದ ಅಲೆಯನ್ನು ಶಮನಗೊಳಿಸುವ ತಂತ್ರ ಇದು ಎಂದೂ ಆರೋಪಿಸಲಾಗಿದೆ. ಸಾಂಸ್ಕೃತಿಕವಾಗಿ ಸುಧಾರಣೆ ತರುವ ಬಗ್ಗೆ ರಾಜಕುಮಾರ ನಿರ್ಧಾರ ಮಾಡಿದರೂ, ರಾಜಮನೆತನದ ವಿರುದ್ಧ ಧ್ವನಿ ಎತ್ತುವವರನ್ನು ಹತ್ತಿಕ್ಕಲಾಗುತ್ತಿದೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದೂ ಆರೋಪಿಸಲಾಗಿದೆ.