Advertisement

ಸೌಡ –ಶಂಕರನಾರಾಯಣ –ಸಿದ್ದಾಪುರ ಹೆದ್ದಾರಿ ಕುಸಿತ

01:00 AM Aug 22, 2018 | Karthik A |

ಸಿದ್ದಾಪುರ: ಪ್ರಮುಖ ಹೆದ್ದಾರಿಗಳಲ್ಲಿ ಸೌಡ- ಸಿದ್ದಾಪುರ ಹೆದ್ದಾರಿ ಕೂಡ ಒಂದು. ಈ ಹೆದ್ದಾರಿಯು ಪ್ರಮುಖ ಎರಡು ರಾಜ್ಯ ಹೆದ್ದಾರಿಗೆ ಸಂಪರ್ಕಕೊಂಡಿಯಾಗಿದೆ. ಭಾರೀ ಗಾತ್ರದ ವಾಹನ ಸಂಚಾರ ಮತ್ತು ಮಳೆಯಿಂದಾಗಿ ಈ ಹೆದ್ದಾರಿಯ ಕಾರೆಬೈಲು ಬಳಿ ಭೂ ಕುಸಿತಗೊಂಡಿದ್ದು, ಈಗ ಹೆದ್ದಾರಿಯ ಸಂಪರ್ಕ ಕಡಿತದ ಭೀತಿ ಎದುರಾಗಿದೆ. ಈ ಹೆದ್ದಾರಿ ಸಂಪರ್ಕ ಕಡಿತಗೊಂಡರೆ, ಬೈಂದೂರು- ವಿರಾಜಪೇಟೆ ಮತ್ತು ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿ ಸಂಪರ್ಕಿಸಲು ಸುತ್ತು ಬಳಸಿ ಸಾಗುವಂತಾಗಲಿದೆ.

Advertisement

ಕಾರೆಬೈಲು ಹೆದ್ದಾರಿ ಬಳಿ ಭೂ ಕುಸಿತ
ಈ ಬಾರಿಯ ಭಾರೀ ಮಳೆಯಿಂದ ಪ್ರಮುಖ ಘಾಟಿಗಳು ಕುಸಿದು, ವಾಹನ ಸಂಚಾರ ಬಂದ್‌ಆದ ಪರಿಣಾಮ ಘನ ವಾಹನಗಳು ರಾಷ್ಟ್ರೀಯ ಹೆದ್ದಾರಿಗಳನ್ನು ಬಿಟ್ಟು ರಾಜ್ಯ ಹೆದ್ದಾರಿಯ ಮೂಲಕ ಸಂಚರಿಸುತ್ತಿ¤ವೆ. ರಾಜ್ಯ ಹೆದ್ದಾರಿಯಾಗಿದ್ದರೂ ಕೂಡ ಗುಣ ಮಟ್ಟದ ರಸ್ತೆಯಾಗಿಲ್ಲ. ಇಂದಿಗೂ ರಾಜ್ಯ ಹೆದ್ದಾರಿಯಲ್ಲಿ ಘನ ವಾಹನಗಳಿಗೆ ಸರಾಗವಾಗಿ ಸಂಚರಿಸಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಘನ ವಾಹನಗಳು ಓವರ್‌ ಲೋಡ್‌ ಹಾಕಿಕೊಂಡು ಸಂಚರಿಸುವ ಪರಿಣಾಮ ರಸ್ತೆಗಳು ಹೊಂಡ ಗುಂಡಿಗಳಾಗಿವೆ. ಅಲ್ಲದೆ ಅಲ್ಲಲ್ಲಿ ಮೋರಿ ಕುಸಿತಗೊಂಡರೆ, ಕಾರೆಬೈಲು ಹೆದ್ದಾರಿ ಬಳಿ ಭೂ ಕುಸಿತಗೊಂಡಿದೆ.

ನಕ್ಸಲ್‌ ಪೀಡಿತ ಪ್ರದೇಶಗಳ ಸಂಪರ್ಕ ಕೊಂಡಿ
ಕಾರೆಬೈಲು ಬಳಿ ಹೆದ್ದಾರಿಯ ಭೂ ಕುಸಿತದಿಂದ ಸಂಪರ್ಕ ಕಡಿತಗೊಂಡಲ್ಲಿ ನಕ್ಸಲ್‌ ಪೀಡಿತ ಪ್ರದೇಶಗಳ ಸಂಪರ್ಕವೇ ಕಡಿತಗೊಳ್ಳಲಿದೆ. ಶಂಕರನಾರಾಯಣ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ದುಡಿಮೆಗಾಗಿ ಹೋಗುವ ಕೂಲಿ ಕಾರ್ಮಿಕರು, ಖಜಾನೆ, ಸಬ್‌ ರಿಜಿಸ್ಟ್ರಾರ್‌ ಆಫೀಸ್‌, ಪೊಲೀಸ್‌ ಠಾಣೆ ಮುಂತಾದ ಸರಕಾರಿ ಕೆಲಸಗಳಿಗಾಗಿ ಹೋಗುವವರು ಕಾರೆಬೈಲು ಹೆದ್ದಾರಿಯ ಮೂಲಕ ಸಾಗಬೇಕು.

ಸೂಚನ ಫಲಕಗಳೂ ಇಲ್ಲ
ಈ ಹೆದ್ದಾರಿಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚಾರಿಸುತ್ತವೆ. ವಾಹನ ದಟ್ಟಣೆ ಇರುವ ಈ ರಸ್ತೆಯ ತಿರುವಿನಲ್ಲಿ ಜಾಗೃತಾ ಸೂಚನ ಫಲಕಗಳು ಕೂಡ ಇಲ್ಲ. ಭಾರೀ ಗಾತ್ರದ ಲಾರಿಗಳು, ಮಂಗಳೂರಿನಿಂದ ದೂರದ ಶಿವಮೊಗ್ಗ ಹಾಗೂ ಇನ್ನಿತರ ಜಿಲ್ಲೆಯೆಡೆಗೆ ಇಂಧನ ತುಂಬಿದ ಟ್ಯಾಂಕರ್‌ಗಳು ಸೇರಿದಂತೆ ದಿನಂಪ್ರತಿ ಸಾವಿರಕ್ಕೂ ಹೆಚ್ಚು ಘನ ವಾಹನಗಳು, ಸುಮಾರು ಒಂದು ಸಾವಿರಕ್ಕೂಮಿಕ್ಕಿ ವಾಹನಗಳು ಬಸ್ಸು, ಕಾರು, ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳು ಈಗ ಇದೇ ಮಾರ್ಗದಲ್ಲಿ ಸಂಚರಿಸುತ್ತವೆ.

ಈ ಹೆದ್ದಾರಿಯ ಮೂಲಕ ನಿತ್ಯ ಸಾವಿರಾರು ವಾಹನಗಳ ಸಂಚಾರ ಇದ್ದರೂ ಹೆದ್ದಾರಿಯ ಬದಿಗಳು ಹಾಗೂ ಹೊಂಡಗುಂಡಿಗಳ ಕನಿಷ್ಠ ದುರಸ್ತಿ ನಡೆಸುವ ಪ್ರಯತ್ನವೂ ನಡೆದಿಲ್ಲ. ಪ್ರತಿ ವರ್ಷವೂ ದುರಸ್ತಿ ಎಂಬಂತೆ ತೇಪೆ ಕಾರ್ಯ ಕಾಣುತ್ತಿದ್ದ ರಸ್ತೆಗೆ ಹಾಕಲಾದ ಡಾಮರು ಕಿತ್ತುಹೋಗಿ ಹೊಂಡ ಗುಂಡಿಗಳು ನಿರ್ಮಾಣಗೊಂಡಿವೆ.

Advertisement

ಕೆಲವೆಡೆ ಎರಡು ವಾಹನಗಳು ಚಲಿಸುವಷ್ಟು ವಿಶಾಲವಾದ ರಸ್ತೆಯಿಲ್ಲ. ಚರಂಡಿಗಳು ಇಲ್ಲದಿರು ವುದರಿಂದ ಮಳೆಯ ನೀರು ರಸ್ತೆಯ ಮೂಲಕ ಹರಿದು ಹೋಗುತ್ತಿವೆ. ಇದರಿಂದಾಗಿ ಹೆದ್ದಾರಿಯ ಬದಿಯ ದರೆಗಳು ಕುಸಿಯುತ್ತಿವೆ. ರಾತ್ರಿ ವೇಳೆಯಂತೂ ಇದು ಅಪಾಯಕಾರಿಯಾಗಿದೆ. ಇಷ್ಟಾದರೂ ಈ ಹೆದ್ದಾರಿಯ ದುರವಸ್ಥೆ, ಅಭಿವೃದ್ಧಿ ಕಾರ್ಯದ ಬಗ್ಗೆ ಮಂತ್ರಿಗಳು, ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಮಾಹಿತಿ, ಸ್ಪಷ್ಟ ಚಿತ್ರಣ ಇಲ್ಲ 
ಭಾರೀ ಗಾತ್ರದ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗಿವೆ. ಕಾರೆಬೈಲು ಬಳಿ ಭೂ ಕುಸಿತ ಕೂಡ ಆಗಿದೆ. ನೆರೆಪರಿಹಾರ ವಿಕೋಪದಡಿಯಲ್ಲಿ ಹೊಂಡ ಗುಂಡಿ ಮುಚ್ಚಲು ಮತ್ತು ಕಾರೆಬೈಲು ಬಳಿ ಹೆದ್ದಾರಿ ಬದಿ ಕಟ್ಟಲು ಜಿಲ್ಲಾಧಿಕಾರಿ ಅವರ ಬಳಿ ಹಣ ಕೇಳಿದ್ದೇವೆ. ಯಾವುದೇ ಹಣ ಬಂದಿಲ್ಲ. ಹೊಸ ಯೋಜನೆಗಳು ಕೂಡ ಇಲ್ಲ. ತಾತ್ಕಾಲಿಕವಾಗಿ ಸದ್ಯಕ್ಕೆ ಮಳೆ ನಿಂತ ಮೇಲೆ ಕುಸಿತಗೊಂಡ ಹೆದ್ದಾರಿಯ ಬದಿಯನ್ನು ಕಲ್ಲಿನಿಂದ ಕಟ್ಟಲು ಆರಂಭಿಸುತೇವೆ. ಈಗ ತುರ್ತು ಬ್ಯಾರಿಕೇಡ್‌ ಅಳವಡಿಸಿದ್ದೇವೆ.
– ರಾಘವೇಂದ್ರ ನಾಯ್ಕ, AE, ಲೋಕೋಪಯೋಗಿ ಇಲಾಖೆ ಕುಂದಾಪುರ ಉಪ ವಿಭಾಗ

— ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next