Advertisement

ಧರ್ಮಾತೀತ ಹಿಂದುತ್ವದ ಪ್ರತಿಪಾದಕ ವೀರ ಸಾವರ್ಕರ್‌: ಸಾತ್ಯಕಿ ಸಾವರ್ಕರ್‌

10:49 AM Jan 15, 2022 | Team Udayavani |

“ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೋರಾಟವನ್ನು ನಡೆಸಿದ ಸಾವರ್ಕರ್‌ ಅವರು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ, ಜೈಲು ಪಾಲಾಗಿ ಇನ್ನಿಲ್ಲದ ಶಿಕ್ಷೆ ಅನುಭವಿಸಿದ್ದರು. ತಮ್ಮ ಜೀವನದುದ್ದಕ್ಕೂ ಸಮಸ್ತ ಹಿಂದೂ ಸಮಾಜದ ಒಳಿತಿಗಾಗಿ ಹಗಲಿರುಳೆನ್ನದೆ ಶ್ರಮಿಸುವ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ನಡೆಸಿದ ಅವರು ನೈಜ ಹಿಂದುತ್ವದ ಪ್ರತಿಪಾದಕರಾಗಿದ್ದರು. ಜನರಲ್ಲಿ ರಾಷ್ಟ್ರಭಕ್ತಿಯನ್ನು ಬಡಿದೆಬ್ಬಿಸಿದ ಸಾವರ್ಕರ್‌ ಅವರ ಬಗೆಗೆ ಇದೀಗ ದೇಶದ ಜನತೆಯಲ್ಲಿ ಅಭಿಮಾನ ಹೆಚ್ಚತೊಡಗಿದ್ದು ಯುವಜನರು ಅವರ ಬದುಕಿನ ಕುರಿತಂತೆ ಅಧ್ಯಯನ ನಡೆಸಲು ಆಸಕ್ತಿ ತೋರುತ್ತಿದ್ದಾರೆ’-ಇದು ವೀರ ಸಾವರ್ಕರ್‌ ಅವರ ಮೊಮ್ಮೊಗ ಸಾತ್ಯಕಿ ಸಾವರ್ಕರ್‌ ತಮ್ಮ ಅಜ್ಜನನ್ನು ಕೊಂಡಾಡಿದ ಪರಿ. ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿದ್ದ ಅವರು “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ ವೀರ ಸಾವರ್ಕರ್‌ ಅವರ ಹೋರಾಟ, ಚಿಂತನೆ ಕುರಿತಂತೆ ಅನೇಕ ವಿಚಾರಗಳನ್ನು ಹಂಚಿಕೊಂಡರು. ಈ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

Advertisement

ಸಾವರ್ಕರ್‌ ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ನೀಡಿದ್ದೇಕೆ?
-ಸಾವರ್ಕರ್‌ ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ನೀಡಿರಲಿಲ್ಲ. ಬ್ರಿಟಿಷರು ಅನೇಕ ರೀತಿಯಲ್ಲಿ ಸಾವರ್ಕರ್‌ಗೆ ಹಿಂಸೆ, ಸಮಸ್ಯೆ ನೀಡಿದ್ದರು. ಅದ್ಯಾವುದಕ್ಕೂ ಅವರು ಜಗ್ಗಿಲ್ಲ. ಎಲ್ಲದಕ್ಕೂ ಮಾನಸಿಕ ಸದೃಢತೆ ಕಾಪಾಡಿಕೊಂಡಿದ್ದರು. ಬ್ರಿಟಿಷರಿಗೆ 7 ಪತ್ರಗಳನ್ನು ಬರೆದಿದ್ದರು. ಅವೆಲ್ಲವೂ ಸಂಧಾನ ಪತ್ರಗಳಾಗಿದ್ದವು. ಆದರೆ ಬ್ರಿಟಿಷರು ಅದ್ಯಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ಸಾವರ್ಕರ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲು ದೇಶವ್ಯಾಪಿ ಒತ್ತಡ, ಆಗ್ರಹ ಕೇಳಿಬಂದಿತ್ತು.

ಸಾವರ್ಕರ್‌ ಅವರ ಅಂತಿಮ ದಿನಗಳು ಹೇಗಿದ್ದವು?
– ಸಾವರ್ಕರ್‌ ಅವರು ರತ್ನಗಿರಿ ಜೈಲಿನಿಂದ ಬಿಡುಗಡೆಯಾದ ಅನಂತರ ಜಿಲ್ಲೆಯಿಂದ ಹೊರಗೆ ಹೋಗಬಾರದು ಎಂಬ ನಿಬಂಧನೆ ವಿಧಿಸಿದ್ದರು. ಜತೆಗೆ ರಾಜತಾಂತ್ರಿಕತೆಯ ಕಾರ್ಯದಲ್ಲಿ ಭಾಗಿಯಾಗಬಾರದು ಎಂಬ ಷರತ್ತನ್ನು ಬ್ರಿಟಿಷರು ಹಾಕಿದ್ದರು. ಇವೆಲ್ಲದರ ನಡುವೆ ಸಾವರ್ಕರ್‌ ಸಾಮಾಜಿಕ ಕ್ರಾಂತಿಯನ್ನೇ ರತ್ನಗಿರಿ ಭಾಗದಲ್ಲಿ ಮಾಡಿದ್ದರು. ಆ ಸಂದರ್ಭದಲ್ಲಿ ಸಮಾಜದಲ್ಲಿ ಜಾತಿ ಭೇದಭಾವ ಹೆಚ್ಚಿತ್ತು. ಹಿಂದುಳಿದ ಸಮುದಾಯದವರಿಗೆ ಮೇಲ್ಜಾತಿಯವರ ಹಳ್ಳಿ, ಮಂದಿರಗಳ ಪ್ರವೇಶವೂ ಇರಲಿಲ್ಲ. ಸಾವರ್ಕರ್‌ ಹಿಂದುಳಿದ ಸಮುದಾಯದವರು ಇರುವಲ್ಲಿಗೆ ಹೋಗಿ ಭಜನೆ ಕಾರ್ಯಕ್ರಮ ಆರಂಭಿಸಿದರು. ಅವರನ್ನು ಹಳ್ಳಿಯ ಒಳಗೆ ಕರೆತಂದರು, ದೇವಸ್ಥಾನ ಪ್ರವೇಶಿಸಲು ಅವಕಾಶ ಕಲ್ಪಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲೂ ಸಾಕಷ್ಟು ಪರಿವರ್ತನೆ ತಂದಿದ್ದರು. ಹಿಂದುಳಿದ ಸಮುದಾಯಕ್ಕೆ ಸಮಾನ ಶಿಕ್ಷಣವೇ ಇರಲಿಲ್ಲ. ರತ್ನಗಿರಿ ಜಿಲ್ಲೆಯಾದ್ಯಂತ ಈ ಪರಿಸ್ಥಿತಿಯನ್ನು ಬದಲಿಸಿದ ಸಾವರ್ಕರ್‌, ಎಲ್ಲರೊಂದಿಗೆ ಹಿಂದುಳಿದವರು ಶಿಕ್ಷಣ ಪಡೆಯುವಂತೆ ಮಾಡಿದರು. ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಹಲವು ಪ್ರಕಲ್ಪವನ್ನು ಆರಂಭಿಸಿದರು. ದೇವಸ್ಥಾನದ ಸಮೀಪವೊಂದರಲ್ಲಿ ಹೊಟೇಲ್‌ ಆರಂಭಿಸಿ, ಊಟ ಸಿದ್ಧಪಡಿಸುವವರು, ಬಡಿಸುವವರು, ಮ್ಯಾನೇಜರ್‌ ಹೀಗೆ ಎಲ್ಲ ಜಾತಿಗೂ ಸಮಾನ ಆದ್ಯತೆ ನೀಡಿ, ಎಲ್ಲರನ್ನು ಒಗ್ಗೂಡಿಸಿದರು. ಸಾವರ್ಕರ್‌ ತಮ್ಮ ದೇಹಾಂತ್ಯದ ವರೆಗೂ ಸಮಾಜದಲ್ಲಿ ಅನೇಕ ರೀತಿಯ ಪರಿವರ್ತನೆ ತಂದಿದ್ದಾರೆ.

ಸಾವರ್ಕರ್‌ ಸದಾ ಟೀಕೆಯಲ್ಲಿರುವುದು ಏಕೆ?
– ಸಾವರ್ಕರ್‌ ಬಗ್ಗೆ ಟೀಕೆ ಮಾಡುವವರು ಖಂಡಿತ ಅವರ ಬಗ್ಗೆ ಅಧ್ಯಯನ ಮಾಡಿರಲು ಸಾಧ್ಯವಿಲ್ಲ. ಯಾರು ಸಾವರ್ಕರ್‌ ಅವರನ್ನು ಅಧ್ಯಯನ ಮಾಡಿದ್ದರೋ ಅವರ ಗ್ರಂಥಗಳನ್ನು ಓದಿಕೊಂಡಿದ್ದಾರೋ ಅಂಥವರು ಸಾವರ್ಕರ್‌ರನ್ನು ಟೀಕೆ ಮಾಡುವುದಿಲ್ಲ. ಅವರ ಸಿದ್ಧಾಂತ, ಚಿಂತನೆಗಳನ್ನು ಖಂಡಿತ ಒಪ್ಪಿಕೊಳ್ಳುತ್ತಾರೆ.

ಸಾವರ್ಕರ್‌ ದೃಷ್ಟಿಯಲ್ಲಿ ಹಿಂದುತ್ವ ಎಂದರೆ ಏನು?
-ಹಿಂದೂ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಕಾಲವದು. ಹಿಂದೂ ಎಂದರೆ ಗುಲಾಮರು ಎಂಬ ಭಾವನೆ ಅಂದಿನ ಪರಿಸ್ಥಿತಿಯಲ್ಲಿ ಅನೇಕರಲ್ಲಿತ್ತು. ಸಮಾಜದಲ್ಲಿದ್ದ ಈ ಮಾನಸಿಕತೆಯನ್ನು ಸಾವರ್ಕರ್‌ ತಮ್ಮ ಅಧ್ಯಯನ, ಚಿಂತನೆ ಹಾಗೂ ಕಾರ್ಯದ ಮೂಲಕ ಬದಲಾವಣೆ ಮಾಡಿದರು. ಹಿಂದುತ್ವ ಎನ್ನುವ ತಮ್ಮ ಪುಸ್ತಕದ ಮೂಲಕ ಹಿಂದೂ ಮತ್ತು ಹಿಂದುತ್ವದ ಸಮಗ್ರವಾದ ಚರ್ಚೆ ಮಾಡಿದ್ದಾರೆ. ಹಿಂದೂ ಶಬ್ದದ ಉತ್ಪತ್ತಿ ಹೇಗಾಯಿತು?, ಹಿಂದೂ ರಾಷ್ಟ್ರ ಯಾವುದು?, ಹಿಂದೂಗಳು ಯಾರು? ಎಂಬ ಬಗ್ಗೆ ಸಾವರ್ಕರ್‌ ಅವರಲ್ಲಿ ಸ್ಪಷ್ಟತೆಯಿತ್ತು. ಸಿಂಧೂ ನದಿಯಿಂದ ಕೆಳಗಿನ ಸಮುದ್ರದ ವರೆಗಿನ ವಿಶಾಲ ಭೂಪ್ರದೇಶ ಭಾರತವಾಗಿದ್ದು, ಅಲ್ಲಿರುವವರು ಹಿಂದೂಗಳು. ಭಾರತ ಹಿಂದೂಗಳ ಪುಣ್ಯ ಭೂಮಿ, ಪಿತೃ ಭೂಮಿ ಎಂದವರು ಪ್ರತಿಪಾದಿಸುತ್ತಲೇ ಬಂದಿದ್ದರು.

Advertisement

ಸಾವರ್ಕರ್‌ ಸಿದ್ಧಾಂತವನ್ನು ಸಮಾಜ ಪೂರ್ಣವಾಗಿ ಒಪ್ಪಿಕೊಳ್ಳುತ್ತಿದೆಯೇ?
– ಸಾವರ್ಕರ್‌ ಸನಾತನಿ, ಮನುವಾದಿ ಎಂದು ಅನೇಕರು ಆರೋಪಿಸುತ್ತಾರೆ. ಆದರೆ ಸಾವರ್ಕರ್‌ ತಮ್ಮ ಜೀವನದಲ್ಲಿ ಜಾತಿಯ ಆಚರಣೆಯೇ ಮಾಡಿಲ್ಲ ಮತ್ತು ಯಾರಲ್ಲೂ ಈ ರೀತಿಯ ಭೇದಭಾವವನ್ನು ಮಾಡಿಲ್ಲ. ಎಲ್ಲರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದ್ದಾರೆ. ಧರ್ಮಾತೀತವಾದ ಹಿಂದುತ್ವ ಅವರದಾಗಿತ್ತು. ಸಾವರ್ಕರ್‌ ಹಿಂದುತ್ವ ಮತ್ತು ಅವರ ತಣ್ತೀ, ಆದರ್ಶಗಳನ್ನು ಒಪ್ಪಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಯುವ ಪೀಳಿಗೆ ಸಾವರ್ಕರ್‌ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ.

ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್‌ ನಡುವಿನ ಸಂಬಂಧ ಹೇಗಿದೆ?
-ಸದ್ಯ ಹಿಂದೂ ಮಹಾಸಭಾದ ಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ. ಸಾವರ್ಕರ್‌ ಇದ್ದಾಗ ಉಚ್ಛಾಯ ಸ್ಥಿತಿಯಲ್ಲಿತ್ತು. ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್‌ ನಡುವೆ ದಶಕಗಳ ಹಿಂದೆ ಉತ್ತಮ ಬಾಂಧವ್ಯ ಇತ್ತು. ಬಿಜೆಪಿ ಮತ್ತು ಆರೆಸ್ಸೆಸ್‌ ಈಗ ಹೇಗಿದೆಯೋ ಹಿಂದೊಮ್ಮೆ ಆರೆಸ್ಸೆಸ್‌- ಹಿಂದೂ ಮಹಾಸಭಾ ಹಾಗೆಯೇ ಇತ್ತು. ಸಾವರ್ಕರ್‌ ಅವರ ದೊಡ್ಡ ಅಣ್ಣ ಗಣೇಶ್‌ ದಾಮೋದರ್‌ ಸಾವರ್ಕರ್‌ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರಿಯರಾಗಿದ್ದರು. ಈಗ ಆರೆಸ್ಸೆಸ್‌ ಮತ್ತು ಹಿಂದೂ ಮಹಾಸಭಾ ಸಂಪೂರ್ಣ ಬೇರೆಯಾಗಿದೆ.

ಸಾವರ್ಕರ್‌ಗೆ ಭಾರತ ರತ್ನ ನೀಡಬೇಕು ಎನ್ನುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ಕುಟುಂಬದ ಸದಸ್ಯನಾಗಿ ನಾನು ಅಜ್ಜನಿಗೆ (ಸಾವರ್ಕರ್‌) ಭಾರತ ರತ್ನ ನೀಡಿ ಎಂದು ಆಗ್ರಹಿಸಲಾಗದು. ಆದರೆ ದೇಶದ ಜನರ ಭಾವನೆಗೆ ಸ್ಪಂದಿಸಿ ಸರಕಾರ ಭಾರತ ರತ್ನ ನೀಡಬೇಕು. ಸಾವರ್ಕರ್‌ ಸಾಮಾಜಿಕ ಕ್ರಾಂತಿಯ ಜತೆಗೆ ಭಾರತದ ಸ್ವಾತಂತ್ರ್ಯದ ಕ್ರಾಂತಿಗೆ ಕಿಚ್ಚು ಹಚ್ಚಿದವರು.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next