ಯಾದಗಿರಿ: ನಮ್ಮನ್ನು ನಾವು ಆತ್ಮ ನಿರೀಕ್ಷಣೆ ಮಾಡಿಕೊಳ್ಳುವ ಮೂಲಕ ದೇಶ ಸೇವೆಗೆ ಮುಂದಾಗುವ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಒಂದು ದಿನದ ಸತ್ಯಾಗ್ರಹ ಹಮ್ಮಿಕೊಂಡಿರುವುದು ಮಾದರಿಯಾಗಿದೆ ಎಂದು ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಅಭಿಪ್ರಾಯಪಟ್ಟರು.
ನಗರದ ಗಾಂಧಿ ವೃತ್ತದ ಬಳಿಯ ಪಂಪ ಮಹಾಕವಿ ಮಂಟಪದಲ್ಲಿ ಮಹಾತ್ಮ ಗಾಂಧೀಜಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಯುವ ಬ್ರಿಗೇಡ್‌ನಿಂದ ಆಯೋಜಿಸಿದ್ದ ಆತ್ಮನಿರೀಕ್ಷಣೆಗಾಗಿ ಸತ್ಯಾಗ್ರಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವ ಕೆಲಸವಂತೂ ಆಗದೇ ಇರುವುದು ದುಃಖದ ಸಂಗತಿಯಾಗಿದೆ. ಇಂತಹ ವೇಳೆ ಇಂತಹದ್ದೊಂದು ಮಾದರಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಂಡು ಮುಂದೆ ಸಾಗುವಂತಹ ಅಗತ್ಯ ಇಂದು ಹೆಚ್ಚಾಗಿದೆ ಎಂಬುದನ್ನು ಈ ಕಾರ್ಯಕ್ರಮ ಎತ್ತಿಹಿಡಿದಿದೆ ಎಂದು ಹೇಳಿದರು.
ಯಾವುದೇ ಕೆಲಸ ಮಾಡುವ ಮೊದಲು ವಿವೇಚನೆ ಇಲ್ಲದೆ ಮಾಡಿ ನಂತರ ಅದಕ್ಕಾಗಿ ಪಶ್ಚಾತ್ತಾಪ ಪಡುವಂತಹ ಸ್ಥಿತಿ ತಂದುಕೊಂಡಸಂದರ್ಭದಲ್ಲಿ ಆತ್ಮಾವಲೋಕನ ಅಗತ್ಯ. ಅದೇ ಮಾದರಿಯಲ್ಲಿ ರಾಷ್ಟ್ರವನ್ನು ರಾಮರಾಜ್ಯವಾಗಿಸುವ ನಿಟ್ಟಿನಲ್ಲಿ ಕೊಂಡೊಯ್ಯಲು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ದಾಸಬಾಳ ಮಠದ ಶ್ರೀ ವೀರೇಶ್ವರ ಸ್ವಾಮೀಜಿ ಮಾತನಾಡಿ, ಆತ್ಮನಿರೀಕ್ಷಣೆ ಮಾಡಿ ಕೊಳ್ಳುವುದರಿಂದ ದೇಶಪ್ರೇಮ ಬೆಳೆಯುತ್ತದೆ. ಸ್ವದೇಶಿ ಮಂತ್ರ ಜಪಿಸಬೇಕು, ದೇಶಕ್ಕಾಗಿ ತನು ಮನ ಧನ ಅರ್ಪಣೆ ಮಾಡಿದ್ದೇವೆಯೇ? ಎಂದು ಒಮ್ಮೆ ಅವಲೋಕನ ಮಾಡಿಕೊಂಡರೆ ಬಹುತೇಕ ಹೆಚ್ಚಿನ ಪ್ರಮಾಣದ ಜನರು ದೇಶದ ಬಗ್ಗೆ ಯೋಚನೆಯೇ ಮಾಡಿರುವುದಿಲ್ಲ ಎಂಬುದು ಗೊತ್ತಾಗುತ್ತದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳಿಂದ ನೈಜ ಅವಲೋಕನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಯುವಾ ಬ್ರಿಗೇಡ್ ವಿಭಾಗೀಯ ಸಹ ಸಂಚಾಲಕ ಸಂಗಮೇಶ ಕೆಂಭಾವಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾಸಂಚಾಲಕ ವಿಶ್ವನಾಥ ಯಾದವ, ನಗರ ಸಂಪರ್ಕ ಪ್ರಮುಖ ವೆಂಕಟೇಶ ಕಲಬುರಗಿ, ನಿಖೀಲ್ ಪಾಟೀಲ, ಮಂಜುನಾಥ ಕಾಸರಟಗಿ, ಹರೀಶ ಪೂಜಾರಿ, ರಘುರಾಮ ಇತರರು ಉಪಸ್ಥಿತರಿದ್ದರು.