ಲೈಫ್ನಲ್ಲಿ ಸೆಟ್ಲ ಆಗಬೇಕು ಅಂದ್ರೆ ಹಣ ಇರಬೇಕು. ಆದ್ರೆ ಆ ಹಣ ಮಾಡೋಕೆ ತುಂಬ ಕಷ್ಟಪಡುವಂತಿರಬಾರದು. ಅತಿ ಸುಲಭ ಮಾರ್ಗದಲ್ಲಿ ಹಣ ಮಾಡೋದಕ್ಕೆ ಏನಾದರೊಂದು ಐಡಿಯಾ ಇರಬೇಕು. ಅಂಥದ್ದೊಂದು ಐಡಿಯಾ ಅಂದ್ರೆ, ಹಣ ಇದ್ದವರನ್ನ ಕಿಡ್ನ್ಯಾಪ್ ಮಾಡೋದು. ಐಡಿಯಾ ಸ್ವಲ್ಪ ಹಳೆಯದಾದ್ರೂ, ಕಿಡ್ನಾಪ್ ಮಾಡೋ ಸ್ಟೈಲ್‌ನಲ್ಲಿ ಹೊಸದೇನಾದ್ರೂ ಇದ್ದರೆ, ಆ ಕಿಡ್ನ್ಯಾಪ್ ಒಂದಷ್ಟು ಥ್ರಿಲ್ಲಿಂಗ್ ಆಗಿರುತ್ತದೆ.
ಅಂಥದ್ದೊಂದು ಕಿಡ್ನ್ಯಾಪ್ ಸ್ಟೋರಿಯ ರೋಚಕತೆಯನ್ನು ಕಣ್ತುಂಬಿಕೊಳ್ಳುವ ಮನಸ್ಸಿದ್ದರೆ, ನೀವು ಥಿಯೇಟರ್‌ನಲ್ಲಿ ಒಂದಷ್ಟು “ರಿಲ್ಯಾಕ್ಸ್’ ಆಗೋದಂತೂ “ಸತ್ಯ’. ಹೀರೋ-ವಿಲನ್ ಇಬ್ಬರೂ ಸೇರಿ ಹಣಕ್ಕಾಗಿ ಒಂದು ಹುಡುಗಿಯನ್ನು ಕಿಡ್ನ್ಯಾಪ್ ಮಾಡಲು ಪ್ಲಾನ್ ಮಾಡುತ್ತಾರೆ. ಆ ಪ್ಲಾನ್ ಅನ್ನು ಹೇಗೆ ಜಾರಿಗೊಳಿಸುತ್ತಾರೆ. ಕಿಡ್ನ್ಯಾಪ್ ಆಗುವ ಹುಡುಗಿ ಯಾರು, ಅವಳ ಹಿನ್ನೆಲೆ ಏನು ಅನ್ನೋದು ಸಸ್ಪೆನ್ಸ್.
ಕಿಡ್ನ್ಯಾಪ್ ನಂತರ ಮುಂದೇನಾಗುತ್ತದೆ, ನಿಜವಾಗಿಯೂ “ರಿಲ್ಯಾಕ್ಸ್” ಆಗೋದು ಯಾರು ಅನ್ನೋದು ಕ್ಲೈಮ್ಯಾಕ್ಸ್! ಇದು ಈ ವಾರ ತೆರೆಗೆ ಬಂದಿರುವ “ರಿಲ್ಯಾಕ್ಸ್ ಸತ್ಯ’ ಚಿತ್ರದ ಕಥಾಹಂದರ. ಒಂದು ಮಾಮೂಲಿ ಕಿಡ್ನ್ಯಾಪ್ ಸ್ಟೋರಿಯನ್ನು ಸಸ್ಪೆನ್ಸ್-ಥ್ರಿಲ್ಲಿಂಗ್ ಅಂಶಗಳನ್ನು ಇಟ್ಟುಕೊಂಡು, ಎಷ್ಟರ ಮಟ್ಟಿಗೆ ರೋಚಕವಾಗಿ ಕಟ್ಟಿಕೊಡಬಹುದು ಎಂಬುದಕ್ಕೆ “ರಿಲ್ಯಾಕ್ಸ್ ಸತ್ಯ’ ಇತ್ತೀಚಿನ ತಾಜಾ ಉದಾಹರಣೆ.
ಸಂಪೂರ್ಣ ಚಿತ್ರದ ಕಥೆ ಕೇವಲ ನಾಲ್ಕೈದು ಪಾತ್ರಗಳ ಸುತ್ತ ಸುತ್ತುವುದರಿಂದ, ಕಲಾವಿದರ ಅಭಿನಯ ಮತ್ತು ನಿರೂಪಣೆಯೇ ಇಡೀ ಚಿತ್ರಕ್ಕೆ ಜೀವಾಳ. ಇನ್ನು ನಾಯಕ ಪ್ರಭು ಮುಂಧ್ಕುರ್ ಮತ್ತು ಖಳ ನಾಯಕ ಉಗ್ರಂ ಮಂಜು ಸವಾಲಿಗೆ ಬಿದ್ದವರಂತೆ, ತಮ್ಮ ಅಭಿನಯದ ಮೂಲಕ ಇಡೀ ಚಿತ್ರಕ್ಕೆ ಹೆಗಲಾಗಿದ್ದಾರೆ. ಇಬ್ಬರ ನಡುವಿನ ದೃಶ್ಯಗಳು, ಸಂಭಾಷಣೆ ನೋಡುಗರಿಗೆ ಅಲ್ಲಲ್ಲಿ ಸಸ್ಪೆನ್ಸ್-ಥ್ರಿಲ್ಲಿಂಗ್ ಜೊತೆಗೆ, ಕಾಮಿಡಿಯ ಕಚಗುಳಿಯನ್ನೂ ಕೊಡುತ್ತದೆ. ಉಳಿದಂತೆ ಮಾನ್ವಿತಾ ಕಾಮತ್ ಅವರದ್ದು ಅಚ್ಚುಕಟ್ಟಾದ ಅಭಿನಯ.
ಚಿತ್ರದ ಮೊದಲಾರ್ಧ ಅಲ್ಲಲ್ಲಿ ಮಂದಗತಿಯಲ್ಲಿ ಸಾಗಿದರೂ, ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಅದೆಲ್ಲವನ್ನು ಮರೆ ಮಾಚುತ್ತದೆ. ಚಿತ್ರದ ತಾಂತ್ರಿಕ ಕಾರ್ಯಗಳು ಗಮನ ಸೆಳೆಯುತ್ತದೆ. ಕೆಲವೊಂದು ಸಣ್ಣ-ಪುಟ್ಟ ಲೋಪಗಳನ್ನು ಬದಿಗಿಟ್ಟು ನೋಡುವುದಾದರೆ, “ರಿಲ್ಯಾಕ್ಸ್ ಸತ್ಯ’ ಕೊಟ್ಟ ದುಡ್ಡಿಗೆ ಮೋಸವಿಲ್ಲದೆ ಮನರಂಜಿಸುತ್ತಾನೆ. ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಗಳ ಒಲವಿರುವವರು ವಾರಾಂತ್ಯದಲ್ಲಿ “ರಿಲ್ಯಾಕ್ಸ್ ಸತ್ಯ’ನನ್ನು ಒಮ್ಮೆ ನೋಡಿಬರಲು ಅಡ್ಡಿಯಿಲ್ಲ.
ಚಿತ್ರ: ರಿಲ್ಯಾಕ್ಸ್ ಸತ್ಯ
ನಿರ್ದೇಶನ: ನವೀನ್ ರೆಡ್ಡಿ. ಜಿ
ನಿರ್ಮಾಣ: ರೆಡ್ ಡ್ರ್ಯಾಗನ್ ಫಿಲಂಸ್
ತಾರಾಗಣ: ಪ್ರಭು ಮುಂಧ್ಕುರ್, ಮಾನ್ವಿತಾ ಹರೀಶ್, ಉಗ್ರಂ ಮಂಜು, ಕಡ್ಡಿಪುಡಿ ಚಂದ್ರು ಮತ್ತಿತರರು.
* ಜಿ.ಎಸ್ ಕಾರ್ತಿಕ ಸುಧನ್