ಪಟ್ನಾ : ಹಿರಿಯ ಬಿಜೆಪಿ ನಾಯಕ ಸತ್ಯಪಾಲ್ ಮಲಿಕ್ ಅವರಿಂದು ಬುಧವಾರ ಬಿಹಾರದ ರಾಜ್ಯಪಾಲರಾಗಿ ಇಲ್ಲಿನ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ನೂತನ ರಾಷ್ಟ್ರಪತಿಯಾಗಿರುವ ರಾಮ ನಾಥ್ ಕೋವಿಂದ್ ಅವರು ಬಿಜೆಪಿಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಕರಣಗೊಂಡ ಬಳಿಕದಲ್ಲಿ ಬಿಹಾರ ರಾಜ್ಯಪಾಲರ ಹುದ್ದೆಯು ಈ ತನಕ ಖಾಲಿ ಬಿದ್ದಿತ್ತು. ಪಶ್ಚಿಮ ಬಂಗಾಲದ ರಾಜ್ಯಪಾಲ ಕೆ ಎನ್ ತ್ರಿಪಾಠಿ ಅವರು ತಾತ್ಕಾಲಿಕವಾಗಿ ಬಿಹಾರ ರಾಜ್ಯಪಾಲರ ಹುದ್ದೆಯ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದರು.
ಸತ್ಯಪಾಲ್ ಮಲಿಕ್ ಅವರಿಗೆ ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಅವರು ಸತ್ಯಪಾಲ್ ಅವರಿಗೆ ನೂತನ ರಾಜ್ಯಪಾಲರಾಗಿ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ರಾಜ್ಯ ವಿಧಾನಸಭೆಯ ಸ್ಪೀಕರ್ ವಿಜಯ್ ಚೌಧರಿ ಮತ್ತು ವಿಧಾನ ಪರಿಷತ್ ಅಧ್ಯಕ್ಷರಾಗಿರುವ ಅವಧೇಶ್ ನಾರಾಯಣ್ ಸಿಂಗ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸತ್ಯಪಾಲ್ ಸಿಂಗ್ ಅವರು ಮೂಲತಃ ಉತ್ತರ ಪ್ರದೇಶದ (ಪಶ್ಚಿಮ) ಬಾಘಪತ್ ಜಿಲ್ಲೆಯವರು. ಕಾನೂನು ಪದವೀಧರರಾಗಿರುವ ಅವರು ತಮ್ಮ ರಾಜಕೀಯ ಜೀವನವನ್ನು 1970ರಲ್ಲಿ ಉ.ಪ್ರ.ವಿಧಾನಸಭೆಗೆ ಚುನಾಯಿತರಾಗುವ ಮೂಲಕ ಆರಂಭಿಸಿದ್ದರು.
1989ರಲ್ಲಿ ಸತ್ಯಪಾಲ್ ಅವರು ಆಲೀಗಢ ಲೋಕಸಭಾ ಕ್ಷೇತ್ರದಿಂದ ಜನತಾ ದಳ ಟಿಕೆಟ್‌ನಲ್ಲಿ ಆಯ್ಕೆಯಾಗಿದ್ದರು; ರಾಜ್ಯಸಭಾ ಸದಸ್ಯರಾಗಿಯೂ ಅವರು ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ.