ಬೆಂಗಳೂರು: ಮುಂದಿನ ವರ್ಷದ (2023) ಎಸೆಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳು ತಮ್ಮ ಸ್ಯಾಟ್ಸ್ ಸಂಖ್ಯೆಯನ್ನು (ವಿದ್ಯಾರ್ಥಿಗಳ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ) ಕಡ್ಡಾಯವಾಗಿ ನಮೂದಿಸುವ ನಿಯಮ ತರಲು ಶಿಕ್ಷಣ ಇಲಾಖೆ ಮುಂದಾಗಿದೆ.
ಪ್ರಸ್ತುತ ವಿದ್ಯಾರ್ಥಿಗಳು ನೋಂದಣಿ ವೇಳೆ ತಂದೆ, ತಾಯಿ ಹೆಸರು, ತಮ್ಮ ಹೆಸರು, ಆಧಾರ್ ಸಂಖ್ಯೆ ಮಾತ್ರ ನೋಂದಣಿ ಮಾಡುತ್ತಿದ್ದಾರೆ. ಇದರ ಜತೆಗೆ ಸ್ಯಾಟ್ಸ್ ಸಂಖ್ಯೆಯನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ.
ಪ್ರತಿ ವಿದ್ಯಾರ್ಥಿಗೂ ಸ್ಯಾಟ್ಸ್ ಸಂಖ್ಯೆ ನೀಡಲಾಗುತ್ತಿದ್ದು, ಇದನ್ನು ಪರಿಶೀಲಿಸಿದರೆ ವಿದ್ಯಾರ್ಥಿಯ ಕಲಿಕಾ ಮಟ್ಟ, ಸರಕಾರದಿಂದ ಪಡೆಯುತ್ತಿರುವ ಸೌಲಭ್ಯಗಳು ಹಾಗೂ ಹಿಂದಿನ ತರಗತಿಯನ್ನು ಯಾವ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾನೆ ಮುಂತಾದ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ಎಸೆಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿ ವೇಳೆ ಸ್ಯಾಟ್ಸ್ ಸಂಖ್ಯೆಯನ್ನು ನಮೂದಿಸುವಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಇದರಿಂದ ಸಾಕಷ್ಟು ಅನುಕೂಲಗಳಾಗಲಿವೆ.
– ಪಿ. ಬೈಲಾಂಜನಪ್ಪ, ಡಿಡಿಪಿಐ, ಬೆಂಗಳೂರು ದಕ್ಷಿಣ