ಸತೀಶ್ ನೀನಾಸಂ ಅಭಿನಯದ “ಚಂಬಲ್’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಗೋಕುಲ್ ಫಿಲ್ಮ್ಸ್ ಚಿತ್ರವನ್ನು ವಿತರಣೆ ಮಾಡುತ್ತಿದೆ. ವಿತರಕ ಗೋಕುಲ್‌ರಾಜ್ ಅವರು ವಿತರಣೆ ಕುರಿತು ಹೇಳುವುದು ಹೀಗೆ. “ರಾಜ್ಯಾದ್ಯಂತ ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಚಿತ್ರ ನೋಡಿದಾಗ, ಒಳ್ಳೆಯ ಚಿತ್ರವಿದು ಎಲ್ಲರಿಗೂ ತಲುಪಬೇಕು ಎಂಬ ಕಾರಣಕ್ಕೆ ನಾವೇ ಆಸಕ್ತಿ ವಹಿಸಿ, ವಿತರಣೆ ಹಕ್ಕು ಪಡೆದು, ಇದೀಗ ಒಳ್ಳೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾಗಿದೆ. ಚಿತ್ರದಲ್ಲಿ ಒಳ್ಳೆಯ ಅಂಶಗಳಿವೆ. ಎಲ್ಲಾ ವರ್ಗಕ್ಕೂ ಚಿತ್ರ ಇಷ್ಟವಾಗಲಿದೆ’ ಎಂಬುದು ಗೋಕುಲ್‌ರಾಜ್ ಅವರ ಮಾತು.
ಇನ್ನು, ನಿರ್ದೇಶಕ ಜೇಕಬ್ ವರ್ಗಿಸ್ ಅವರಿಗೆ ಗೋಕುಲ್ ಫಿಲ್ಮ್ಸ್ ಚಿತ್ರದ ವಿತರಣೆ ಹಕ್ಕು ಪಡೆದಿರುವುದು ಖುಷಿ ಕೊಟ್ಟಿದೆಯಂತೆ. ಚಿತ್ರ ತೋರಿಸಿದಾಗ, ಅವರೇ ವಿತರಣೆ ಮಾಡಲು ಮುಂದಾಗಿದ್ದಾರೆ. ಪ್ರೇಕ್ಷಕರಿಗೆ ಈ ಚಿತ್ರ ಹತ್ತಿರವಾಗಲಿದೆ. ಸಾಮಾನ್ಯ ಜನರಂತೂ ಇಂತಹ ಚಿತ್ರ ಮಿಸ್ ಮಾಡಿಕೊಳ್ಳಬಾರದು. ಇದು ವಾಸ್ತವ ಸಮಾಜದಲ್ಲಿ ನಡೆಯುತ್ತಿರುವ ಅಂಶಗಳನ್ನು ಇಟ್ಟುಕೊಂಡು ಮಾಡಲಾಗಿದೆ. ಹಾಗಂತ, ಇದು ಡಿ.ಕೆ.ರವಿ ಅವರ ಕಥೆ ಇರಬಹುದಾ? ಎಂಬ ಪ್ರಶ್ನೆಗಳು ಬಂದಿವೆ. ಆದರೆ, ಇದು ಯಾರ ಕಥೆಯೂ ಅಲ್ಲ, ಒಂದು ಸಿನಿಮಾ ಮಾಡುವಾಗ, ಹಲವು ಸ್ಫೂರ್ತಿಗಳಿರುತ್ತವೆ. ಅಂಥದ್ದೇ ಸ್ಫೂರ್ತಿಯಿಂದ ಹುಟ್ಟಿರುವ ಕಥೆ ಇದು. ಚಿತ್ರ ನೋಡಿದವರಿಗೆ ಇದು ಯಾವ ರೀತಿಯ ಚಿತ್ರ ಎಂಬುದು ಗೊತ್ತಾಗುತ್ತೆ ಅಂದರು ಅವರು.
ನಾಯಕ ಸತೀಶ್ ಅವರಿಗೆ ಗೋಕುಲ್‌ರಾಜ್ ಅವರು ವಿತರಣೆ ಮಾಡುತ್ತಿದ್ದಾರೆ ಎಂಬುದನ್ನು ಕೇಳಿ ಖುಷಿಯಾಯಿತಂತೆ. ದೊಡ್ಡ ವಿತರಣೆ ಸಂಸ್ಥೆಯೊಂದು ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ. ದೊಡ್ಡ ಮೊತ್ತಕ್ಕೆ ಚಿತ್ರದ ವಿತರಣೆ ಹಕ್ಕು ಪಡೆದಿದ್ದು ಇನ್ನೊಂದು ಹೆಮ್ಮೆಯ ವಿಷಯ. ನಿರ್ಮಾಪಕರು ಈಗಾಗಲೇ ಸೇಫ್ ಆಗಿದ್ದಾರೆ. ನಮಗಂತೂ ವಿಶ್ವಾಸವಿದೆ. ವಿತರಕರಿಗೂ ಚಿತ್ರ ಗೆಲುವು ತಂದುಕೊಡಲಿ. ಚಿತ್ರದಲ್ಲಿ ನಾನು ಐಎಎಸ್ ಅಧಿಕಾರಿ ಪಾತ್ರ ಮಾಡಿದ್ದೇನೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಅವರು ಹೇಳಿದ ಹಾಗೆ ನಾನು ಕೆಲಸ ಮಾಡಿದ್ದೇನೆ. ರಿಯಲ್ ಲೈಫ್ನಲ್ಲಿ ನಾನು ಓದಿದ್ದು ಕಮ್ಮಿ. ಆದರೆ, ರೀಲ್‌ನಲ್ಲಿ ನಿರ್ದೇಶಕರು ನನ್ನನ್ನು ಜಿಲ್ಲಾಧಿಕಾರಿ ಮಾಡಿದ್ದಾರೆ. ಪಾತ್ರ ಎಲ್ಲರಿಗೂ ಇಷ್ಟ ಆಗುತ್ತೆ ಅಂದರು ಸತೀಶ್.
ನಟಿ ಸೋನುಗೌಡ ಅವರಿಲ್ಲಿ, ಜಿಲ್ಲಾಧಿಕಾರಿ ಹೆಂಡತಿ ಪಾತ್ರ ಮಾಡಿದ್ದಾರಂತೆ. ನಟ ಸರ್ದಾರ್ ಸತ್ಯ ಅವರಿಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದು, ಸಿನಿಮಾ ನೋಡಿದವರು, ನನ್ನ ಮೇಲೆ ಕೋಪಿಸಿಕೊಳ್ಳುವಷ್ಟರ ಮಟ್ಟಿಗೆ ಆ ಪಾತ್ರವಿದೆ ಅಂದರು.