ಪಣಜಿ(ಗೋವಾ):ಕಾಂಗ್ರೆಸ್ ಹಿರಿಯ ಮುಖಂಡ, ಕೇಂದ್ರ ಮಾಜಿ ಸಚಿವ, ಗಾಂಧಿ ಕುಟುಂಬದ ಆಪ್ತ ಕ್ಯಾಪ್ಟನ್ ಸತೀಶ್ ಶರ್ಮಾ(73ವರ್ಷ) ಗುರುವಾರ(ಫೆ.18, 2021) ಗೋವಾದಲ್ಲಿ ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸತೀಶ್ ಶರ್ಮಾ ಅವರು ಪತ್ನಿ, ಪುತ್ರ ಮತ್ತು ಮಗಳನ್ನು ಅಗಲಿದ್ದಾರೆ.
ಇದನ್ನೂ ಓದಿ:ಕೋವಿಡ್ ಸೋಂಕು ಹೆಚ್ಚಳ: ಮಹಾರಾಷ್ಟ್ರದ ಅಕೋಲಾ, ಅಮರಾವತಿಯಲ್ಲಿ ಮತ್ತೆ ಲಾಕ್ ಡೌನ್?
ಸತೀಶ್ ಶರ್ಮಾ ಅವರು 1993ರಿಂದ 1996ರವರೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾಗಿದ್ದರು. 1947ರ ಅಕ್ಟೋಬರ್ 11ರಂದು ಆಂಧ್ರಪ್ರದೇಶದ ಸಿಕಂದರಾಬಾದ್ ನಲ್ಲಿ ಸತೀಶ್ ಶರ್ಮಾ ಜನಿಸಿದ್ದರು.
ಶರ್ಮಾ ಪೈಲಟ್ ಆಗಿದ್ದು, ರಾಜೀವ್ ಗಾಂಧಿ ಗೆಳೆಯರಾಗಿದ್ದರು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ನಂತರ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿದ್ದರು. ಈ ಸಂದರ್ಭದಲ್ಲಿ ಪೈಲಟ್ ಆಗಿದ್ದ ಶರ್ಮಾ ರಾಜಕೀಯದ ಮೂಲಕ ತಮ್ಮ ಎರಡನೇ ಇನಿಂಗ್ಸ್ ಆರಂಭಿಸಿದ್ದರು.
1986ರಲ್ಲಿ ಶರ್ಮಾ ಅವರನ್ನು ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ರಾಜೀವ್ ಅಧಿಕಾರಾವಧಿಯಲ್ಲಿಯೇ ಶರ್ಮಾ ಹಲವು ವಿವಾದಗಳಿಗೆ ಗುರಿಯಾಗಿದ್ದರು. ರಾಜೀವ್ ಗಾಂಧಿ ಆತ್ಮೀಯ ವಲಯದಲ್ಲಿದ್ದ ಶರ್ಮಾ ರಾಜೀವ್ ಹತ್ಯೆ ನಂತರ ಅಮೇಠಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
1999ರಲ್ಲಿ ಶರ್ಮಾ ರಾಯ್ ಬರೇಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಸೋನಿಯಾ ಗಾಂಧಿ ಅಮೇಠಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಲೋಕಸಭೆ ಪ್ರವೇಶಿಸಿದ್ದರು. ಸತೀಶ್ ಶರ್ಮಾ ಅವರು ಮೂರು ಬಾರಿ ಲೋಕಸಭಾ ಸದಸ್ಯರಾಗಿ ಹಾಗೂ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.