Advertisement

ಜನಪರ ಸೇವೆ ಮಾಡಿದ ತೃಪ್ತಿ ಇದೆ: ಶಕುಂತಳಾ ಶೆಟ್ಟಿ 

03:12 PM Dec 25, 2017 | Team Udayavani |

ನಿಡ್ಪಳ್ಳಿ : ಎಲ್ಲರನ್ನೂ ತನ್ನ ಸಹೋದರ, ಸಹೋದರಿಯರೆಂದು ಭಾವಿಸಿ ಯಾವುದೇ ರಾಜಕೀಯ ಮಾಡದೆ ಪಕ್ಷಾತೀತವಾಗಿ ಕೆಲಸ ಮಾಡಿ. ನನಗೆ ಜನರ ಸೇವೆ ಮಾಡಲು ಸಿಕ್ಕಿದ ಅವಕಾಶದಲ್ಲಿ ಜನಪರ ಸೇವೆ ಮಾಡಿದ ತೃಪ್ತಿ ಇದೆ ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ನುಡಿದರು.

Advertisement

ಡಿ. 23ರಂದು ಬೆಟ್ಟಂಪಾಡಿ ಗ್ರಾಮದ ಕಕ್ಕೂರು ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಬೆಳೆಸಿದರೆ ಮುಂದೆ ಉತ್ತಮ ನಾಗರಿಕರಾಗಿ ಬದುಕಲು ದಾರಿದೀಪವಾಗುತ್ತದೆ. ಅಂತಹ ಪುಣ್ಯದ ಕೆಲಸವನ್ನು ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಅಭಿನಂದನಾರ್ಹರು. ಸರಕಾರದ ಮಾತೃಪೂರ್ಣ ಯೋಜನೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರಲ್ಲದೆ ಈ ನೂತನ ಕಟ್ಟಡ ನಿರ್ಮಿಸಿದವರಿಗೆ ಮತ್ತು ಸಹಕರಿಸಿದವರನ್ನು ಅಭಿನಂದಿಸಿದರು. ಆರ್‌.ಐ.ಡಿ.ಎಫ್. ಇಲಾಖೆಯ 9.17 ಲಕ್ಷ ರೂ., ಎಂ.ಎನ್‌.ಆರ್‌. ಇ.ಜಿ. ಯೋಜನೆಯ 5 ಲಕ್ಷ ರೂ. ಅನುದಾನದಿಂದ ಒಟ್ಟು 14.17 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ.

ಮನೆ ಮನೆಗೆ ತಲುಪಿಸಿದರೆ ಯಶಸ್ವಿ
ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ದ.ಕ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗಾಗಿ ಸರಕಾರ ಜಾರಿಗೊಳಿಸಿದ ಮಾತೃಪೂರ್ಣ ಯೋಜನೆ ಉತ್ತರ ಕರ್ನಾಟಕದಲ್ಲಿ ಯಶಸ್ಸು ಕಂಡಿದ್ದರೂ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಯಶಸ್ಸು ಕಂಡಿಲ್ಲ. ಇಲ್ಲಿ ಗುಡ್ಡಗಾಡು ಮತ್ತು ಕೇಂದ್ರ ದೂರ ಇರುವುದರಿಂದ ಮಹಿಳೆಯರು ಹೋಗದ ಕಾರಣ ಮನೆಗೆ ತಲುಪಿಸಲು ವ್ಯವಸ್ಥೆಗೊಳಿಸಿದರೆ ಯಶಸ್ವಿಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು.

ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷೆ ಉಮಾವತಿ ಸುಬ್ಬಪ್ಪ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಭವಾನಿ. ಕೆ. ಸದಸ್ಯೆ ಭವಾನಿ ಪಿ., ತಾ.ಪಂ.ಸದಸ್ಯೆ ಮೀನಾಕ್ಷಿ ಮಂಜುನಾಥ್‌, ತಾ| ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ. ಹೆಗಡೆ, ಶಿಶು ಅಭಿವೃದ್ಧಿ ಇಲಾಖೆಯ ವಲಯ ಮೆಲ್ವೀಚಾರಕಿ ವನಿತಾ ಉಪಸ್ಥಿತರಿದ್ದರು. ಅಂಗನವಾಡಿ ಪುಟಾಣಿಗಳು ನಾಡಗೀತೆ ಹಾಡಿ, ಬಾಲವಿಕಾಸ ಸಮಿತಿ ಅಧ್ಯಕ್ಷ ರಮೇಶ್‌ ಶೆಟ್ಟಿ ಕೊಮ್ಮಂಡ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಶ್ಯಾಮಲಾ ಮಾಧವ ಪೂಜಾರಿ ಪ್ರಸ್ತಾವಿಸಿದರು. ಶಾಲಿನಿ ಕಕ್ಕೂರು ವಂದಿಸಿ, ನವೋದಯ ಪ್ರೌಢಶಾಲಾ ಶಿಕ್ಷಕ ರಾಧಾಕೃಷ್ಣ ಕೋಡಿ ನಿರೂಪಿಸಿದರು.

ಬಾಬು ಪೂಜಾರಿ, ಪ್ರೇಮಲತಾ ಜೆ. ರೈ, ಸತ್ಯನಾರಾಯಣ ಮಣಿಯಾಣಿ, ಜಮೀಳಾ ಸಿದ್ದಿಕ್‌, ಸುಮಿತ್ರಾ ಪಾಣಾಜೆ,
ಗಣಪತಿ ಭಟ್‌, ಅಚ್ಯುತ ಭಟ್‌, ಜಯಪ್ರಕಾಶ್‌, ಅಶ್ರಫ್ ಅತಿಥಿಗಳಿಗೆ ಪುಷ್ಪ ನೀಡಿ ಗೌರವಿಸಿದರು. ಅಂಗನವಾಡಿ
ಸಹಾಯಕಿ ಜನಿತಾ ಸೇರಿದಂತೆ ಸ್ತ್ರೀಶಕ್ತಿ ಸಂಘದ ಸದಸ್ಯರು, ಹೆತ್ತವರು, ಬಾಲವಿಕಾಸ ಸಮಿತಿ ಸದಸ್ಯರು ಸಹಕರಿಸಿದರು.

Advertisement

ಸಮ್ಮಾನ
ಕೇಂದ್ರವನ್ನು ನಿಗದಿತ ಸಮಯದಲ್ಲಿ ನಿರ್ಮಿಸಿ ಕೊಟ್ಟ ಪಿಡಬ್ಲ್ಯುಡಿ ಗುತ್ತಿಗೆದಾರ ಜನಾರ್ದನ ರೈ ಆನಾಜೆ, ನಿರ್ಮಿತಿ ಕೇಂದ್ರದ ಎಂಜಿನಿಯರ್‌ ಹರೀಶ್‌ ಹಾಗೂ ಎನ್‌. ಆರ್‌.ಇ.ಜಿ.ಯ ಎಂಜಿನಿಯರ್‌ ಇರ್ಷಾದ್‌ ಅವರನ್ನು ಜಿ. ಪಂ. ಅಧ್ಯಕ್ಷೆ ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next