Advertisement
ಈ ಹಿನ್ನೆಲೆಯಲ್ಲಿ ಸತ್ಯರಾಜ್, ಕನ್ನಡಿಗರ ಕ್ಷಮೆ ಕೋರುವ ಮೂಲಕ “ಬಾಹುಬಲಿ 2′ ಚಿತ್ರ ಬಿಡುಗಡೆಗೆ ಅನುವು ಮಾಡಿಕೊಡಿ ಎಂದು ಮನವಿ ಮಾಡಿದ್ದಾರೆ. ಸತ್ಯರಾಜ್ ವೀಡಿಯೋ ಮೂಲಕ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದು, ಅವರ ಹೇಳಿಕೆಯ ಸಾರ ಹೀಗಿದೆ. “ಕಳೆದ 9 ವರ್ಷಗಳ ಹಿಂದೆ ಕಾವೇರಿ ವಿವಾದ ಎದ್ದಾಗ, ನಾನು ಕನ್ನಡಿಗರ ವಿರುದ್ಧ ಹೇಳಿಕೆ ನೀಡಿದ್ದೆ. ನನ್ನ ಮಾತುಗಳಿಂದ ಕನ್ನಡಿಗರಿಗೆ ನೋವಾಗಿದೆ ಎಂಬುದು ಅರ್ಥವಾಗಿದೆ.
Related Articles
Advertisement
“ಬಾಹುಬಲಿ-2′ ಚಿತ್ರದಲ್ಲಿ ಸತ್ಯರಾಜ್ ನಟಿಸಿರುವುದರಿಂದ ಆ ಚಿತ್ರ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ಕೊಟ್ಟಿದ್ದವು. ಅದೂ ಅಲ್ಲದೆ, ಏ.28 ರಂದು ಬೆಂಗಳೂರು ಬಂದ್ ನಡೆಸಲು ನಿರ್ಧರಿಸಿದ್ದವು. ಈ ನಡುವೆ, ನಿರ್ದೇಶಕ ರಾಜಮೌಳಿ ಅವರು, ವೀಡಿಯೋ ಮೂಲಕ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಆಗ ಕನ್ನಡ ಪರ ಸಂಘಟನೆಗಳು, ನಿರ್ದೇಶಕರ ಬಗ್ಗೆ ಗೌರವ ಇದೆ. ಆದರೆ, ಸತ್ಯರಾಜ್ ಹೇಳಿಕೆಯಿಂದ ನೋವಾಗಿದ್ದು, ಅವರು ಕನ್ನಡಿಗರಲ್ಲಿ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದವು.
ಕನ್ನಡಿಗರ ಮಾತು ಆಲಿಸಿದ ಸತ್ಯರಾಜ್, ಈಗ ಕ್ಷಮೆಯಾಚಿಸಿದ್ದಾರೆ. ಆದರೆ, “ಬಾಹುಬಲಿ-2′ ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ಅನುವು ಮಾಡಿಕೊಡುತ್ತವೆಯಾ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಯಾಕೆಂದರೆ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಶುಕ್ರವಾರ ಮಧ್ಯಾಹ್ನ ಆ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದ್ದರು. ಅದಾದ ಬಳಿಕ ಶನಿವಾರ (ಇಂದು) ನಡೆಸುವ ಪತ್ರಿಕಾಗೋಷ್ಠಿಯಲ್ಲಿ ಚಿತ್ರ ಬಿಡುಗಡೆಯ ವಿಷಯವಾಗಿ ಮಾತನಾಡುವುದಾಗಿ ಹೇಳಿದ್ದಾರೆ.
ಚರ್ಚೆ ನಂತರ ತೀರ್ಮಾನ: ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಕನ್ನಡ ಹೋರಾಟಗಾರ ಸಾ.ರಾ.ಗೋವಿಂದು, “ಸತ್ಯರಾಜ್ ಕ್ಷಮೆ ಕೇಳಿದ್ದಾರೆ ನಿಜ. ಆದರೆ, “ಬಾಹುಬಲಿ-2′ ಚಿತ್ರ ಬಿಡುಗಡೆ ವಿಚಾರವಾಗಿ, ಕನ್ನಡ ಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳ ಜತೆ ಚರ್ಚೆ ಮಾಡಬೇಕಿದೆ. ಶನಿವಾರ (ಇಂದು) ಸಭೆ ನಡೆಸಿ, ಅಲ್ಲಿ ಎಲ್ಲರ ತೀರ್ಮಾನ ಏನು ಬರುತ್ತದೆಯೋ ಅದಕ್ಕೆ ಬದ್ಧವಾಗುತ್ತೇವೆ.
ಈಗಾಗಲೇ ನಿರ್ದೇಶಕ ರಾಜಮೌಳಿ ಅವರು ಕ್ಷಮೆ ಕೇಳಿದ್ದಾರೆ. ಆದರೆ, ಅವರು ಕ್ಷಮೆ ಕೇಳುವ ಅಗತ್ಯವಿಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ. ಸತ್ಯರಾಜ್ ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿದ್ದರಿಂದ ಅವರ ವಿರುದ್ಧ ಮಾತ್ರ ನಮ್ಮ ಹೋರಾಟವಾಗಿತ್ತು. ಈಗ ಕ್ಷಮೆಯಾಚಿಸಿದ್ದಾರೆ. ಚಿತ್ರ ಬಿಡುಗಡೆ ಕುರಿತು ಶನಿವಾರ ತೀರ್ಮಾನವಾಗಲಿದೆ’ ಎಂದು ಹೇಳಿದ್ದಾರೆ.
ಮೊದಲು ಸಾಬೀತುಪಡಿಸಲಿದುಡ್ಡಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ತಮ್ಮ ಮೇಲೆ ಅಪಪ್ರಚಾರ ಮಾಡಿರುವ ಪ್ರಶಾಂತ್ ವಿರುದ್ಧ ಸಾ.ರಾ. ಗೋವಿಂದು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಮೊದಲು ತಮ್ಮ ಮೇಲಿನ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲಿ ಎಂದು ಗೋವಿಂದು ಸವಾಲು ಹಾಕಿದ್ದಾರೆ. “ನಮ್ಮ ಮೇಲೆ ವಿನಾಕಾರಣ ಅಪಪ್ರಚಾರ ಮಾಡಿರುವ ಪ್ರಶಾಂತ್, ದುಡ್ಡಿಗೋಸ್ಕರ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಆ ವ್ಯಕ್ತಿ ಮೇಲೆ ನಾನು ದೂರು ಕೊಟ್ಟಿದ್ದೇನೆ. ಒಂದು ವೇಳೆ ನಾವು ಹಣಕ್ಕಾಗಿ ಈ ಹೋರಾಟ ಮಾಡಿದ್ದು ಎಂದು ಸಾಬೀತುಪಡಿಸಿದರೆ, ಎಲ್ಲದ್ದಕ್ಕೂ ಸಿದ್ಧವಾಗಿದ್ದೇವೆ. ಹಾಗೊಂದು ವೇಳೆ ಸಾಬೀತುಪಡಿಸದಿದ್ದರೆ, ನನ್ನ ಬೂಟು ಪಾಲಿಷ್ ಮಾಡಬೇಕು’ ಎಂದು ಸಾ.ರಾ.ಗೋವಿಂದು ಪ್ರಶಾಂತ್‌ಗೆ ಸವಾಲೆಸೆದರು.