ಬಳ್ಳಾರಿ: ಕನ್ನಡಕ್ಕೆ, ಕನ್ನಡಿಗರಿಗೆ, ಯಶ್ ಅಭಿಮಾನಿಗಳಿಗೆ ಯಾವುದೇ ರೀತಿಯಲ್ಲಿ ಅವಮಾನ ಮಾಡಿಲ್ಲ ಎಂದು ಬಳ್ಳಾರಿಯಲ್ಲಿ ಪುಷ್ಪ – 2 ವಿತರಕ, ನಟರಾಜ್ ಚಿತ್ರಮಂದಿರ ಮಾಲೀಕ ಲಕ್ಷ್ಮೀಕಾಂತ ರೆಡ್ಡಿ ಸ್ಪಷ್ಟನೆ ನೀಡಿದರು.
ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಹೈದರಾಬಾದ್ ನಲ್ಲಿ ನಡೆದ ಪುಷ್ಟ- 2 (Pushpa -2) ಸಿನಿಮಾ ವಿತರಕರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದ ಲಕ್ಷ್ಮೀಕಾಂತ ರೆಡ್ಡಿ ಅವರು, ಪುಷ್ಪ – 2 ಚಿತ್ರವು ಕೆಜಿಎಫ್ ಚಿತ್ರವನ್ನು ಮೀರಲಿದೆ ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.
ಓರ್ವ ವಿತರಕನಾಗಿ ಪುಷ್ಪ – 2 ಸಿನಿಮಾ ಹೆಚ್ಚು ಹೆಚ್ಚು ಪ್ರದರ್ಶನ ಕಾಣಲಿ ಎಂದು ಹೇಳಿದ್ದೇನೆ. ಬಾಹುಬಲಿ ಸಿನಿಮಾ ರಿಕಾರ್ಡ್ ಯಾರು ಬ್ರೇಕ್ ಮಾಡಲ್ಲ ಎಂದಿದ್ದಾಗ ಕೆಜಿಎಫ್ ಸಿನಿಮಾ ಆ ದಾಖಲೆ ಮುರಿದಿತ್ತು. ಒಂದು ಸಿನಿಮಾ ಮತ್ತೊಂದು ಸಿನಿಮಾ ದಾಖಲೆ ಮುರಿಯಬೇಕು. ಇದು ಸಿನಿಮಾ ಇಂಡಸ್ಟ್ರಿ ಯಲ್ಲಿ ಸಾಮಾನ್ಯವಾಗಿ ಹೇಳುವ ಮಾತು. ಮುಂದೆ ಪುಷ್ಪ 2 ದಾಖಲೆಯನ್ನು ಟಾಕ್ಸಿಕ್ ಸಿನಿಮಾ ಮತ್ತು ಕಾಂತಾರ 2 ಮುರಿಯಲಿ ಎಂದು ಬಯಸುವೆ ಎಂದರು.
ಕನ್ನಡದ ಅದೆಷ್ಟೋ ಸಿನಿಮಾಗಳನ್ನು ತೆಲುಗಿನಲ್ಲಿ ನಾನೇ ವಿತರಣೆ ಮಾಡಿದ್ದೇನೆ. ಬಳ್ಳಾರಿಯಲ್ಲಿರುವ ನಮ್ಮ ಬಹುತೇಕ ಚಿತ್ರ ಮಂದಿರಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶನ ಮಾಡುತ್ತೇನೆ. ಸದ್ಯ ಇಡೀ ಭಾರತದ ಸಿನಿಮಾ ಇಂಡಸ್ಟ್ರಿ ಆಳುತ್ತಿರುವುದು ಸೌತ್ ಸಿನಿಮಾಗಳು. ಒಂದೊಂದು ಸಿನಿಮಾ ಒಂದೊಂದು ರೀತಿಯಲ್ಲಿ ಬಿಗ್ ಹಿಟ್ ಅಗಲಿ ಎಂದು ಬಯಸುವೆ. ಯಾರಿಗೂ ನೋವಾಗುವ ಉದ್ದೇಶದಿಂದ ಹೇಳಿರುವ ಮಾತಲ್ಲ. ಕನ್ನಡ ಚಿತ್ರೋದ್ಯಮ ನಂ1 ಸ್ಥಾನದಲ್ಲಿ ಇರಬೇಕೆಂದು ಬಯಸುವೆ ಎಂದು ಲಕ್ಷ್ಮೀಕಾಂತ ರೆಡ್ಡಿ ಹೇಳಿದರು.