ದಾವಣಗೆರೆ: ಬಾಂಬೆ ಗೆಳೆಯರು ಮತ್ತೆ ಕಾಂಗ್ರೆಸ್‌ಗೆ ಬರುತ್ತಾರೆಂಬ ಸತೀಶ್ ಜಾರಕಿಹೊಳಿ ಹೇಳಿಕೆ ಮೂರ್ಖತನದ ಪರಮಾವಧಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಕಿಡಿಕಾರಿದ್ದಾರೆ.
ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಗೆ ಹೋದ ಕಾಂಗ್ರೆಸ್ ಶಾಸಕರೆಲ್ಲ ಮರಳಿ ಬರುತ್ತೇವೆಂದು ಸತೀಶ್ ಜಾರಕಿಹೊಳಿಯವರಿಗೆ ಕನಸು ಬಿದ್ದಿದೆಯಾ? ಅವರ ಅಣ್ಣವರು (ರಮೇಶ್ ಜಾರಕಿಹೊಳಿ) ನಮ್ಮ ಜತಗೆ ಇದ್ದವರು ಅವರೇನಾದರೂ ಹೇಳಿದ್ದಾರಾ? ಎಂದು ವ್ಯಂಗ್ಯವಾಡಿದರು.
ಈಶ್ವರಪ್ಪ ಅವರು ರಾಷ್ಟ್ರಧ್ವಜ ತೆಗೆಯುವುದಾಗಿ ಹೇಳಿಯೇ ಇಲ್ಲ. ಅದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಆದರೆ, ಕಾಂಗ್ರೆಸ್‌ನವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅವರಿಗೆ ಹಿಜಾಬ್ ಬೂತ್ ಕಾಡುತ್ತಿದೆ. ಅದರ ವಿವಾದ ಸೃಷ್ಟಿಸಿ ದೇಶದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ವಿಷ ಹಾಕಿ, ಅವರ ಮನಸ್ಸು ಒಡೆದಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ದಕ್ಷಿಣ ಕಾಶ್ಮೀರ:ಉಗ್ರರ ವಿರುದ್ಧ ಕಾರ್ಯಾಚರಣೆ,ಇಬ್ಬರು ಯೋಧರು ಹುತಾತ್ಮ, ಓರ್ವ ಉಗ್ರನ ಹತ್ಯೆ
ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ ಮಾಡುವ ಮೂಲಕ ಕಾಂಗ್ರೆಸ್, ಸಾರ್ವಜನಿಕ ಹಣ ಪೋಲು ಮಾಡುತ್ತಿದೆ. ಕಾಂಗ್ರೆಸ್‌ನವರು ವಿಷಯಾಧಾರಿತ ಚರ್ಚೆ ಇಲ್ಲದೇ ಕಲಾಪ ತಿಂದಿದ್ದಾರೆ. ಸಾರ್ವಜನಿಕರ ಹಣ ಎಷ್ಟು ಪೋಲಾಗುತ್ತಿದೆ ಎಂದು ಯಾರೂ ವಿಚಾರ ಮಾಡುತ್ತಿಲ್ಲ. ರಾತ್ರಿಯೆಲ್ಲ ವಿಧಾನಸಭೆಯಲ್ಲಿ ಪ್ರತಿಭಟನೆ ಮಾಡಿ ಕಲಾಪ ನಡೆಸಲು ಅಡ್ಡಿ ಮಾಡುತ್ತಿರುವುದು ಯಾವ ಸಂಸ್ಕೃತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆ, ಬೇಡಿಕೆ ಬಗ್ಗೆ ಚರ್ಚೆ ಮಾಡಲು ವಿಧಾನಸಭೆಗೆ ಹೋಗಬೇಕು. ವಿರೋಧಿಸುವ ವಿಷಯವಿದ್ದರೆ ವಿರೋಧ ಮಾಡಿ, ಸರ್ಕಾರದ ಗಮನಸೆಳೆಯಲಿ. ಅದನ್ನು ಬಿಟ್ಟು ಗದ್ದಲ ಮಾಡುವುದಕ್ಕಾಗಿಯೇ ಕಾಂಗ್ರೆಸ್‍ನವರು ವಿಧಾನಸಭೆಗೆ ಹೋಗುತ್ತಿದ್ದಾರೆ ಎಂದರು.